ಸೋಮವಾರಪೇಟೆ, ಫೆ. ೨೯: ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಪರಿಶಿಷ್ಟ ಜಾತಿ-ಪಂಗಡಗಳ ಕುಂದುಕೊರತೆ ಸಮಿತಿ ಸಭೆಯಲ್ಲಿ, ತಾಲೂಕಿನ ವಿವಿಧ ಭಾಗಗಳಲ್ಲಿ ಎಸ್.ಸಿ. ಮತ್ತು ಎಸ್.ಟಿ. ಜನಾಂಗದವರು ಎದುರಿಸುತ್ತಿರುವ ಸಮಸ್ಯೆಗಳು ಅನಾವರಣಗೊಂಡವು.

ಸಭೆಯಲ್ಲಿ ಪ್ರಮುಖವಾಗಿ ಜಾಗಕ್ಕೆ ಸಂಬAಧಿಸಿದ ವಿಷಯಗಳು ಚರ್ಚೆಯಾಯಿತು. ಕುಂದುಕೊರತೆ ಸಭೆಗೆ ಹಲವಷ್ಟು ಅಧಿಕಾರಿಗಳು ಗೈರಾದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಗೊಂಡಿತು. ಗೈರಾದವರಿಗೆ ಶೋಕಾಸ್ ನೋಟೀಸ್ ನೀಡುವಂತೆ ತೀರ್ಮಾನಿಸಲಾಯಿತು.

ಪ್ರಮುಖವಾಗಿ ಎ.ಡಿ.ಎಲ್.ಆರ್. ಅಧಿಕಾರಿ ಸಭೆಗೆ ಆಗಮಿಸದ ಬಗ್ಗೆ ಸದಸ್ಯರುಗಳು ಅಸಮಾಧಾನ ವ್ಯಕ್ತಪಡಿಸಿದರು. ಕರೆ ಮಾಡುವಂತೆ ತಹಶೀಲ್ದಾರ್ ನವೀನ್‌ಕುಮಾರ್ ಅವರಿಗೆ ಮನವಿ ಮಾಡಿದರು. ಇದಕ್ಕೆ ಒಪ್ಪದ ತಹಶೀಲ್ದಾರ್ ನಾವು ಮೀಟಿಂಗ್ ನೋಟೀಸ್ ನೀಡಿದ್ದೇವೆ. ಬರದವರಿಗೆ ಶೋಕಾಸ್ ನೋಟೀಸ್ ನೀಡುತ್ತೇವೆ. ನಂತರ ಕ್ರಮ ಜರುಗಿಸು ತ್ತೇವೆ ಎಂದರು.

(ಮೊದಲ ಪುಟದಿಂದ) ಪರಿಶಿಷ್ಟ ಜಾತಿ ಮತ್ತು ಪಂಗಡದ ಮಂದಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರ್ಜಿ ನೀಡಿ. ನಮ್ಮ ಮಟ್ಟದಲ್ಲಿ ಆಗುವ ಕೆಲಸಗಳನ್ನು ತಕ್ಷಣ ಮಾಡಿಕೊಡಲಾಗುವುದು.ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಪ್ರತಿ ೩ ತಿಂಗಳಿಗೊಮ್ಮೆ ಸಭೆ ಕರೆಯುತ್ತೇವೆ. ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡುತ್ತೇವೆ.ಯಾವುದೇ ಅರ್ಜಿಗಳನ್ನು ಉಳಿಸಿಕೊಳ್ಳುವುದಿಲ್ಲ ಎಂದು ಸಮಿತಿಯ ಅಧ್ಯಕ್ಷರಾದ ನವೀನ್ ಕುಮಾರ್ ಭರವಸೆ ನೀಡಿದರು.

ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬವೊAದಕ್ಕೆ ರಸ್ತೆ ಸಮಸ್ಯೆಯಿದ್ದು, ಕಳೆದ ಸಾಲಿನಲ್ಲಿ ಚರ್ಚೆ ಮಾಡಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಬಿ.ಇ.ಜಯೇಂದ್ರ ದೂರಿದರು. ಉತ್ತರಿಸಿದ ಪಿಡಿಓ, ಶನಿವಾರಸಂತೆ ಹಾಗೂ ದುಂಡಳ್ಳಿ ಗ್ರಾಮ ಪಂಚಾಯಿತಿಯ ಗಡಿ ಭಾಗದಲ್ಲಿ ಈ ಸಮಸ್ಯೆ ಇದ್ದು, ಜಾಗ ಅರಣ್ಯ ಇಲಾಖೆಯ ಅಧೀನಕ್ಕೆ ಬರುತ್ತದೆ ಎಂದರು. ಮುಂದಿನ ನಾಲ್ಕು ದಿನಗಳ ಒಳಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು. ಬಾಣಾವರ ರಸ್ತೆಯಲ್ಲಿರುವ ಜಾಗಕ್ಕೆ ಸಂಬAಧಿಸಿದAತೆ ವ್ಯಕ್ತಿಯೋರ್ವರು ಪರಿಶಿಷ್ಟ ಜಾತಿಗೆ ಸೇರಿದವರ ಜಾಗವನ್ನು ನಕಲಿ ಫಾರಂ ನಂ.೩ ಸೃಷ್ಟಿಸಿ ಪಟ್ಟಣ ಪಂಚಾಯಿತಿಯಿAದ ದಾಖಲೆ ಮಾಡಿಸಿಕೊಂಡಿದ್ದಾರೆ. ನಕಲಿ ದಾಖಲೆಯನ್ನು ಸೃಷ್ಟಿಸಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ನಮ್ಮ ಜಾಗವನ್ನು ನಮಗೆ ಒದಗಿಸಿಕೊಡಬೇಕೆಂದು ಎಸ್.ಆರ್.ವಸಂತ್ ಮನವಿ ಮಾಡಿದರು.

ಹೆಮ್ಮನೆ ಗ್ರಾಮದಲ್ಲಿ ಅಂಗನವಾಡಿ ನಿರ್ಮಿಸಲು ಸ್ಥಳ ಒದಗಿಸಿಕೊಡಬೇಕು. ಈಗಾಗಲೆ ಪೈಸಾರಿ ಜಾಗವನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ತೆರವುಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದರು. ಹೆಮ್ಮನೆಯಲ್ಲಿರುವ ಪೈಸಾರಿ ಜಾಗದ ಸರ್ವೆ ನಡೆಸಲಾಗುವುದು. ಯಾವ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂಬ ಬಗ್ಗೆ ವರದಿ ಸಲ್ಲಿಸಲು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ನವೀನ್ ಕುಮಾರ್ ಹೇಳಿದರು.

ಅಂಬೇಡ್ಕರ್ ಹೆಸರಿನಲ್ಲಿ ಸವಲತ್ತು ಪಡೆಯುತ್ತಿದ್ದರೂ ಜಿಲ್ಲೆಯಲ್ಲಿ ಸುಸಜ್ಜಿತ ಅಂಬೇಡ್ಕರ್ ಪ್ರತಿಮೆ ಹಾಗೂ ಸಮುದಾಯ ಭವನ ಇಲ್ಲ. ಸೋಮವಾರಪೇಟೆ ಸ.ಪ್ರಾ.ಶಾಲಾ ಬಳಿಯಲ್ಲಿ ಇರುವ ಖಾಲಿ ಜಾಗದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಕ್ರಮ ವಹಿಸಬೇಕೆಂದು ಮುಖಂಡರಾದ ಜಯೇಂದ್ರ, ಸೋಮಪ್ಪ ಒತ್ತಾಯಿಸಿದರು.

ಕೆಂಚೇಶ್ವರ್ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಸಮಸ್ಯೆಯಿದೆ. ದಲಿತರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ದೊಡ್ಡಬಿಳಹದಲ್ಲಿ ೧೪ ಕುಟುಂಬಕ್ಕೆ ಜಾಗ ನೀಡಿದ್ದರೂ ಕೃಷಿ ಕೈಗೊಳ್ಳಲು ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿದೆ. ನಾಕಲಗೋಡಿನಲ್ಲಿ ಎಸ್.ಸಿ. ಕುಟುಂಬಕ್ಕೆ ಹಕ್ಕುಪತ್ರ ನೀಡುತ್ತಿಲ್ಲ ಎಂದರು.

ಕರ್ಕಳ್ಳಿಯಯಲ್ಲಿರುವ ಸ್ಮಶಾನಕ್ಕೆ ಸ್ಥಳೀಯರು ತ್ಯಾಜ್ಯ ಸುರಿಯುತ್ತಿದ್ದಾರೆ. ಇದನ್ನು ತಡೆಗಟ್ಟಲು ಆವರಣಗೋಡೆ ನಿರ್ಮಿಸಬೇಕೆಂದು ವಸಂತ್ ಮನವಿ ಮಾಡಿದರು. ಹರಗ ಗ್ರಾಮದಲ್ಲಿ ಸ್ಮಶಾನಕ್ಕೆ ಪೈಸಾರಿ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲು ಕ್ರಮಕೈಗೊಳ್ಳಬೇಕು. ಒತ್ತುವರಿ ತೆರವುಗೊಳಿಸಬೇಕೆಂದು ಮನವಿ ಮಾಡಿದರು.

ದೊಡ್ಡಕುಂದ ಗ್ರಾಮದಲ್ಲಿ ೯೦ ಸೆಂಟ್ಸ್ ಜಾಗ ಸ್ಮಶಾನಕ್ಕೆ ಮಂಜೂರಾಗಿದೆ. ಇದನ್ನು ಸಾರ್ವಜನಿಕ ಸ್ಮಶಾನ ಎಂದು ಗುರುತಿಸಲಾಗಿದೆ. ಕಿರಿಕೊಡ್ಲಿ ಮತ್ತು ರಾಮೇನಹಳ್ಳಿಯವರೂ ಸಹ ಇದೇ ಸ್ಮಶಾನವನ್ನು ಬಳಸುತ್ತಿದ್ದಾರೆ. ಹದ್ದುಬಸ್ತು ಸರ್ವೆ ಮಾಡಿ ಗಡಿ ಗುರುತಿಸಬೇಕು ಎಂದು ವೇದ್ ಕುಮಾರ್ ಹೇಳಿದರು.

ಕೊಡ್ಲಿಪೇಟೆ ಹೋಬಳಿಯ ಲಕನಿ ಗ್ರಾಮದಲ್ಲಿ ಕೆಲವು ವೀರಶೈವ ಲಿಂಗಾಯತ ಕುಟುಂಬಗಳಿಗೆ ಎಸ್.ಸಿ. ಜಾತಿ ಪ್ರಮಾಣಪತ್ರ ನೀಡಲಾಗಿದೆ. ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ೪೭೬ ಸುಳ್ಳು ಜಾತಿ ಪ್ರಮಾಣ ಪತ್ರ ಸೃಷ್ಟಿಯಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ದೇವರಾಜ್ ಆಗ್ರಹಿಸಿದರು.

ದಲಿತ ಕುಟುಂಬಗಳಿಗೆ ತಲಾ ೨ ಎಕರೆ ಜಾಗ ಮಂಜೂರು ಮಾಡಿಕೊಡಬೇಕೆಂದು ಒತ್ತಾಯಿಸಿದ ಅವರು, ಕೊಡ್ಲಿಪೇಟೆಯಲ್ಲಿ ಸರ್ಕಾರಿ ಜಾಗವನ್ನು ವ್ಯಕ್ತಿಯೋರ್ವರು ಟವರ್ ನಿರ್ಮಾಣಕ್ಕೆಂದು ಖಾಸಗಿ ಕಂಪೆನಿಗೆ ಲೀಸ್ ಕೊಟ್ಟಿದ್ದಾರೆ.ಈ ಬಗ್ಗೆ ಗಮನ ಹರಿಸಬೇಕು. ಕೊಡ್ಲಿಪೇಟೆಯಲ್ಲಿ ಕಂದಾಯ ಇಲಾಖಾಧಿಕಾರಿಗಳು ಸರಿಯಾಗಿ ಕಚೇರಿಗೆ ಆಗಮಿಸುತ್ತಿಲ್ಲ. ಇವರುಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಸಮಿತಿಯ ಕಾರ್ಯದರ್ಶಿಯೂ ಆಗಿರುವ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಿದ್ದೇಗೌಡ, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ದಲಿತಪರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.