ಮಡಿಕೇರಿ, ಮಾ. ೭: ಸಾಧಕರು, ಸಮಾಜಕ್ಕೆ ಆದರ್ಶಪ್ರಾಯರಾದವರಿಗೆ ಎಂದಿಗೂ ಗೌರವಾಧಾರಗಳು ಇದ್ದೇ ಇರುತ್ತವೆ ಎಂಬುದಕ್ಕೆ ಸಾಕ್ಷಿ ಎಂಬAತೆ ಕೊಡಗಿನ ಸುಪುತ್ರ ವೀರಸೇನಾನಿ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರು ಅಜರಾಮರರಂತೆ ಮಾರ್ಚ್ ೮ರಂದು (ಇಂದು) ಮತ್ತೆ ತಮ್ಮ ತವರು ಜಿಲ್ಲೆಗೆ ಬರುತ್ತಿದ್ದಾರೆ. ಇವರು ಇಂದು ಜೀವಂತವಾಗಿ ಇಲ್ಲದಿರಬಹುದು. ಆದರೆ ದೇಶದ ಸೇನಾ ಇತಿಹಾಸದಲ್ಲಿ ಎಂದೆAದೂ ಜೀವಂತವಾಗಿರುವ ಧೀಮಂತ ವ್ಯಕ್ತಿ.

ಜಿಲ್ಲಾ ಕೇಂದ್ರ ಮಡಿಕೇರಿಯ ಚಿಕ್ಕಪೇಟೆ ಜನರಲ್ ತಿಮ್ಮಯ್ಯ ವೃತ್ತ ಎಂದೇ ಕರೆಯಲ್ಪಡುತ್ತದೆ. ಈ ವೃತ್ತದಲ್ಲಿ ಕಳೆದ ಐವತ್ತು ವರ್ಷಗಳಿಂದ ತಲೆ ಎತ್ತಿ ನಿಂತಿದ್ದ ಅಜಾನುಭಾಹುವಾಗಿ , ಕಂಚಿನ ಪ್ರತಿಮೆಯ ರೂಪದಲ್ಲಿ ಇದ್ದ ತಿಮ್ಮಯ್ಯ ಅವರ ಪ್ರತಿಮೆ ಒಂದು ಆಕರ್ಷಣೆಯಾಗಿತ್ತು. ಆದರೆ ದುರದೃಷ್ಟವಶಾತ್ ಆಗಸ್ಟ್ ೨೧ರಂದು ಬೆಳ್ಳಂಬೆಳಿಗ್ಗೆ ಯಾರೂ ಊಹಿಸದಿದ್ದ ಮಾದರಿಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಒಂದು ಈ ಪ್ರತಿಮೆ ಇದ್ದ ಸ್ತಂಭಕ್ಕೆ ಡಿಕ್ಕಿಯಾಗಿ ಪ್ರತಿಮೆ ಧರೆಗುರುಳಿತ್ತು.

ಸಣ್ಣಪುಟ್ಟ ಹಾನಿಗಳೊಂದಿಗೆ ನೆಲಕ್ಕೆ ಬಿದ್ದಿದ್ದ ಪ್ರತಿಮೆಯನ್ನು ನಂತರದಲ್ಲಿ ಅವರ ಹುಟ್ಟಿದ ಮನೆ ಇದೀಗ ವಸ್ತು ಸಂಗ್ರಹಾಲಯವಾಗಿರುವ `ಸನ್ನಿಸೈಡ್’ಗೆ ಸ್ಥಳಾಂತರಿಸಿ, ಆ ಬಳಿಕ ಮೈಸೂರಿನ ಶಿಲ್ಪಕಲಾ ಅಕಾಡೆಮಿಗೆ ಸಾಗಿಸಲಾಗಿತ್ತು. ಈ ಘಟನೆ ನಡೆದು ಇದೀಗ ಏಳನೆಯ ತಿಂಗಳಿನಲ್ಲಿ ಮತ್ತೆ ತಿಮ್ಮಯ್ಯ ಜಿಲ್ಲೆಗೆ ಬರುತ್ತಿದ್ದಾರೆ. ಮೈಸೂರಿನಿಂದ ಮೆರವಣಿಗೆಯ ಮೂಲಕ ಜೀವನದ ಸಾಧನೆಯ ಮಾಹಿತಿಗಳ ಸಹಿತವಾಗಿ ಮಗದೊಮ್ಮೆ ಇದೇ ವೃತ್ತದಲ್ಲಿ ತಿಮ್ಮಯ್ಯ ಅವರ ಪ್ರತಿಮೆ ಹೊಸ ಆಕರ್ಷಣೆಯೊಂದಿಗೆ ಮರು ಅಳವಡಿಕೆಯಾಗುತ್ತಿದೆ. ಕೆಲವರು ಮಾತಿಗೆ ಹೇಳುವಂತೆ ಐವತ್ತು ವರ್ಷಗಳ ಹಿಂದಿನ ಕಥೆ ಈಗಿನ ಯುವ ಪೀಳಿಗೆಗೆ ಅರಿವಿರಲಿಲ್ಲ. ಇದೀಗ ಆಕಸ್ಮಿಕ ಘಟನೆಯ ಪರಿಣಾಮದಿಂದ ತಿಮ್ಮಯ್ಯ ಅವರು ಮತ್ತೆ ಅವತರಿಸಿ ಬರುತ್ತಿರುವುದು ಸ್ವಾಗತಾರ್ಹವೂ - ಯುವ ಜನಾಂಗಕ್ಕೆ ಮಾರ್ಗದರ್ಶನವೂ ಆಗುತ್ತಿರುವುದು ವಿಶೇಷ ಎಂಬAತಾಗಿದೆ. ಸೇನಾ ಜಿಲ್ಲೆ ಖ್ಯಾತಿಯ ಕೊಡಗಿನಲ್ಲಿ ಇದೊಂದು ಭಾವನಾತ್ಮಕ ವಿಚಾರವೂ ಹೌದು.

ಈ ಹಿಂದೆಯು ಮರೆಯಾಗಿ ಮತ್ತೆ ಮೇಲೆದ್ದಿದ್ದರು...

ಸೇನಾ ಧ್ರುವತಾರೆ ಖ್ಯಾತಿಯ ತಿಮ್ಮಯ್ಯ ಅವರು ೧೮.೧೨.೧೯೬೫ರಲ್ಲಿ ಸೈಪ್ರಸ್‌ನಲ್ಲಿ ವಿಧಿವಶರಾಗಿದ್ದರು. ಆದರೆ ಮಹಾನ್ ಸೇನಾನಿಯೊಬ್ಬರಿಗೆ ಸಿಗಬೇಕಾಗಿದ್ದ ಗೌರವ ಆ ಸಂದರ್ಭ ಅವರಿಗೆ ದೊರೆತಿರಲಿಲ್ಲ. ಪಾರ್ಥಿವ ಶರೀರವನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿರುವ ಹರಿಶ್ಚಂದ್ರ ಘಾಟ್‌ನಲ್ಲಿ ಸಾಮಾನ್ಯ ವ್ಯಕ್ತಿಯಂತೆ ಮಣ್ಣು ಮಾಡಲಾಗಿತ್ತು. ವಿಶ್ವವೇ ಗೌರವ ನೀಡುವ ಸೇನಾನಿಯಾಗಿದ್ದ ತಿಮ್ಮಯ್ಯ ಅವರು ಸೈಪ್ರಸ್‌ನಂತಹ ದೇಶದ ಸೇನೆಯನ್ನೂ ಅಚ್ಚುಕಟ್ಟುಗೊಳಿಸಿದ್ದ ಹಿರಿಮೆ ಹೊಂದಿದ್ದರು. ಈ ಸಂದರ್ಭದಲ್ಲಿ ಕ್ಯಾಪ್ಟನ್ ರ‍್ಯಾಂಕ್‌ನಲ್ಲಿದ್ದ ಅಲ್ಲಿನ ಅಧಿಕಾರಿಯೊಬ್ಬರು ಜನರಲ್ ಹುದ್ದೆಗೆ ಏರಿದ ಸಂದರ್ಭ ಭಾರತಕ್ಕೆ ಆಗಮಿಸಿ ತಮ್ಮ ಸೇನಾ ಗುರುವಿಗೆ ಗೌರವ ನಮನ ಸಲ್ಲಿಸಲು ಮುಂದಾಗಿದ್ದರು. ಆದರೆ ವಿಪರ್ಯಾಸವೆಂಬAತೆ ಆ ಸೇನಾನಿಗೆ ಇವರ ಬಗೆಗಿನ ಮಾಹಿತಿಯೇ ದೊರಕಿರಲಿಲ್ಲ. ಬಳಿಕ ಇವರು ಮಾಹಿತಿ ಕಲೆ ಹಾಕಿದಾಗ ತಿಮ್ಮಯ್ಯ ಅವರ ಶರೀರವನ್ನು ಸಾಮಾನ್ಯ ವ್ಯಕ್ತಿಯಂತೆ ಮಣ್ಣು ಮಾಡಿದ್ದು ಅರಿವಾಗಿದೆ. ಆ ಸ್ಥಳಕ್ಕೆ ಭೇಟಿಯಿತ್ತಾಗ ಜಾಗ ಕಾಡಿನಿಂದ ಆವೃತ್ತವಾಗಿ ಹೀನಾಯ ಸ್ಥಿತಿಯಲ್ಲಿದ್ದದನ್ನು ಗಮನಿಸಿ ಸೈಪ್ರಸ್‌ನ ಅಧಿಕಾರಿ ಕಂಬನಿ ಮಿಡಿದಿದ್ದರು. ಇಂತಹ ಅವಮಾನದ ಬದಲು ಹೂತಿರುವ ದೇಹವನ್ನು ನಮಗೆ ಹಸ್ತಾಂತರಿಸಿ. ನಾವು ಸೈಪ್ರಸ್‌ನಲ್ಲಿ ಅವರಿಗೆ ಸೂಕ್ತ ಗೌರವದ ಸ್ಥಾನ ನೀಡುತ್ತೇವೆ ಎಂಬುದಾಗಿ ಅವರು ಆಕ್ರೋಶವನ್ನು ಹೊರ ಹಾಕಿದ್ದರು. ಅಲ್ಲದೆ ಮೃತದೇಹವನ್ನು ಸೈಪ್ರಸ್‌ನಿಂದ ರವಾನಿಸಿದಾಗ ಅದು ಬಹಳಷ್ಟು ಕಾಲ ಹಾಳಾಗದ ರೀತಿಯಲ್ಲಿ ವೈಜ್ಞಾನಿಕವಾಗಿ ಪ್ಯಾಕಿಂಗ್ ಮಾಡಲಾಗಿತ್ತು ಎಂಬುದನ್ನು ಅವರು ತಿಳಿಸಿದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸಾರ್ವಜನಿಕವಾಗಿ ಒತ್ತಡ ಆರಂಭಗೊAಡು ಬಳಿಕ ಸೇನೆ ಹಾಗೂ ಸರಕಾರದ ತೀರ್ಮಾನದಂತೆ ವಿಲ್ಸನ್ ಗಾರ್ಡನ್‌ನ ರುದ್ರಭೂಮಿಯಿಂದ ಶವಪೆಟ್ಟಿಗೆಯನ್ನು ಹೊರ ತೆಗೆದು ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಸೇನೆೆಗೆ ಸಂಬAಧಿಸಿದ ಎ.ಎಸ್.ಸಿ. ಸೆಂಟರ್‌ಗೆ ಅಲಂಕೃತ ಮಿಲಿಟರಿ ವಾಹನದಲ್ಲಿ ಭಾರೀ ಮೆರವಣಿಗೆ ಸಹಿತವಾಗಿ ಮತ್ತೊಮ್ಮೆ ಗೌರವಯುತವಾಗಿ ಮಣ್ಣು ಮಾಡಲಾಗಿತ್ತು ಎಂಬುದು ತಿಮ್ಮಯ್ಯ ಅವರ ಸಾಧನೆಯ ಐತಿಹ್ಯ. ದೇಶದ ಸೇನಾ ಪಡೆಯ ಜನರಲ್ ಆಗಿದ್ದವರೊಬ್ಬರ ಮೃತದೇಹವನ್ನು ಮತ್ತೆ ಹೊರ ತೆಗೆದು ಈ ರೀತಿ ಗೌರವ ನೀಡುವ ಮೂಲಕ ಮಗದೊಮ್ಮೆ ಮಣ್ಣು ಮಾಡಿರುವ ಇತಿಹಾಸ ದೇಶದಲ್ಲಿ ಇವರೊಬ್ಬರದ್ದೇ ಆಗಿದೆ.

ಇದೀಗ ಬಸ್ ಡಿಕ್ಕಿಯಾಗಿ ಹಾನಿಗೀಡಾಗಿದ್ದ ಪ್ರತಿಮೆಯನ್ನು ಮೈಸೂರಿಗೆ ಸಾಗಿಸಿ ಮರು ಕಾಯಕಲ್ಪದೊಂದಿಗೆ ಮತ್ತೊಮ್ಮೆ ಅದ್ದೂರಿ ಮೆರವಣಿಗೆ ಸಹಿತವಾಗಿ ತವರು ಜಿಲ್ಲೆಯಲ್ಲಿ ಮತ್ತೆ ಅಳವಡಿಸುತ್ತಿರುವುದೂ ಒಂದು ಸೋಜಿಗದ ಇತಿಹಾಸವಾದರೂ ಆದರ್ಶಪ್ರಾಯರಿಗೆ ಸಮಾಜದಲ್ಲಿ ಎಂದೂ ಗೌರವ ಇರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ.

- ಕಾಯಪಂಡ ಶಶಿ ಸೋಮಯ್ಯ