ಸೋಮವಾರಪೇಟೆ, ಮಾ. ೭: ತಾಲೂಕಿನ ಶಾಂತಳ್ಳಿ ಹೋಬಳಿಯ ಕುಂದಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಕೃಷಿ ಫಸಲನ್ನು ನಷ್ಟಗೊಳಿಸಿವೆ. ಕಾಡಾನೆಗಳ ಆವಾಸ ಕೇಂದ್ರವಾಗಿರುವ ಕುಂದಳ್ಳಿಯಲ್ಲಿ ಸ್ಥಳೀಯರು ಜೀವ ಭಯದಿಂದಲೇ ತೋಟದಲ್ಲಿ ಕೆಲಸ ನಿರ್ವಹಿಸುವಂತಾಗಿದೆ.
ಗ್ರಾಮದಲ್ಲಿ ಸುಮಾರು ೫ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದು, ಗ್ರಾಮದ ಶರತ್, ಸುಪ್ರೀತ್, ಪ್ರಸಾದ್ ಎಂಬುವವರ ತೋಟದಲ್ಲಿ ಫಸಲಿಗೆ ಬಂದಿದ್ದ ಬಾಳೆ, ಕಾಫಿ ಗಿಡಗಳನ್ನು ತುಳಿದು ನಷ್ಟಗೊಳಿಸಿದ್ದಲ್ಲದೆ ತೋಟದಲ್ಲಿದ್ದ ಬೈನೆ ಮರ ಮುರಿದು ರಾತ್ರಿಯಿಡೀ ಅಲ್ಲೇ ಠಿಕಾಣಿ ಹೂಡಿವೆ.
ಸಂಜೆ ವೇಳೆ ಸಮೀಪದ ಅರಣ್ಯ ಪ್ರದೇಶದಿಂದ ಗ್ರಾಮದ ತೋಟಗಳಿಗೆ ಆಗಮಿಸಿ ಫಸಲಿಗೆ ಬಂದ ಬೆಳೆಗಳನ್ನು ನಷ್ಟಗೊಳಿಸಿ ಮುಂಜಾನೆ ವೇಳೆ ಕಾಡಿನೆಡೆಗೆ ಆನೆಗಳು ತೆರಳುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮನವಿ ನೀಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದು, ಕೂಡಲೇ ಕಾಡು ಪ್ರಾಣಿಗಳ ಹಾವಳಿ ತಡೆಯಲು ಶಾಶ್ವತ ಯೋಜನೆ ರೂಪಿಸುವಂತೆ ಒತ್ತಾಯಿಸಿದ್ದಾರೆ.