ಗೋಣಿಕೊಪ್ಪಲು, ಮಾ. ೩: ತನ್ನ ದೈನಂದಿನ ಕೆಲಸ ಮುಗಿಸಿ ಮನೆಯತ್ತ ತೆರಳುತ್ತಿದ್ದ ವ್ಯಕ್ತಿಗೆ ಬೈಕೊಂದು ಡಿಕ್ಕಿಯಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ನಡೆದಿದೆ.

ಗೋಣಿಕೊಪ್ಪ ನಿವಾಸಿ, ಪೊನ್ನಂಪೇಟೆ ರಸ್ತೆಯಲ್ಲಿರುವ ಫ್ರೆಂಡ್ಸ್ ಆಟೋಮೊಬೈಲ್ ವರ್ಕ್ ಶಾಪಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗೋಣಿಕೊಪ್ಪ ಕಾವೇರಿ ಹಿಲ್ಸ್ ನಿವಾಸಿ ಶಶಿಧರ್ (೬೫) ಶನಿವಾರ ರಾತ್ರಿ ಕೆಲಸ ಮುಗಿಸಿ, ನಡೆದುಕೊಂಡು ಮನೆಯತ್ತ ತೆರಳುತ್ತಿದ್ದಾಗ ನಗರದ ಪೊನ್ನಂಪೇಟೆ ರಸ್ತೆಯ ಕೆಇಬಿ ಸಮೀಪ ಬೈಕೊಂದು ಡಿಕ್ಕಿಯಾಗಿದೆ. ಈ ವೇಳೆ ರಸ್ತೆಗೆ ಬಿದ್ದ ಪರಿಣಾಮ ತಲೆಯ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿತ್ತು. ಸುತ್ತಮುತ್ತಲಿನ ನಾಗರಿಕರು ಕೂಡಲೇ ಗೋಣಿಕೊಪ್ಪ ಆಸ್ಪತ್ರೆಗೆ ಗಾಯಗೊಂಡ ಶಶಿಧರ್ ಅವರನ್ನು ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮುಂಜಾನೆ ವೇಳೆ ಶಶಿಧರ್ ಮೃತಪಟ್ಟಿದ್ದಾರೆ.

ಬೈಕ್ ಪೊನ್ನಂಪೇಟೆಯಿAದ ಗೋಣಿಕೊಪ್ಪ ಕಡೆಗೆ ಬರುತ್ತಿತ್ತು. ಓವರ್ ಟೇಕ್ ಮಾಡುವ ಸಂದರ್ಭ ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ತೆರಳುತ್ತಿದ್ದ ಶಶಿಧರ್ ಅವರಿಗೆ ಡಿಕ್ಕಿಯಾಗಿತ್ತು.

ಬೈಕ್ ಸವಾರ ಪವನ್ ಎಂಬವರಿಗೂ ಗಂಭೀರ ಗಾಯಗಳಾಗಿದ್ದು, ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - ಹೆಚ್.ಕೆ. ಜಗದೀಶ್