ಎಸ್.ಎಂ ಮುಬಾರಕ್
ಸಿದ್ದಾಪುರ, ಮಾ. ೫: ತಾಪಮಾನ ಏರಿಕೆ, ಬರಿದಾದ ಜಲಮೂಲಗಳಿಂದ ಏರ್ಪಟ್ಟಿರುವ ನೀರಿನ ಸಮಸ್ಯೆ ಕೇವಲ ಮನುಷ್ಯರಿಗೆ ಮಾತ್ರವಲ್ಲ ವನ್ಯಜೀವಿಗಳ ಬದುಕಿಗೂ ಕುತ್ತು ತಂದಿದೆ. ಅರಣ್ಯ ಪ್ರದೇಶದಲ್ಲಿ ನೀರಿಲ್ಲದೆ ಪ್ರಾಣಿಗಳು ಪರಿತಪಿಸುತ್ತಿದ್ದು, ಇದೀಗ ಅರಣ್ಯ ಇಲಾಖೆ ವನ್ಯಜೀವಿಗಳ ದಾಹ ನೀಗಿಸಲು ಕೃತಕವಾಗಿ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ನೆರವಾಗುತ್ತಿದೆ.
ಇತ್ತೀಚೆಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದಿಸಿರುವ ಅರಣ್ಯ ಇಲಾಖೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸುವ ಕೆಲಸಕ್ಕೆ ಕೈಹಾಕಿದೆ.
ಸುಮಾರು ೮೪ ಸಾವಿರ ಹೆಕ್ಟೇರ್ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸುಮಾರು ೨೬೯ ಕೆರೆಗಳಿದ್ದು ಹಡ್ಲು ವ್ಯಾಪ್ತಿಯಲ್ಲಿ ೯೩ ಕೆರೆಗಳಿವೆ. ಒಟ್ಟು ೩೬೨ ಕೆರೆಗಳ ಪೈಕಿ ಶೇ.೪೦ರಷ್ಟು ಕೆರೆಗಳು ಅತಿ ಹೆಚ್ಚು ಬಿಸಿಲಿನ ತಾಪಮಾನಕ್ಕೆ ಬತ್ತಿಹೋಗುತ್ತಿವೆ. ಇನ್ನುಳಿದ ಕೆರೆಗಳಲ್ಲಿ ಕಾಡಿನ ಜರಿಮೂಲಗಳಿಂದ ಸಣ್ಣ ಪ್ರಮಾಣದ ನೀರುಗಳು ಶೇಖರಣೆಗೊಂಡಿದೆ.
ಪ್ರತಿವರ್ಷ ಅರಣ್ಯದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕೆರೆಯ ಸಮೀಪವೇ ಕೊಳವೆಬಾವಿ ಕೊರೆದು ಸೋಲಾರ್ ಮೂಲಕ ಸ್ವಯಂ ಚಾಲನೆಯಾಗುವ ಮೋಟಾರ್ಗಳನ್ನ ಅಳವಡಿಸಿ ನೀರು ತುಂಬಿಸಲಾಗುತ್ತಿದ್ದು ೨೭ ಸೋಲಾರ್ ಮೋಟಾರ್ಗಳು ಕಾರ್ಯನಿರ್ವಹಿಸುತ್ತಿವೆ. ಸಂಪೂರ್ಣ ಬತ್ತಿ ಹೋದ ಕೆರೆಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ.
೩೬೨ ಕೆರೆಗಳ ಪೈಕಿ ಕೆಲವು ಕೆರೆಗಳಲ್ಲಿ ಹೆಚ್ಚಾದ ಬಿಸಿಲಿನ ತಾಪಮಾನದಿಂದ ಸಂಪೂರ್ಣ ಬತ್ತಿ ಹೋಗಿದ್ದು ಪ್ರಾಣಿ, ಪಕ್ಷಿಗಳು ಜಲಚರಗಳ ದಾಹ ನೀಗಿಸಲು ಕೊಡಗು ಜಿಲ್ಲೆ ದೇವಮಚ್ಚಿ ಹಾಗೂ ನಾಗರಹೊಳೆ ವ್ಯಾಪ್ತಿಯ ಬತ್ತಿ ಹೋದ ಕೆರೆಗಳಿಗೆ ಸುಮಾರು ೨೫ಕ್ಕೂ ಹೆಚ್ಚು ಟ್ಯಾಂಕರ್ಗಳನ್ನ ಬಳಸಿ ನೀರನ್ನು ತುಂಬಿಸಲಾಗುತ್ತಿದೆ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ್ ‘ಶಕ್ತಿ’ ಗೆ ಮಾಹಿತಿ ನೀಡಿದ್ದಾರೆ.
ಮಳೆ ಕೊರತೆ, ನೀರಿನ ಅಭಾವದಿಂದ ಮೇವಿಗೂ ಸಮಸ್ಯೆ ಏರ್ಪಟ್ಟಿದ್ದು, ಹೊಟ್ಟೆ ತುಂಬಿಸಿಕೊಳ್ಳಲು ವನ್ಯಜೀವಿಗಳು ಪರದಾಡುತ್ತಿವೆ.