ಗೋಣಿಕೊಪ್ಪಲು, ಫೆ. ೨೬: ಬಿಸಿಲಿನ ಬೇಗೆ ಅಧಿಕಗೊ ಳ್ಳುತ್ತಿದ್ದಂತೆಯೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆಯು ಅರಣ್ಯ ಪ್ರದೇಶದ ವಿವಿಧ ಭಾಗದಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ, ನೀರನ್ನು ಸೋಲಾರ್ ಮೂಲಕ ಪಂಪ್ ಮಾಡಿಸಿ ಕೆರೆಗಳಿಗೆ ತುಂಬುವ ಕೆಲಸ ಕೈಗೊಂಡಿದೆ. ಆ ಮೂಲಕ ಅರಣ್ಯದಲ್ಲಿ ವಾಸಿಸುವ ಪ್ರಾಣಿಗಳಿಗೆ ನೀರಿನ ತೊಂದರೆ ಎದುರಾಗದಂತೆ ಎಚ್ಚರ ವಹಿಸಿದೆ.
ಮುಂಜಾನೆ ೮ ಗಂಟೆಯಿAದ ಸಂಜೆಯ ೪ ಗಂಟೆಯವರೆಗೆ ಸೋಲಾರ್ಗಳು ಕಾರ್ಯನಿರ್ವಹಿಸುತ್ತಿದ್ದು ಪೈಪ್ಗಳ ಮೂಲಕ ಕೆರೆಗಳಿಗೆ ನಿರಂತರವಾಗಿ ನೀರನ್ನು ಬಿಡಲಾಗುತ್ತಿದೆ. ಕೆರೆಯು ಕೂಡ ತುಂಬುತ್ತಿದ್ದು ಕಾಡುಪ್ರಾಣಿಗಳು ಬಿಸಿಲಿನ ತಾಪ ತಣಿಸಿಕೊಳ್ಳಲು ಕೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಮತ್ತಿಗೋಡು ಅರಣ್ಯದ ೮೭ ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಹಲವು ಕೆರೆಗಳಿಗೆ ಈ ರೀತಿ ಸೋಲಾರ್ ಮೂಲಕ ಕೆರೆಗೆ ನೀರು ತುಂಬಿಸುವ ಕೆಲಸವನ್ನು ಮಾಡಲಾಗುತ್ತಿದೆ.
ಈ ಕೆಲಸಕ್ಕಾಗಿ ನುರಿತ ಕೆಲವು ಸಿಬ್ಬಂದಿಗಳನ್ನು ಹಿರಿಯ ಅಧಿಕಾರಿಗಳು ನೇಮಕಗೊಳಿಸಿದ್ದಾರೆ. ಅಲ್ಲದೆ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸಲು ಬೇಕಾದ ಕ್ರಮಗಳನ್ನು ೪ ಭಾಗಗಳಲ್ಲಿ ಅಗತ್ಯ ಪರಿಕರಗಳೊಂದಿಗೆ ಕೈಗೊಂಡಿದ್ದಾರೆ.
ವೀರಾಜಪೇಟೆ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಮತ್ತಿಗೋಡು ಅರಣ್ಯ ವ್ಯಾಪ್ತಿಯ ಪ್ರದೇಶಕ್ಕೆ ದಿಢೀರ್ ಭೇಟಿ ನೀಡುವ ಮೂಲಕ ವನ್ಯ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಅರಣ್ಯ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಖುದ್ದು ಪರಿಶೀಲನೆ ನಡೆಸಿದರು.
ಮತ್ತಿಗೋಡು ವನ್ಯಜೀವಿ ವಿಭಾಗದ ಅರಣ್ಯ ಅಧಿಕಾರಿ ಸುಬ್ರಮಣ್ಯ ಶಾಸಕರಿಗೆ ಇಲಾಖೆಯು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು. ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸುವ ಸಲುವಾಗಿ ರಸ್ತೆಯ ಎರಡು ಬದಿಯಲ್ಲಿಯು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಹಲವು ವಾಚ್ ಟವರ್ ಮೂಲಕ ವಿದ್ಯಮಾನಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ವನ್ಯ ಪ್ರಾಣಿಗಳಿಗೆ ನೀರಿನ ಅಭಾವ ಎದುರಾಗಿಲ್ಲ ಎಂದು ಶಾಸಕರ ಗಮನಕ್ಕೆ ತಂದರು. ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಬಿಸಿಲಿನ ತಾಪ ಹೆಚ್ಚಿರುವುದರಿಂದ ವನ್ಯಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಬಹುದು. ಈ ನಿಟ್ಟಿನಲ್ಲಿ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅರಣ್ಯ ಇಲಾಖೆಯ ಅಧಿಕಾರಿಗಳು ನಿರೀಕ್ಷೆಗೂ ಮೀರಿ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು. ಶಾಸಕರ ಭೇಟಿ ಸಂದರ್ಭ ಮಾಜಿ ವಿಧಾನಸಭಾ ಪರಿಷತ್ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ, ಕಾಂಗ್ರೆಸ್ ಮುಖಂಡರಾದ ತಿತಿಮತಿಯ ವಿನಯ್ ಕುಮಾರ್, ನವೀನ್ ಕುಮಾರ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.