ಮಡಿಕೇರಿ, ಫೆ. ೨೮: ಮೂರ್ನಾಡುವಿನ ಟೀಂ ಹೈ-ಲೋನಾ ವತಿಯಿಂದ ನಡೆದ ಮೂರ್ನಾಡು ಚಾಂಪಿಯನ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಸೀಸನ್-೨ ನಲ್ಲಿ ಶುಶಾಂತ್ ಫ್ರೆಂಡ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಎಫ್ರೋನ್ ತಂಡ ೨ನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು.

ಮೂರ್ನಾಡುವಿನ ಶ್ರೀಲಾಲು ಮುದ್ದಯ್ಯ ಮೈದಾನದಲ್ಲಿ ಟೀಂ ಹೈ-ಲೋನಾ ಸಂಘಟನೆಯ ನಾಯಕರಾದ ಪಿ.ಎಸ್. ಇಸ್ಮಾಯಿಲ್ ಹಾಗೂ ರಂಜಿತ್ ಕುಮಾರ್ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಗ್ರಾಮದ ಹನ್ನೆರಡು ಯುವ ಕ್ರಿಕೆಟ್ ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮೂರ್ನಾಡು ಶ್ರೀಅನ್ನಪೂರ್ಣೇಶ್ವರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಡಾ.ಮಹಾಬಲೇಶ್ವರ್ ಭಟ್, ಕ್ರೀಡೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.

ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಕೆ.ಜೆ. ಜಾಶಿರ್ ಮಾತನಾಡಿ, ಪ್ರಸ್ತುತದ ದಿನಗಳಲ್ಲಿ ಕ್ರೀಡಾಕೂಟವನ್ನು ಆಯೋಜಿಸುವುದು ಸಣ್ಣ ಕೆಲಸವಲ್ಲ. ಸಂಘಟನಾ ಮನೋಭಾವನೆ ಮತ್ತು ಆರ್ಥಿಕ ಸ್ಥಿತಿಗತಿ ಸದೃಢವಾಗಿರಬೇಕು ಎಂದರು. ಮೂರ್ನಾಡು ಗ್ರಾ.ಪಂ. ಸದಸ್ಯ ಈರ ಸುಬ್ಬಯ್ಯ, ಬಾಬಾ ಸೌಂಡ್ಸ್ ಮಾಲೀಕ ಅರುಣ್ ರೈ, ಮೂರ್ನಾಡು ಅಯ್ಯಪ್ಪ ದೇವಾಲಯದ ಪ್ರಜ್ವಲ್, ಪ್ರಮುಖರಾದ ಸೈಮನ್, ಮೂರ್ತಿ, ಆಟೋ ಚಾಲಕ ಸುಂದರ್, ಪಂದ್ಯಾವಳಿ ಆಯೋಜಕÀರಾದ ಪಿ.ಎಸ್. ಇಸ್ಮಾಯಿಲ್, ರಂಜಿತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಅತಿಥಿಗಳು ಗಣ್ಯರು ಸ್ಪರ್ಧಾ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದರು.