ಮಡಿಕೇರಿ, ಮಾ. ೧: ಅರಣ್ಯ ಇಲಾಖೆಯ ಅಧಿಕಾರಿಗಳು ಮರ ಕಡಿತಲೆ ಸೇರಿದಂತೆ ಇತರ ಕಡತಗಳನ್ನು ವಿಲೇವಾರಿ ಮಾಡಲು ವಿಳಂಬ ಧೋರಣೆ ತೋರುತ್ತಿ ದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಭೂ ಮಾಲೀಕರ ಮತ್ತು ಮರ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಲ್ಲಿ ಸರ್ವೆ ಕಾರ್ಯ, ಕಂದಾಯ ನಿಗದಿ, ಮರಕಡಿತಲೆಗೆ ಆದೇಶ ಸೇರಿದಂತೆ ಇತರೆ ಕೆಲಸ ಕಾರ್ಯದಲ್ಲಿ ವಿಳಂಬ ಧೋರಣೆ ಕಂಡು ಬರುತ್ತಿದೆ. ಈ ಬಗ್ಗೆ ನಮ್ಮ ಸಂಘಕ್ಕೆ ಅನೇಕ ದೂರುಗಳು ಬಂದಿವೆ. ಇದರೊಂದಿಗೆ ಅರಣ್ಯ ಇಲಾಖೆಯ ಅಧಿಕಾರಗಳ ಭೇಟಿಗೂ ಒಂದೆರಡು ಗಂಟೆ ಸಮಯ ಮಾತ್ರ ನಿಗದಿ ಯಾಗಿದೆ. ಇದೆಲ್ಲವೂ ಭೂ ಮಾಲೀಕರು ಹಾಗೂ ಮರ ವ್ಯಾಪಾರಿಗಳಿಗೆ ಸಮಸ್ಯೆಯಾಗಿದೆ. ಆದರಿಂದ ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು, ಶೀಘ್ರದಲ್ಲಿಯೇ ನಮ್ಮ ಕಡತಗಳನ್ನು ಪರಿಶೀಲನೆ ಮಾಡಬೇಕು ಹಾಗೂ ಇಂತಹ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಕೆ.ಎ. ಆದಂ ಮಾತನಾಡಿ, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಸ್ಪಂದನ ದೊರೆಯದಿದ್ದಲ್ಲಿ ಶಾಸಕರ ಗಮನಕ್ಕೆ ತರಲಾಗುವುದು. ಸಮಸ್ಯೆಗೆ ಸೂಕ್ತ ಪರಿಹಾರ ದೊರೆಯದಿದ್ದಲ್ಲಿ ಹೋರಾಟದ ಹಾದಿ ಹಿಡಿಯಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಮನೋರಂಜನ್, ಖಜಾಂಚಿ ಎನ್.ಎಸ್. ಸುರೇಶ್, ವಕ್ತಾರ ಹಂಸ ಕೆ.ಕೆ, ಕಾನೂನು ಸಲಹೆಗಾರ ಸಿ.ಬಿ ಪೂವಣ್ಣ ಹಾಜರಿದ್ದರು.