ಮೈಸೂರು, ಫೆ. ೨೯: ಕೊಡಗು ಜಿಲ್ಲೆಯ ಜನರ ಬಹು ನಿರೀಕ್ಷಿತ ರೈಲ್ವೇ ಯೋಜನೆಯ ಫೈನಲ್ ಲೊಕೇಷನ್ ಸರ್ವೆ ಕಾರ್ಯವು ಮುಕ್ತಾಯಗೊಂಡಿದ್ದು, ಅದನ್ನು ದೆಹಲಿಯ ರೈಲ್ವೇ ಮಂಡಳಿಗೆ ಸಲ್ಲಿಸಬೇಕಾಗಿದೆ. ಕಳೆದ ಒಂದು ದಶಕದಿಂದಲೂ ಕುಂಟುತ್ತಾ ಸಾಗಿದ್ದ ಈ ಯೋಜನೆಗೆ ಮೊದಲಿಗೆ ೧೬೮೨ ಕೋಟಿ ರೂಪಾಯಿಗಳ ಅಂದಾಜು ವೆಚ್ಚ ನಿಗದಿಪಡಿಸಲಾಗಿತ್ತು. ನಂತರ ಯೋಜನಾ ವೆಚ್ಚ ೧೮೩೯ ಕೋಟಿ ರೂಪಾಯಿಗಳಿಗೆ ಏರಿಕೆ ದಾಖಲಿಸಿತು.
ಇದೀಗ ಕೇಂದ್ರ ಸರ್ಕಾರದ ನೂತನ ಮಾನದಂಡಕ್ಕೆ ಅನುಗುಣವಾಗಿ ೮೯ ಕಿಲೋ ಮೀಟರ್ ಉದ್ದದ ಈ ಯೋಜನೆಯ ವೆಚ್ಚ ೩೧೬೮.೭೭ ಕೋಟಿ ರೂಪಾಯಿಗಳಿಗೆ ಏರಿಕೆ ಆಗಿದೆ ಎಂದು ಮೈಸೂರು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆಯೇ ಫೈನಲ್ ಲೊಕೇಷನ್ ಸರ್ವೆ ನಡೆಸಲಾಗಿದ್ದರೂ ಅದನ್ನು ತಾಂತ್ರಿಕ ಕಾರಣಗಳಿಂದ ಹಿಂತಿರುಗಿಸಲಾಗಿತ್ತು. ಈ ನಡುವೆ ಕೇಂದ್ರ ಸರ್ಕಾರವು ನೂತನ ರೈಲ್ವೇ ಹಳಿ
ನಿರ್ಮಾಣ ಮಾಡಬೇಕಾದರೆ ಗರಿಷ್ಠ ಘಂಟೆಗೆ ೧೬೫ ಕಿ.ಮೀ. ವೇಗದಲ್ಲಿ ರೈಲು ಚಾಲನೆಗೆ ಅವಕಾಶವಿರುವಂತೆ ಯೋಜನೆ ರೂಪಿಸುವಂತೆ ನಿಯಮಾವಳಿ ರೂಪಿಸಿತ್ತು. ಈ ಹಿಂದೆ ಗಂಟೆಗೆ ೧೦೦ ಕಿ.ಮೀ. ವೇಗದಲ್ಲಿ ಚಾಲನೆಗೆ ಯೋಜನೆ ರೂಪಿಸಲಾಗಿತ್ತು.
ಅಲ್ಲದೆ ಈ ನಡುವೆ ಮೈಸೂರಿನಿಂದ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ಪಥಗಳ ರಾಷ್ಟಿçÃಯ ಹೆದ್ದಾರಿ ನಿರ್ಮಾಣವೂ ಆಗಲಿರುವ ಹಿನ್ನೆಲೆಯಲ್ಲಿ ಈ ಹೆದ್ದಾರಿಗೆ ರೈಲ್ವೇ ಇಲಾಖೆಯಿಂದ ನಾಲ್ಕು ಸೇತುವೆ ನಿರ್ಮಿಸುವುದೂ ಯೋಜನೆಯಲ್ಲಿ ಸೇರಿದೆ. ಹುಣಸೂರು ಸಮೀಪ ಒಂದು ಸಣ್ಣ ಹೊಳೆಗೆ ಸೇತುವೆ, ಎರಡು ಅಂಡರ್ ಪಾಸ್ಗಳು ಮತ್ತು ಒಂದು ಓವರ್ ಬ್ರಿಡ್ಜ್ ಈ ರೈಲ್ವೇ ಯೋಜನೆಯಲ್ಲಿ ಹೊಸದಾಗಿ ಸೇರ್ಪಡೆಯಾಗಿದ್ದು, ಇದಕ್ಕಾಗಿ ೬೮ ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚ ಆಗಲಿದೆ. ಇದಲ್ಲದೆ ೮೯ ಕಿಲೋ ಮೀಟರ್ ಉದ್ದದ ಮಾರ್ಗಕ್ಕೆ ಒಟ್ಟು ೧೦ ನಿಲ್ದಾಣಗಳೂ ಬರಲಿವೆ.
ಬೆಳಗೊಳ, ಬೆಟ್ಟದೂರು. ಹಂದನಹಳ್ಳಿ, ತಿಪ್ಪೂರು, ಹುಣಸೂರು, ಕಲ್ಲಳ್ಳಿ, ಪಿರಿಯಾ ಪಟ್ಟಣ, ಚಿಕ್ಕ ಮಾಗಳಿ, ಮಂಚ ದೇವನಹಳ್ಳಿ , ಕುಶಾಲನಗರದಲ್ಲಿ ರೈಲ್ವೇ ನಿಲ್ದಾಣಗಳ ನಿರ್ಮಾಣ ಆಗಲಿದೆ. ಕುಶಾಲನಗರ ಸೇತುವೆಯಿಂದ ಮೂರು ಕಿಲೋ ಮೀಟರ್ಗಳಷ್ಟು ಎಡಭಾಗಕ್ಕೆ ಕಾವೇರಿ ನಿಸರ್ಗಧಾಮದ ಸಮೀಪ ರೈಲ್ವೇ ನಿಲ್ದಾಣ ನಿರ್ಮಾಣ ಆಗಲಿದೆ ಎಂದು ರೈಲ್ವೇ ಅಧಿಕಾರಿ ತಿಳಿಸಿದರು. ಹಿಂದಿನ ಯೋಜನೆ ಪ್ರಕಾರ ಈ ನಿಲ್ದಾಣ ಹೆದ್ದಾರಿಯ ಒಂದು ಫರ್ಲಾಂಗ್ ದೂರದಲ್ಲಿಯೇ ನಿರ್ಮಾಣ ಆಗಬೇಕಿತ್ತು. ಆದರೆ ಭವಿಷ್ಯದ ಅಭಿವೃದ್ಧಿಯ ದೃಷ್ಟಿಯಿಂದ ಮೂರು ಕಿ.ಮೀ. ಒಳಭಾಗಕ್ಕೆ ಸ್ಥಳಾಂತರಿಸಲಾಗಿದೆ.
(ಮೊದಲ ಪುಟದಿಂದ) ಉದ್ದೇಶಿತ ರೈಲ್ವೇ ನಿಲ್ದಾಣಗಳ ಒಂದೂವರೆ ಕಿಲೋ ಮೀಟರ್ ಉದ್ದಕ್ಕೂ ಸುಮಾರು ನೂರು ಮೀಟರ್ಗಳವರೆಗೆ ಮತ್ತು ರೈಲ್ವೇ ಹಳಿ ಹಾದು ಹೋಗುವ ಸ್ಥಳದಲ್ಲಿ ೨೫ ಮೀಟರ್ಗಳಷ್ಟು ಭೂಸ್ವಾಧೀನ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದ್ದು ಇದರಲ್ಲಿ ಎರಡು ಟ್ರಾö್ಯಕ್ಗಳು ನಿರ್ಮಾಣ ಆಗಲಿವೆ.
ಈ ಉದ್ದೇಶಿತ ಯೋಜನೆಗೆ ರಾಜ್ಯ ಸರ್ಕಾರವು ಭೂ ಸ್ವಾಧೀನ ಮಾಡಿಕೊಡಬೇಕಾಗಿದ್ದು ಯೋಜನೆಯನ್ನು ಎರಡೂ ಸರ್ಕಾರಗಳು ಶೇಕಡಾ ೫೦ ರಷ್ಟು ವೆಚ್ಚದಲ್ಲಿ ಅನುಷ್ಠಾನಗೊಳಿಸಬೇಕಿದೆ.
ಮೊದಲು ಈ ಯೋಜನೆಯು ಆದಾಯದ ದೃಷ್ಟಿಯಿಂದ ಸೂಕ್ತವಲ್ಲ ಎಂಬ ಕಾರಣದಿಂದ ಕೇಂದ್ರವು ಅನುಮತಿ ನಿರಾಕರಿಸಿತ್ತು. ನಂತರ ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಮತ್ತೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದೀಗ ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ಈ ಯೋಜನೆಗೆ ಯಾವುದೇ ಹಣವನ್ನು ಮೀಸಲಿಟ್ಟಿಲ್ಲ ಅಲ್ಲದೆ ಈಗಾಗಲೇ ರಾಜ್ಯದಲ್ಲಿ ಅನುದಾನದ ಕೊರತೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭೂ ಸ್ವಾಧೀನಕ್ಕೆ ಹಣ ಒದಗಿಸುವುದೂ ಅನುಮಾನವಾಗಿದೆ. ಹೀಗಾಗಿ ಯೋಜನೆ ಇನ್ನಷ್ಟು ವರ್ಷ ಮುಂದೆ ಹೋಗುವ ಸಾಧ್ಯತೆ ಇದೆ.
ಈಗ ಫೈನಲ್ ಲೊಕೇಷನ್ ಸರ್ವೆ ಪೂರ್ಣಗೊಂಡಿದ್ದು ಮೈಸೂರಿನಿಂದ ಹುಬ್ಬಳ್ಳಿಯ ನೈರುತ್ಯ ರೈಲ್ವೇಯ ಕೇಂದ್ರ ಕಚೇರಿಗೆ ಜನರಲ್ ಮ್ಯಾನೇಜರ್ ಅವರ ಕಚೇರಿಗೆ ಹೋಗಿ ನಂತರ ಅಲ್ಲಿಂದ ದೆಹಲಿಯ ರೈಲ್ವೇ ಮಂಡಳಿಗೆ ಕಳುಹಿಸಿಕೊಡಲಾಗುತ್ತದೆ. ರೈಲ್ವೇ ಮಂಡಳಿ ಅನುಮೋದನೆ ನೀಡಿದ ಕೂಡಲೇ ಕೆಲಸ ಪ್ರಾರಂಭವಾಗಲಿದೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದರೆ, ಮೈಸೂರು-ಕೊಡಗು ನಡುವಣ ರೈಲು ಮಾರ್ಗ ಶೀಘ್ರ ಸಾಕಾರಗೊಳ್ಳಲಿದೆ. ನಾವು ವಿವರವಾದ ಯೋಜನಾ ವರದಿಯೊಂದಿಗೆ ಸಿದ್ಧರಿದ್ದೇವೆ ಮತ್ತು ಸಮೀಕ್ಷೆಗಳು ಪೂರ್ಣಗೊಂಡಿವೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಉಚಿತವಾಗಿ ಹಸ್ತಾಂತರಿಸಬೇಕು. ಮೈಸೂರಿನವರೇ ಆದ ಸಿದ್ದರಾಮಯ್ಯ ಅವರು ತವರು ಜಿಲ್ಲೆಗೆ ಇದನ್ನು ಮಾಡುತ್ತಾರೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ರಾಜ್ಯ ಸರ್ಕಾರ ಭೂ ಸ್ವಾಧೀನಕ್ಕೆ ಮುಂದಾದರೆ ಮಾತ್ರ ಯೋಜನೆ ಚುರುಕುಗೊಳ್ಳಲಿದೆ ಇಲ್ಲವಾದಲ್ಲಿ ಮತ್ತೆ ನೆನೆಗುದಿಗೆ ಬೀಳಲಿದೆ.