ಐಗೂರು, ಫೆ. ೨೮: ಕಾಜೂರಿನ ಹರಿಹರ ಯುವಕ ಸಂಘದ ವಾರ್ಷಿಕೋತ್ಸವ ಮತ್ತು ಶಿವರಾತ್ರಿ ಉತ್ಸವ ಸಂಘದ ಆವರಣದಲ್ಲಿ ಮಾರ್ಚ್ ೯ ರಂದು ನಡೆಯಲಿದ್ದು, ಅಂದು ಬೆಳಿಗ್ಗೆ ೯ ಗಂಟೆಗೆ ಹರಿಹರ ಯುವಕ ಸಂಘದ ಉಪಾಧ್ಯಕ್ಷ ಟಿ.ಕೆ. ಭಾಸ್ಕರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ.
ಕಾಫಿ ಬೆಳೆಗಾರರಾದ ಮಣವಟ್ಟಿರ ಶಾರದ ಮಂದಣ್ಣ ಹಾಗೂ ಕಾಜೂರು ಎಸ್ಟೇಟ್‌ನ ವ್ಯವಸ್ಥಾಪಕ ರಾಬಿನ್ ಪೆಮ್ಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ ೧೧.೩೦ ಗಂಟೆಗೆ ರಾಮನಗರ ಜಿಲ್ಲೆಯ ಮುರಾರಿ ಸ್ವಾಮಿಗಳ ಪುಣ್ಯಕ್ಷೇತ್ರದ ಪೂಜ್ಯ ಸ್ವಾಮಿಗಳಾದ ಶ್ರೀ ಕುಮಾರಸ್ವಾಮಿಗಳ ಸಾನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಮಾಜಿ ಸಚಿವರುಗಳಾದ ಅಪ್ಪಚ್ಚು ರಂಜನ್, ಬಿ.ಎ. ಜೀವಿಜಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಉದ್ಯಮಿಗಳಾದ ಎ.ಕೆ .ಉಣ್ಣಿಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ. ವಿನೋದ್, ಅರೆಸೇನಾಪಡೆಯ ಯೋಧ ಸಜೇಶ್ ಮೋಹನ್ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಹರ ಯುವಕ ಸಂಘದ ಅಧ್ಯಕ್ಷ ಜಿ.ಕೆ. ಅವಿಲಾಶ್ ವಹಿಸಲಿದ್ದಾರೆ.
ದಿನದ ಅಂಗವಾಗಿ ಸಾರ್ವಜನಿಕರಿಗೆ ಕ್ರೀಡಾಕೂಟ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನ, ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ರಕ್ಷಿತ್ ತಿಳಿಸಿದ್ದಾರೆ.