ಕಡಂಗ, ಫೆ. ೨೯: ಕಳೆದ ೧೦ ವರ್ಷಗಳಿಂದ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗಮೂರುರು ಹಾಗೂ ಚೌಕಿ ಮುಖ್ಯ ರಸ್ತೆಯು ವಾಹನ ಸಂಚಾರಕ್ಕೆ ಕಷ್ಟಕರವಾಗಿದೆ.
ರಸ್ತೆಯ ಎರಡು ಬದಿಗಳಲ್ಲಿ ಚರಂಡಿ ವ್ಯವಸ್ಥೆಯು ಇಲ್ಲದೆ ಚಿಕ್ಕ ಮಳೆ ಬರುವ ಸಂದರ್ಭದಲ್ಲಿ ಸಹ ರಸ್ತೆಯಲ್ಲಿ ಪೂರ್ತಿಯಾಗಿ ನೀರು ನಿಂತು ಸಂಚಾರ ಮಾಡಲು ತೊಂದರೆಯಾಗಿದೆ.
ಕಳೆದ ಮಳೆಗಾಲದಲ್ಲಿ ಮಳೆಯಿಂದ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೆದಮುಳ್ಳೂರು, ಚೌಕಿ ಭಾಗದಿಂದ ಬರುವ ವಿದ್ಯಾರ್ಥಿಗಳು, ದಿನನಿತ್ಯ ಕೆಲಸಕ್ಕೆ ತೆರಳುವ ಕೆಲಸಗಾರರು, ಆಸ್ಪತ್ರೆಗೆ ಹೋಗುವ ಅನಾರೋಗ್ಯ ಪೀಡಿತ ಜನರು ಈ ಒಂದು ರಸ್ತೆಯನ್ನು ದಾಟಲು ಹರಸಾಹಸ ಪಡುತ್ತಿದ್ದಾರೆ.
ಈ ರಸ್ತೆಯಲ್ಲಿ ಬಸ್ಗಳ ಸಂಚಾರ ಇಲ್ಲ. ಆಟೋದವರು ಈ ರಸ್ತೆಯ ಸ್ಥಿತಿಯಿಂದ ಬಾಡಿಗೆಗೆ ಬರುವುದು ಇಲ್ಲ. ಈ ಭಾಗದಲ್ಲಿರುವ ಪ್ರಮುಖರು ಹಲವು ಬಾರಿ ಜನಪ್ರತಿನಿಧಿಗಳನ್ನು ಸಂಪರ್ಕಿಸಿದರು ಯಾವುದೇ ರೀತಿಯ ಸ್ಪಂದನ ದೊರೆತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವು ಬಾರಿ ಪತ್ರಿಕೆಗಳಲ್ಲಿ ಈ ಸಂಬAಧ ವರದಿ ಪ್ರಕಟಗೊಂಡರು ಸಹ ಜನಪ್ರತಿನಿಧಿಗಳಿಂದ ಯಾವುದೇ ರೀತಿ ಸ್ಪಂದನ ನೀಡಿಲ್ಲ.
ಮುಂದಿನ ದಿನಗಳಲ್ಲಿ ನೂತನ ಶಾಸಕರುಗಳು ರಸ್ತೆಯನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಭಾಗದಲ್ಲಿರುವ ೧೫೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಬಹಳ ಕಷ್ಟಪಟ್ಟು ಈ ರಸ್ತೆಯನ್ನು ದಾಟುತ್ತಿದೆ. ಕೂಡಲೇ ಈ ರಸ್ತೆಯನ್ನು ಸರಿಪಡಿಸಬೇಕು ಎಂದು ಗ್ರಾಮಸ್ಥ ಅಶ್ರಫ್ ತಿಳಿಸಿದ್ದಾರೆ.
ಎರಡು ಬಾರಿ ಶಾಸಕರನ್ನು ಈ ವಿಷಯಕ್ಕಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಸ್ಪಂದನ ನೀಡಿದ್ದು ಸರ್ಕಾರದಿಂದ ಈ ರಸ್ತೆಯನ್ನು ಗುಣಮಟ್ಟದಲ್ಲಿ ಸರಿಪಡಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ ಎಂದು ಸ್ಥಳೀಯರಾದ ಬಲ್ಟಿಕಾಳಂಡ ರಂಜಿ ಹೇಳಿದ್ದಾರೆ.
- ನೌಫಲ್ ಕಡಂಗ.