ಕಣಿವೆ, ಫೆ. ೨೯: ಕುಶಾಲನಗರದ ಏಕೈಕ ಶಿವ ದೇವಾಲಯ ಪಟ್ಟಣದ ಹಾಸನದ ರಸ್ತೆಯಲ್ಲಿರುವ ಸೋಮೇಶ್ವರ ದೇವಾಲಯದಲ್ಲಿ ಮಾರ್ಚ್ ೮ ರಂದು ಮಹಾಶಿವರಾತ್ರಿ ಪೂಜೋತ್ಸವÀ ಜರುಗಲಿದೆ.
ಶಿವರಾತ್ರಿ ಅಂಗವಾಗಿ ದೇವಾಲಯವನ್ನು ಸುಣ್ಣ ಬಣ್ಣಗಳಿಂದ ಅಲಂಕರಿಸಲಾಗಿದೆ. ಪಟ್ಟಣದ ಎತ್ತರದ ಗುಡ್ಡದ ಮೇಲಿರುವ ಈ ಶಿವ ದೇವಾಲಯಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ.
ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ಶಿವಲಿಂಗಕ್ಕೆ ಗಂಗಾ ಅಭಿಷೇಕ ಮಾಡಲೆಂದೇ ಪೂರ್ವಜರು ದೇವಾಲಯದ ಎಡ ಪಾರ್ಶ್ವದ ಅಣತಿ ದೂರದಲ್ಲಿ ಕೆರೆಯೊಂದನ್ನು ತೋಡಿದ್ದು ಅದನ್ನು ಸೋಮೇಶ್ವರ ಕೆರೆ ಎಂದೇ ಕರೆಯಲಾಗುತ್ತಿತ್ತು.
ಆದರೆ ಕುಶಾಲನಗರ ಪಟ್ಟಣ ಬೆಳವಣಿಗೆಯಾದಂತೆ ಇಲ್ಲಿನ ಕೆರೆಯೂ ಮಂಗಮಾಯವಾಗಿದೆ. ಇದೀಗ ಈ ಕೆರೆಯಲ್ಲಿ ಊರಿನ ಜನವಸತಿಯ ತ್ಯಾಜ್ಯದ ನೀರು ಸೇರಿಕೊಂಡಿದ್ದು ಕೆರೆಯ ಸ್ವರೂಪವೇ ಬದಲಾಗಿದೆ.
ಇದೀಗ ದೇವಾಲಯದ ಶಿವಲಿಂಗಕ್ಕೆ ದೇವಾಲಯದ ಆವರಣದಲ್ಲಿ ತೆರೆದಿರುವ ಕೊಳವೆ ಬಾವಿಯ ನೀರಿನಿಂದ ಜಲಾಭಿಷೇಕ ಮಾಡಲಾಗುತ್ತಿದೆ.
ದೇವಾಲಯಕ್ಕೆ ಪೂರ್ವ ಹಾಗೂ ಉತ್ತರ ದಿಕ್ಕಿನ ಎರಡೂ ಕಡೆ ರಸ್ತೆಗೆ ಹೊಂದಿಕೊAಡAತೆ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದ್ದು ದೇವಾಲಯಕ್ಕೆ ದೇವರ ದರ್ಶನಕ್ಕೆ ಧಾವಿಸುವ ಭಕ್ತರಿಗೆ ಅನುಕೂಲ ಒದಗಿಸಲಾಗಿದೆ. ದೇವಾಲಯದ ಆಸುಪಾಸಿನಲ್ಲಿ ಒಂದಷ್ಟು ವಿಶಾಲವಾದ ಜಾಗವಿದ್ದು ದೇವಾಲಯದ ಜೀರ್ಣೋದ್ಧಾರ ಅಥವಾ ಇತರೇ ಅಭಿವೃದ್ಧಿಗೆ ಯೋಜನೆ ರೂಪಿಸಬಹುದಾಗಿದೆ.
ಇದೀಗ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಎಂ.ಕೆ. ದಿನೇಶ್ ಕಾರ್ಯನಿರ್ವಹಿಸುತ್ತಿದ್ದು, ಸರಿಸುಮಾರು ೨೦ ಸಾವಿರಕ್ಕೂ ಅಧಿಕ ಹಿಂದೂ ಭಕ್ತ ಜನಸ್ತೋಮವಿರುವ ಊರಿನ ಏಕೈಕ ಶಿವ ದೇವಾಲಯದ ತ್ವರಿತ ಅಭಿವೃದ್ಧಿಗೆ ದೇವಾಲಯ ಸಮಿತಿ ಯೋಜನೆ ರೂಪಿಸಬೇಕಿದೆ ಎಂಬುದು ಭಕ್ತ ಜನರ ಕೋರಿಕೆಯಾಗಿದೆ.
ಶಿವರಾತ್ರಿ ಪೂಜೆ
ದೇವಾಲಯದಲ್ಲಿ ಮಾರ್ಚ್ ೮ ರಂದು ಬೆಳಿಗ್ಗೆ ೮ ಗಂಟೆಯಿAದ ಶ್ರೀ ಸೋಮೇಶ್ವರ ದೇವರಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾಲಂಕಾರ, ಅಷ್ಟೋತ್ತರ, ನೈವೇದ್ಯ ಪೂಜೆ ನೆರವೇರಲಿದೆ. ಬಳಿಕ ಬೆಳಿಗ್ಗೆ ೮.೩೦ಕ್ಕೆ ತೀರ್ಥ ಪ್ರಸಾದ ವಿತರಣೆ, ಪೂರ್ವಾಹ್ನ ೧೧ ಗಂಟೆಗೆ ಅಭಿಷೇಕ, ಅರ್ಚನೆ ಪೂಜೆ, ಸಂಜೆ ೫.೩೦ ಗಂಟೆಗೆ ಪ್ರದೋಷ ಪೂಜೆ, ರಾತ್ರಿ ೯ ಗಂಟೆಯಿAದ ೧೦ ಗಂಟೆಯವರೆಗೆ ಪ್ರಥಮ ಯಾಮದ ಪೂಜೆ, ರಾತ್ರಿ ೧೧ ರಿಂದ ಮರುದಿನ ಮುಂಜಾನೆ ೫ ಗಂಟೆಯವರೆಗೆ ನಿರಂತರ ಜಾಗರಣೆಯ ಪೂಜಾದಿಗಳು ನೆರವೇರಲಿವೆ. ಹಾಗೆಯೇ ಶಿವರಾತ್ರಿ ದಿನ ರುದ್ರಾಭಿಷೇಕ ಮಾಡಿಸುವವರು ಮಾ. ೭ ರ ಸಂಜೆಯ ಒಳಗೆ ದೇವಾಲಯಕ್ಕೆ ಆಗಮಿಸಿ ಹೆಸರು ದಾಖಲಿಸಬಹುದಾಗಿದೆ ಎಂದು ದೇವಾಲಯದ ಅರ್ಚಕ ಸುಬ್ರಮಣ್ಯ ದೀಕ್ಷಿತ್ ತಿಳಿಸಿದ್ದಾರೆ.