ಮಡಿಕೇರಿ, ಫೆ. ೨೮: ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ರಾಜ್ಯದ ೨೮ ಕ್ಷೇತ್ರಗಳ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವು ಈಗಾಗಲೇ ರಾಜ್ಯದ ಗಮನ ಸೆಳೆದಿವೆ. ಕೊಡಗಿನ ಇಬ್ಬರು ನೂತನ ಕಾಂಗ್ರೆಸ್ ಶಾಸಕರಿಗೆ ಕೊಡಗು ಜಿಲ್ಲೆಯಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ತಂದುಕೊಡುವ ದೊಡ್ಡ ಟಾಸ್ಕ್ ಎದುರಾಗಿವೆ.
ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಅವರು ಶಾಸಕರಾಗಿ ಗೆಲುವು ಸಾಧಿಸಿದ ಬಳಿಕ ಮೊದಲ ಸಾರ್ವತ್ರಿಕ ಚುನಾವಣೆ ಇದಾಗಿದೆ.
ಮೈಸೂರು-ಕೊಡಗು ಲೋಕ ಸಭಾ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ಕೈ ಹಿಡಿದಿದ್ದು ಕೊಡಗಿನ ಮತದಾರರು. ಕಳೆದ ಎರಡು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೊಡಗಿನಲ್ಲಿ ಬಿಜೆಪಿ ಶಾಸಕರು ಇದ್ದರು, ಆದರೆ ಇದೀಗ ಜಿಲ್ಲೆಯಲ್ಲಿ ಇಬ್ಬರು ಕೂಡ ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ್ದಾರೆ. ಕೊಡಗಿನಲ್ಲಿ ಕಾಂಗ್ರೆಸ್ ಶಾಸಕರೇ ಗೆಲುವು ಸಾಧಿಸಿರುವುದರಿಂದ ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಉಂಟಾದ ದೊಡ್ಡ ಹಿನ್ನಡೆ ಈ ಬಾರಿ ಆಗುವುದಿಲ್ಲ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಯಾರಿಗೆ ಟಿಕೆಟ್ ನೀಡಿದರೆ ಗೆಲ್ಲಬಹುದೆಂದು ಈಗಾಗಲೇ ಇಬ್ಬರು ಶಾಸಕದ್ವಯರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯ ಸಂಗ್ರಹಿಸಿದ್ದಾರೆ.
ವಿಧಾನಸಭಾ ಚುನಾವಣೆಗೂ, ಲೋಕಸಭಾ ಚುನಾವಣಾ ವಿಷಯ ಗಳಿಗೂ ಹಲವು ವ್ಯತ್ಯಾಸವಿದ್ದು, ಇಬ್ಬರು ಶಾಸಕರಿಗೆ ಜಿಲ್ಲೆಯಿಂದ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ತಂದುಕೊಡುವ ದೊಡ್ಡ ಟಾಸ್ಕ್ ಎದುರಾಗಿವೆ.
ಬಿಜೆಪಿಗೆ ಕೊಡಗು ಆಸರೆ, ಕಾಂಗ್ರೆಸ್‌ಗೆ ಕೊಡಗು ಕೈ ಕೊಟ್ಟರೆ ?
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಮೈತ್ರಿ ಅಭ್ಯರ್ಥಿಯನ್ನು ಎದುರಿಸಬೇಕಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳು ಮಾತ್ರ ಚಲಾವಣೆಯಾಗಿತ್ತು. ಜಾತಿ ಲೆಕ್ಕಾಚಾರದಲ್ಲಿ ಜೆಡಿಎಸ್ ಮತಗಳು ಕೂಡ ಪ್ರತಾಪ್ ಸಿಂಹ ಅವರಿಗೆ ಚಲಾವಣೆಗೊಂಡಿದ್ದವು. ಇದೀಗ ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಬೇರೆ ಜಿಲ್ಲೆಗಳಲ್ಲಿ ಕಾಂಗ್ರೆಸ್ ಶಾಸಕರಿಗೆ ಎರಡು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಶಕ್ತಿಯನ್ನು ಎದುರಿಸಬೇಕಾಗಿದೆ. ಆದರೆ ಕೊಡಗಿನ ಮಟ್ಟಕ್ಕೆ ಜೆಡಿಎಸ್ ಆಟಕ್ಕೂ, ಲೆಕ್ಕಕ್ಕೂ ಇಲ್ಲದಂತಾಗಿವೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಮೈಸೂರು ಜಿಲ್ಲೆಯಲ್ಲಿ ಮಾತ್ರ ಮೂವರು ಕಾಂಗ್ರೆಸ್ ಶಾಸಕರೇ ಗೆಲುವು ಸಾಧಿಸಿದ್ದಾರೆ.
ಮೈಸೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ದೊಡ್ಡ ಅಂತರದ ಲೀಡ್ ಸಿಗುವ ಸಾಧ್ಯತೆಗಳಿವೆ. ಕಳೆದ ಬಾರಿಯ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಿವೆ.
ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೈ ಹಿಡಿದಿದ್ದ ಕೊಡಗಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕರು ಸೋಲು ಕಂಡಿರುವುದರಿAದ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆಗಳಿವೆ.
ಮಡಿಕೇರಿ ಹಾಗೂ ವೀರಾಜ ಪೇಟೆ ಕ್ಷೇತ್ರದಲ್ಲಿ ಇತರ ಪಕ್ಷಗಳ ಕಾರ್ಯಕರ್ತರೂ ಕಾಂಗ್ರೆಸ್ ಪರವಾಗಿ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು.
ಆದರೆ ಲೋಕಸಭಾ ಚುನಾವಣೆಯಲ್ಲಿ ಲೆಕ್ಕಾಚಾರಗಳು ಬೇರೆ
ಕೊಡಗು ಜಿಲ್ಲೆಯಲ್ಲಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿ ಬಲಿಷ್ಠವಾಗಿವೆ.
ಅದಲ್ಲದೇ ಜಿಲ್ಲೆಯಲ್ಲಿ ಮೋದಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹಿಂದುತ್ವ ಕಾರ್ಯಕರ್ತರ ದೊಡ್ಡ ಪಡೆ ಕೂಡ ಇವೆ. ಈ ಎಲ್ಲಾ ಸವಾಲುಗಳ ನಡುವೆ ಇಬ್ಬರು ಶಾಸಕದ್ವಯರು ಎಂ.ಪಿ ಚುನಾ ವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ತಂದುಕೊಡುವುದು ದೊಡ್ಡ ಸವಾಲಾಗಿವೆ.
ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
೨೦೧೪ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಮೈಸೂರು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಹತ್ತು ಸಾವಿರ ಮತಗಳ ಅಂತರದಿAದ ಮುನ್ನಡೆ ಕಾಯ್ದುಕೊಂಡಿದ್ದರು, ಆದರೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ೪೨ ಸಾವಿರ ಮತಗಳ ಹಿನ್ನಡೆ ಕಾಣಬೇಕಾಯಿತು. ಪ್ರತಾಪ್ ಸಿಂಹ ಅವರು ೩೨ ಸಾವಿರ ಮತಗಳ ಅಂತರದಿAದ ಗೆದ್ದಿದ್ದರು. ಪ್ರತಾಪ್ ಸಿಂಹ ಅವರು ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಲು ಕೊಡಗು ಜಿಲ್ಲೆಯ ಮತದಾರರ ಪಾತ್ರ ಬಹುದೊಡ್ಡದಿವೆ.
ಕೊಡಗು ಜಿಲ್ಲೆಯೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಆಸರೆ.
ಕಳೆದ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರಿಗೆ ಜಿಲ್ಲೆಯ ಎರಡು ಕ್ಷೇತ್ರಗಳು ಸೇರಿ ೮೫ ಸಾವಿರ ಮತಗಳ ಅಂತರದಿAದ ಮುನ್ನಡೆ ನೀಡಿತ್ತು.
ಮೋದಿ ಹಾಗೂ ಹಿಂದುತ್ವದ ಆಧಾರದಲ್ಲಿ ಈ ಬಾರಿ ಕೂಡ ಬಿಜೆಪಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿರುವುದು, ಜಿಲ್ಲೆಯ ಇಬ್ಬರು ಶಾಸಕರಿಗೆ ಸವಾಲಾಗುತ್ತದೆ.
ಕಳೆದ ಬಾರಿ ಜಿಲ್ಲೆಯಲ್ಲಿ ಹಿಂದುಳಿದ ಜನಾಂಗಗಳ ಮತಗಳು ಸಿಂಹ ಅವರ ಕೈ ಹಿಡಿದಿದ್ದವು. ಆದರೆ ಈ ಬಾರಿ ಬಿಜೆಪಿ ಕೈ ಹಿಡಿಯುವುದು ಅನುಮಾನ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಕೊಡಗಿನಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಪಡೆಯುವ ವಿಶ್ವಾಸ!
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಇದೀಗ ರಾಜ್ಯದಲ್ಲಿ ಬದಲಾದ ರಾಜಕೀಯ ವಿದ್ಯಮಾ ನಗಳಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಕಳೆದ ಬಾರಿ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಸಿ.ಎಚ್ ವಿಜಯಶಂಕರ್ ಕಣಕ್ಕಿಳಿದಿದ್ದರು.
ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಇಲ್ಲದ ಕಾರಣದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಹಿನ್ನಡೆಯುಂಟಾಯಿತು ಎಂದು ಹೇಳಲಾಗಿತ್ತು. ಇದೀಗ ಕೊಡಗು ಜಿಲ್ಲೆಯಲ್ಲಿ ಎರಡು ದಶಕಗಳ ಬಳಿಕ ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಕಾಂಗ್ರೆಸ್ ಅಭ್ಯರ್ಥಿ ಲೀಡ್ ಪಡೆಯುವ ವಿಶ್ವಾಸದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದ್ದು, ಹಾಲಿ ಸಂಸದ ಪ್ರತಾಪ್ ಸಿಂಹ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗಿ ಕಣ್ಣಕ್ಕಿಳಿಯುವ ಸಾಧ್ಯತೆಗಳಿವೆ. ಇದರೊಂದಿಗೆ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಈ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆಯೂ ಪಕ್ಷದ ಪ್ರಮುಖರು ಚರ್ಚಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿಯಿಂದ ಬೆಂಗಳೂರಿನಲ್ಲಿ ಎಂ.ಎಲ್.ಎ. ಸ್ಥಾನಕ್ಕೆ ಸ್ಪರ್ಧಿಸಿದ್ದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್‌ರಾವ್ ಅವರು ಕೂಡ ಆಕಾಂಕ್ಷಿ ಎಂದಿದ್ದಾರೆ. ಎಂ.ಎಲ್.ಸಿ. ತೇಜಸ್ವಿನಿಗೌಡ ಕೂಡ ಕೊಡಗು ಪ್ರಮುಖರನ್ನು ಭೇಟಿ ಮಾಡಿದ್ದು ಹೈಕಮಾಂಡ್‌ಗೆ ಈ ಕ್ಷೇತ್ರದ ಟಿಕೆಟ್ ನೀಡುವಂತೆ ಕೋರಿದ್ದಾರೆ. ಬಿಜೆಪಿಯಿಂದ ತಾನೂ ಕೂಡ ಆಕಾಂಕ್ಷಿ ಎಂದು ಮಡಿಕೇರಿ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿಕೆ ನೀಡಿದ್ದಾರೆ. ಬಿಜೆಪಿಯ ಈ ಎಲ್ಲ್ಲಾ ಬೆಳವಣಿಗೆಗÀಳ ನಡುವೆ ಕಾಂಗ್ರೆಸ್ ಮಾತ್ರ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಮೈಸೂರಿನ ಶುಶ್ರ‍್ರೂತ್‌ಗೌಡ, ಬಸವೇಗೌಡ ಹಾಗೂ ಕಾಂಗ್ರೆಸ್ ವಕ್ತಾರ ಲಕ್ಷö್ಮಣ್ ಹೆಸರುಗಳೂ ಚಾಲ್ತಿಯಲ್ಲಿದೆ.
ಪ್ರತಾಪ್ ಸಿಂಹ ಅವರ ವಿರುದ್ಧ ಸ್ವಪಕ್ಷೀಯರಿಗೆ ದೊಡ್ಡ ಮಟ್ಟದ ವಿರೋಧ ಜಿಲ್ಲೆಯಲ್ಲಿ ಇವೆ. ಕೊಡಗು ಜಿಲ್ಲೆಗೆ ಪೂರಕವಾಗಿ ಅನುದಾನ ತಂದುಕೊAಡುವಲ್ಲಿ ವಿಫಲರಾಗಿದ್ದಾರೆ ಎಂಬ ಮಾತು ಬಹುತೇಕರಲ್ಲಿ ಕೇಳಿಬರುತ್ತಿವೆ.
ಒಂದು ವೇಳೆ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅತೀ ಹೆಚ್ಚು ಮತಗಳು ಬಂದರೆ, ಇಬ್ಬರು ಶಾಸಕರು ಹೈಕಮಾಂಡ್ ಮಟ್ಟದಲ್ಲಿ ಮತ್ತಷ್ಟು ಪ್ರಬಲರಾಗುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ ಹೆಚ್ಚಿನ ಅನುದಾನವನ್ನು ಕೂಡ ಸುಲಭವಾಗಿ ತರಬಹುದು. ಅದಲ್ಲದೇ ಸಚಿವ ಸಂಪುಟ ಪುನರ್ ರಚನೆ ವೇಳೆ ಸಚಿವ ಸ್ಥಾನ ನೀಡುವುದು ಕೂಡ ಗ್ಯಾರಂಟಿ. ಒಟ್ಟಿನಲ್ಲಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಬಿಜೆಪಿ ಭದ್ರಕೋಟೆ ಕೆಡವಿ ಗೆಲುವು ಸಾಧಿಸಿರುವ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಡಾ ಮಂಥರ್ ಗೌಡ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿಗೆ ಮುನ್ನಡೆ ತಂದುಕೊಡುವ ಅಗ್ನಿಪರೀಕ್ಷೆ ಎದುರಾಗಿವೆ.
(ಕೆ.ಎಂ. ಇಸ್ಮಾಯಿಲ್ ಕಂಡಕರೆ)