ಮಡಿಕೇರಿ, ಮಾ. ೧: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರಕಾರ ಎಲ್ಲಾ ರಂಗಗಳಲ್ಲಿಯೂ ವೈಫಲ್ಯತೆ ಕಂಡಿದ್ದು, ರಾಜಕೀಯ ಬೆಳವಣಿಗೆಗೆ ದೇಶದ್ರೋಹಿಗಳ ಪರ ನಿಂತಿದೆ ಎಂದು ಜಿಲ್ಲಾ ಬಿಜೆಪಿ ವಾಗ್ದಾಳಿ ನಡೆಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ರಾಜ್ಯ ಸರಕಾರ ತೀವ್ರ ವಿಫಲತೆ ಅನುಭವಿಸಿದೆ. ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಮೊಳಗಿರುವುದು ಸರಕಾರ ಕಾನೂನು ಸುವ್ಯವಸ್ಥೆ ಮೇಲಿಟ್ಟಿರುವ ನಿಗಾವನ್ನು ಪ್ರದರ್ಶಿಸುತ್ತಿದೆ. ನೂತನವಾಗಿ ಆಯ್ಕೆಯಾದ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರು ಈ ರೀತಿ ಘೋಷಣೆ ಕೂಗಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕದಡುವ ಯತ್ನ ಮಾಡಿದ್ದು, ಘೋಷಣೆ ಕೂಗಿದವನ ಹಾಗೂ ನೂತನ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ವಿರುದ್ಧ ದೇಶದ್ರೋಹ ಮಾಡಿದ ಪ್ರಕರಣದಡಿ ಬಂಧಿಸಬೇಕು ಜೊತೆಗೆ ಅವರನ್ನು ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸರಕಾರ ಒಂದು ವರ್ಗವನ್ನು ಓಲೈಸುವ ಕೆಲಸಕ್ಕೆ ಮುಂದಾಗಿದೆ. ಗೃಹ ಸಚಿವರು ಪ್ರಕರಣ ಗಂಭೀರವಾಗಿ ಪರಿಗಣಿಸಬೇಕಿತ್ತು. ದೇಶಭಕ್ತ ಮತದಾರರು ಇವೆಲ್ಲ ವಿಷಯವನ್ನು ಸೂಕ್ಷö್ಮವಾಗಿ ಗಮನಿಸುತ್ತಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ. ಸಂಸದ ಡಿ.ಕೆ. ಸುರೇಶ್ ‘ದಕ್ಷಿಣ ಭಾರತವನ್ನು ಪ್ರತ್ಯೇಕ ದೇಶ ಮಾಡಬೇಕೆಂಬ’ ಹೇಳಿಕೆಯನ್ನು ಕಾಂಗ್ರೆಸ್ ವಿರೋಧಿಸಿಲ್ಲ. ಹಿಂದಿ ನಿಂದಲೂ ಕಾಂಗ್ರೆಸ್ ದೇಶ ಒಡೆಯುವ ಸಂಸ್ಕೃತಿ ಹೊಂದಿದೆ ಎಂದು ಟೀಕಿಸಿದರು. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರಿಗಾಗಿ ಮೀಸಲಿಟ್ಟಿದ್ದ ರೂ. ೧೧ ಸಾವಿರ ಕೋಟಿಯಷ್ಟು ಹಣವನ್ನು ಬೇರೆ ಉದ್ದೇಶಗಳಿಗೆ ಸರಕಾರ ಬಳಸಿಕೊಳ್ಳುತ್ತಿದೆ. ಅಹಿಂದ ಪರ ಎನ್ನುವುದು ತೋರ್ಪಡಿಕೆಗೆ ಮಾತ್ರ. ಸಿದ್ದರಾಮಯ್ಯ ಅವರಿಗೆ ಹಿಂದುಳಿದವರ ಬಗ್ಗೆ ಕಾಳಜಿ ಇಲ್ಲ ಎಂದು ಕುಟುಕಿದರು.
ಜಿಲ್ಲಾ ವಕ್ತಾರ ತಳೂರು ಕಿಶೋರ್ ಮಾತನಾಡಿ, ರಾಜ್ಯ ಸರಕಾರ ಅಭಿವೃದ್ಧಿಯಲ್ಲಿ ಶೂನ್ಯ ಸಂಪಾದಿಸಿದೆ. ಅಭಿವೃದ್ಧಿ ಬಗ್ಗೆ ಬಹಿರಂಗವಾಗಿ ತಿಳಿಸಲಿ. ಸಹಕಾರ ಕ್ಷೇತ್ರವನ್ನು ಸರಕಾರ ನಿರ್ನಾಮ ಮಾಡಲು ಮುಂದಾಗಿದೆ. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಟ್ಟಿದ್ದು, ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ, ಈ ಹಿಂದೆ ಸಂಸತ್ತು ಭವನದಲ್ಲಿ ನಡೆದ ಘಟನೆಯಲ್ಲಿ ಸಂಸದ ಪ್ರತಾಪ್ ಸಿಂಹ ಪಾಸ್ ನೀಡಿದ್ದರು ಎಂದು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಇಂದು ಮೌನಕ್ಕೆ ಜಾರಿದೆ. ಅವರ ಪಕ್ಷದವರು ದೇಶ ವಿರೋಧಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ಉಪಾಧ್ಯಕ್ಷ ಮನು ಮಂಜುನಾಥ್, ವಕ್ತಾರ ಬಿ.ಕೆ. ಅರುಣ್ ಕುಮಾರ್ ಹಾಜರಿದ್ದರು. ಉಪಾಧ್ಯಕ್ಷ ಮನು ಮಂಜುನಾಥ್, ವಕ್ತಾರ ಬಿ.ಕೆ. ಅರುಣ್ ಕುಮಾರ್ ಹಾಜರಿದ್ದರು.