ಸೋಮವಾರಪೇಟೆ, ಮಾ. ೬: ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ರೇಂಜರ್ ಬ್ಲಾಕ್‌ನಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ರೇಂಜರ್ ಬ್ಲಾಕ್ ನಿವಾಸಿ ವಿನಾಯಕ ಎಂಬವರ ಪತ್ನಿ ಪೂಜಾಶ್ರೀ(೩೨) ಎಂಬವರೇ ಆತ್ಮಹತ್ಯೆಗೆ ಶರಣಾದವರು. ಪತಿ ಮತ್ತು ಅತ್ತೆ ಕೆಲಸಕ್ಕೆಂದು ಪಟ್ಟಣದ ಅಂಗಡಿಗೆ ಬಂದಿದ್ದು, ಮನೆಯಲ್ಲಿ ೪ ವರ್ಷದ ಪುತ್ರಿಯೊಂದಿಗಿದ್ದ ಪೂಜಾಶ್ರೀ ಅವರು ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಮನೆಯ ಹಾಲ್‌ನಲ್ಲಿರುವ ಮರದ ಕೌಕೋಲಿಗೆ ತನ್ನ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ. ಇದಕ್ಕೂ ಮುನ್ನ ಪುತ್ರಿಯನ್ನು ಮತ್ತೊಂದು ಕೊಠಡಿಯಲ್ಲಿ ಕುಳ್ಳಿರಿಸಿ, ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಆಟದ ಸಾಮಾಗ್ರಿಗಳನ್ನು ಕೊಟ್ಟು, ಟಿ.ವಿ. ಚಾಲೂ ಮಾಡಿದ್ದಾರೆ. ಮುಂಭಾಗ ಮತ್ತು ಹಿಂಭಾಗದ ಬಾಗಿಲನ್ನು ಒಳಗಿನಿಂದ ಭದ್ರಪಡಿಸಿ, ‘ಕಳೆದ ಕೆಲ ಸಮಯದಿಂದ ಖಿನ್ನತೆಗೆ ಒಳಗಾಗಿದ್ದು, ಎರಡೂ ಮನೆಯವರು ನನ್ನನ್ನು ಕ್ಷಮಿಸಿ’ ಎಂದು ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಧ್ಯಾಹ್ನ ಊಟಕ್ಕೆಂದು ಮನೆಗೆ ಆಗಮಿಸಿದ ಪತಿ ವಿನಾಯಕ ಅವರು ಎಷ್ಟೇ ಬಾಗಿಲು ಬಡಿದರೂ ತೆರೆಯದ ಹಿನ್ನೆಲೆ ಪುತ್ರಿಯನ್ನು ಕರೆದು ಹಿಂಬಾಗಿಲಿನ ಲಾಕ್ ತೆಗೆಯುವಂತೆ ತಿಳಿಸಿದ್ದು, ಒಳಬಂದ ನಂತರವಷ್ಟೇ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ಸ್ಥಳಕ್ಕೆ ಪೊಲೀಸರು ತೆರಳಿ ಮಹಜರು ನಡೆಸಿದ ನಂತರ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲಾಗಿದೆ. ಘಟನೆ ಬಗ್ಗೆ ಬೆಂಗಳೂರಿನಲ್ಲಿರುವ ಪೂಜಾಶ್ರೀ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಅವರು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.