ಬಾಳೆಲೆ, ಮಾ. ೬: ಬಾಳೆಲೆ ಗ್ರಾಮ ಪಂಚಾಯಿತಿ ಗ್ರಾಮ ಸಭೆಯು ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುಕ್ಕಾಟಿರ ಜಾನಕಿ ಕಾವೇರಪ್ಪನವರ ಅಧ್ಯಕ್ಷತೆಯಲ್ಲಿ ಬಾಳೆಲೆ ಕೊಡವ ಸಮಾಜದಲ್ಲಿ ನಡೆಯಿತು.
ಪ್ರಮುಖವಾಗಿ ಕೇಳಿಬಂದ ನೀರಿನ ಸಮಸ್ಯೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಅಧ್ಯಕ್ಷರು ಬಿಸಿಲಿನ ಬೇಗೆ ದಿನೇ ದಿನೇ ಹೆಚ್ಚುತ್ತಿದ್ದು ನೀರಿನ ಕೊರತೆಯನ್ನು ನಿಭಾಯಿಸಲು ಗ್ರಾಮ ಪಂಚಾಯಿತಿ ನಿರಂತರ ಶ್ರಮ ವಹಿಸುತಿದ್ದು ಪಂಚಾಯಿತಿ ಆಡಳಿತದೊಂದಿಗೆ ಗ್ರಾಮಸ್ಥರು ಸಹಕರಿಸುವಂತೆ ಕರೆ ನೀಡಿದರು. ಇದಕ್ಕೆ ಧ್ವನಿಗೂಡಿಸಿದ ಗ್ರಾಮ ಪಂಚಾಯಿತಿ ಸದಸ್ಯರಾದ ಅದೇಂಗಡ ವಿನು ಉತ್ತಪ್ಪ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯು ಸರ್ಕಾರ ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ಸದಾ ಸನ್ನದ್ಧವಾಗಿದೆಯೆಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಪೋಡಮಾಡ ಸುಖೇಶ್ ಭೀಮಯ್ಯ ಅವರು ಜಲ್ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಯು ಬಾಳೆಲೆ ಮತ್ತು ದೇವನೂರು ಭಾಗದಲ್ಲಿ ಪ್ರಗತಿಯಲ್ಲಿದ್ದು ಈ ಕಾಮಗಾರಿ ಪೂರ್ಣಗೊಂಡ ನಂತರ ನೀರು ಪೂರೈಕೆ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ಕಾಣಲಿದೆಯೆಂದು ಮಾಹಿತಿ ನೀಡಿದರು. ನರೇಗಾ ಯೋಜನೆ, ಸಾರ್ವಜನಿಕ ಶೌಚಾಲಯ, ತೋಟಗಾರಿಕೆ, ಅಸ್ಪತ್ರೆ ಮತ್ತಿತರ ವಿಚಾರವಾಗಿ ಹಾಜರಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕಳ್ಳಿಚಂಡ ರಕ್ಷಿತ್ ಕುಶಾಲಪ್ಪ, ನೋಡಲ್ ಅಧಿಕಾರಿಗಳಾದ ಪಶುವೈದ್ಯಾಧಿಕಾರಿ ಡಾ.ಭವಿಷ್ಯ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಡ್ಡೇಂಗಡ ನವೀನ್, ಕೊಕ್ಕೇಂಗಡ ಸುಮಿತಾ, ಗಂಗೆ, ಗೌರಿ, ಪುಟ್ಟಮ್ಮ, ಗ್ರೇಸಿ, ಪ್ರಮೀಳಾ, ಸಿಂಗ, ಪುಷ್ಪಾವತಿಚಂದ್ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು. ಶುಚಿತ್ವಕ್ಕೆ ಶ್ರಮಿಸಿತ್ತಾ ಉತ್ತಮ ಜನಮನ್ನಣೆಯನ್ನು ಪಡೆದಿರುವ ಪೌರಕಾರ್ಮಿಕರಾದ ಮೂರ್ತಿಯವರನ್ನು ಗ್ರಾಮ ಪಂಚಾಯಿತಿ ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.