ಸುAಟಿಕೊಪ್ಪ, ಫೆ. ೨೯: ಕ್ರೀಡಾಕೂಟ ಕೇವಲ ಆಟೋಟಗಳಿಗೆ ಸೀಮಿತವಾಗದೆ ಮನೋರಂಜನೆ ಯೊಂದಿಗೆ ದೈಹಿಕ ಮತ್ತು ಮಾನಸಿಕ ಸ್ವಾಸ್ಥö್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ್ ಹೇಳಿದರು.

ಕಾನ್‌ಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‌ನ ವತಿಯಿಂದ ನಡೆದ ೨೪ನೇ ವರ್ಷದ ಕ್ರೀಡೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ೨೪ ವರ್ಷಗಳಿಂದ ಫ್ರೆಂಡ್ಸ್ ಯೂತ್ ಕ್ಲಬ್‌ನವರು ಕಠಿಣ ಪರಿಶ್ರಮದೊಂದಿಗೆ ಕ್ರೀಡಾಕೂಟವನ್ನು ಗ್ರಾಮದ ಹಬ್ಬದಂತೆ ನಡೆಸಿಕೊಂಡು ಬರುತ್ತಿದ್ದಾರೆ. ಮುಂದಿನ ಬೆಳ್ಳಿಮಹೋತ್ಸವ ಆಚರಣೆಯಲ್ಲಿರುವ ಈ ಸಂಘವು ಶತಮನೋತ್ಸವ ಮಾಡುವಂತಾಗಲಿ ಎಂದರು.

ಪ್ರತಿಯೊಬ್ಬ ಮನುಷ್ಯನಿಗೆ ಶಾರೀರಿಕ ಮತ್ತು ಮಾನಸಿಕ ಶ್ರಮತೆ ಅಗತ್ಯ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ರೀತಿಯ ಕ್ರೀಡಾಕೂಟಗಳು ನಡೆದಾಗ ದೈಹಿಕ ಮತ್ತು ಮಾನಸಿಕ ಕ್ಷಮತೆಯೊಂದಿಗೆ ಜೀವನವನ್ನು ಕ್ರೀಡಾಸ್ಪೂರ್ತಿಯಿಂದ ನೋಡಲು ಸಾಧ್ಯವಾಗುತ್ತದೆ. ೨೪ ವರ್ಷಗಳಿಂದ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರುತ್ತಿರುವ ಫ್ರೆಂಡ್ಸ್ ಯೂತ್ ಕ್ಲಬ್‌ನವರು ಅಭಿನಂದಾರ್ಹರು ಎಂದು ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೂತಿನರ್ ಹೇಳಿದರು.

ನಾಕೂರು ಶಿರಂಗಾಲ ಗ್ರಾ.ಪಂ. ಮಾಜಿ ಅಧ್ಯಕ್ಷ ಫ್ರೆಂಡ್ಸ್ ಯೂತ್ ಕ್ಲಬ್ ಮಾಜಿ ಅಧ್ಯಕ್ಷ ಬಿ.ಜಿ.ರಮೇಶ್ ಮಾತನಾಡಿ, ಮಕ್ಕಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ವೇದಿಕೆಯನ್ನು ಒದಗಿಸುವ ಮೂಲಕ ಅವರಲ್ಲಿನ ಪಠ್ಯೇತರ ಚಟುವಟಿಕೆಗಳ ಪ್ರತಿಭೆಯನ್ನು ಹೊರ ತರಲು ಸಾಧ್ಯವಾಗುತ್ತದೆ. ಈ ಕ್ರೀಡಾಕೂಟವು ಸಾಂಸ್ಕೃತಿಕ ಹಬ್ಬವಾಗಿ ನಡೆಯುತ್ತಿದ್ದು ಮುಂದಿನ ವರ್ಷ ರಜತಮಹೋತ್ಸವವನ್ನು ಆಚರಿಸಲಿದೆ ಎಂದರು.

ತಮ್ಮ ಪಕ್ಕದ ಗ್ರಾಮದವರಾದ ಟೆನ್ನಿಸ್‌ಪಟು ರೋಹನ್ ಬೋಪಣ್ಣ ಅವರು ೪೩ನೇ ವರ್ಷದಲ್ಲಿ ಡಬಲ್ಸ್ನಲ್ಲಿ ವಿಶ್ವ ನಂ.೧ ಪಟ್ಟವನ್ನು ಅಲಂಕರಿಸಿದ್ದು ನಮಗೆಲ್ಲಾ ಸ್ಪೂರ್ತಿದಾಯಕವಾಗಿದ್ದಾರೆ ಎಂದು ಹೇಳಿದರು. ಕ್ರೀಡಾಕೂಟವನ್ನು ನಡೆಸುವಾಗ ವಯೋಮಿತಿ ಅನುಗುಣವಾಗಿ ತಂಡಗಳಾಗಿ ರೂಪಿಸುವುದರ ಮೂಲಕ ಕ್ರೀಡಾಕೂಟ ನಡೆಸುವಂತಾಗಬೇಕು ಎಂದು ಕಿವಿಮಾತು ಹೇಳಿದರು.

ಸಮಾರಂಭವನ್ನು ಉದ್ದೇಶಿಸಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಬಸಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ವಿ.ಸತೀಶ್, ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್ ಅವರುಗಳು ಮಾತನಾಡಿದರು.

ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ರಾಧಮಣಿ, ಪ್ರೇಮ, ಅರುಣಾಕುಮಾರಿ, ಮೀನಾ, ಜನಾರ್ಧನ, ಕಾಫಿ ಬೆಳೆಗಾರರಾದ ಈರಪ್ಪ, ಅಡಿಕೆರ ಶಾಂತಪ್ಪ, ಅಡಿಕೆರ ಧರ್ಮಪ್ಪ, ಕಾಂಗ್ರೆಸ್ ಅಧ್ಯಕ್ಷ ಆದಂ, ಸಿಎಚ್‌ಓ ರೋಶಿತ ರೈ, ಜಯಂತಿ, ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‌ನ ಅಧ್ಯಕ್ಷ ಬಿ.ಎ. ವಸಂತ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಶಂಕರನಾರಾಯಣ ಸ್ವಾಗತಿಸಿ, ವಂದಿಸಿದರು. ಸಂಘದ ಸದಸ್ಯ ಅಜಿತ್, ವಿನೋದ್ ನಿರೂಪಿಸಿದರು.

ಜಿಲ್ಲಾಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ೧೧ ತಂಡಗಳು ಭಾಗವಹಿಸಿದ್ದವು. ಸ್ಥಳೀಯ ಪುರುಷರ ಕಬಡ್ಡಿ ಪಂದ್ಯಾವಳಿಗೆ ೬ ತಂಡಗಳು, ಸ್ಥಳೀಯ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಗೆ ೪ ತಂಡಗಳು ಪಾಲ್ಗೊಂಡಿದ್ದವು.

ವಾಲಿಬಾಲ್ ಫೈನಲ್ ಪಂದ್ಯಾವಳಿಯು ಬಿಲಾಲ್ ಫ್ರೆಂಡ್ಸ್ ಕುಶಾಲನಗರ ಹಾಗೂ ಅಭಿ ಫ್ರೆಂಡ್ಸ್ ಮುಳ್ಳೂರು ತಂಡಗಳ ನಡುವೆ ನಡೆದಿದ್ದು, ಪಂದ್ಯಾವಳಿಯ ಉದ್ಘಾಟನೆಯನ್ನು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಸಿ. ಶ್ರೀಧರ್, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ್, ಕಾಫಿ ಬೆಳೆಗಾರರಾದ ಈರಪ್ಪ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಹೆರೂರು, ಫ್ರೆಂಡ್ಸ್ ಯೂತ್ ಕ್ಲಬ್ ಮಾಜಿ ಅಧ್ಯಕ್ಷ ಕೆ.ಪಿ. ವಸಂತ್ ಮತ್ತಿತರರು ಚಾಲನೆ ನೀಡಿದರು. ಮಹಿಳೆಯರ ಥ್ರೋಬಾಲ್ ಫೈನಲ್ ಪಂದ್ಯಾವಳಿಯು ಮಂಜಿಕೆರೆ ತಂಡ ಎಫ್‌ವೈಸಿ ನಾಕೂರು ತಂಡಗಳ ಮಧ್ಯೆ ನಡೆದಿದ್ದು, ಪಂದ್ಯಾವಳಿಯ ಉದ್ಘಾಟನೆಯನ್ನು ಕಾನ್‌ಬೈಲ್ ಗ್ರಾಮದ ಕಾಫಿ ಬೆಳೆಗಾರರಾದ ನೀಲಮ್ಮ ಪೆಮ್ಮಯ್ಯ ಅವರು ಉದ್ಘಾಟಿಸಿದರು.