ಶನಿವಾರಸಂತೆ, ಫೆ. ೨೭: ಕಾನೂನಿನ ಜ್ಞಾನವಿದ್ದಲ್ಲಿ ಸಮಾಜದಲ್ಲಿ ಉತ್ತಮ ಜೀವನ ಸಾಗಿಸಲು ಸಾಧ್ಯ ಎಂದು ಸೋಮವಾರಪೇಟೆ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಕೆ. ಗೋಕುಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಕೊಡಗು ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರ ಮತ್ತು ಇತರೆ ಕೂಲಿ ಕಾರ್ಮಿಕರ ಕಚೇರಿ ಸಭಾಂಗಣದಲ್ಲಿ ಸೋಮವಾರಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ “ಕಾನೂನು ಅರಿವು ಕಾರ್ಯಕ್ರಮ’’ ಉದ್ಘಾಟಿಸಿ ಅವರು ಮಾತನಾಡಿದರು. ಕಾನೂನಿನ ಅಜ್ಞಾನದಿಂದ ತಪ್ಪುಗಳಾಗುತ್ತವೆ. ಕಾನೂನು ಸೇವಾ ಸಮಿತಿ ಎಲ್ಲಾ ಇಲಾಖೆಗಳನ್ನು ಒಳಗೊಂಡ ಸರ್ಕಾರಿ ಸಂಸ್ಥೆಯಾಗಿದೆ. ಈ ಸಮಿತಿಯ ಮುಖ್ಯ ಉದ್ದೇಶ ಸಂವಿಧಾನಬದ್ಧವಾಗಿ ನ್ಯಾಯ ನೀಡುವುದು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಆರಂಭವಾಗಿದೆ. ಕಾನೂನಿನ ಅರಿವಿನ ಜತೆಯಲ್ಲಿ ಉಚಿತ ನೆರವನ್ನು ನೀಡಿ ಸಮಸ್ಯೆ ಆರಂಭಕ್ಕೆ ಮೊದಲೇ ಪರಿಹಾರ ನೀಡುವುದು ಮತ್ತೊಂದು ಉದ್ದೇಶವಾಗಿದೆ. ರೂ. ೩ ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ವಿರುವವರು, ಮಹಿಳೆಯರು, ಮಕ್ಕಳು, ಸಮಾಜದಿಂದ ಶೋಷಿತರು ಸ್ವಯಂ ಘೋಷಿತ ಅರ್ಜಿ ಸಲ್ಲಿಸಿದರೆ ಸಮಿತಿ ವತಿಯಿಂದ ಉಚಿತವಾಗಿ ವಕೀಲರ ನ್ನು ನೇಮಿಸಿಕೊಡ ಲಾಗುವುದು. ಸಮಿತಿಯ ಪ್ರಮಖ ಉದ್ದೇಶವೆಂದರೆ ನ್ಯಾಯಾಲಯದಲ್ಲಿ ವಿಳಂಬವಾಗುವ ನ್ಯಾಯ ವಿತರಣೆಯನ್ನು ಲೋಕ ಅದಾಲತ್ ಮೂಲಕ ಪಡೆಯ ಬಹುದು. ರಾಜ್ಯದ ಎಲ್ಲಾ ನ್ಯಾಯಾಲ ಯಗಳಲ್ಲಿರುವ ಲೋಕ ಅದಾಲತ್ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಗೊಳಿಸುವುದು. ಎರಡೂ ಕಡೆಯ ವರಿಗೂ ಗೆಲುವಿನೊಂದಿಗೆ ಪರಿಹಾರ ವಿದೆ. ಪ್ರತಿಯೊಬ್ಬರು ಕಾನೂನಿನ ಅರಿವು ಮೂಡಿಸಿಕೊಂಡು ಕಾನೂನು ಸೇವಾ ಸಮಿತಿಯಿಂದ ದೊರೆಯುವ ಉಚಿತ ನೆರವು ಪಡೆದುಕೊಳ್ಳಬಹುದು ಎಂದು ಕರೆ ನೀಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ ಕೆ. ಗೋಪಾಲಕೃಷ್ಣ ಮಾತನಾಡಿ, ಕಾನೂನು ಸೇವಾ ಸಮಿತಿ ಹಾಗೂ ಲೋಕ ಅದಾಲತ್ ಉಚ್ಛ ನ್ಯಾಯಾಲಯದ ಆದೇಶದಿಂದ ೩ ತಿಂಗಳಿಗೊಮ್ಮೆ ನಡೆಯುತ್ತಿದ್ದು ನ್ಯಾಯಾಲಯದಲ್ಲಿ ವಿಳಂಬವಾಗುವ ಮೊಕದ್ದಮೆಗಳನ್ನು ಎರಡು ಪಕ್ಷದವರನ್ನುಕರೆಸಿ ವಿಚಾರಣೆ ಮಾಡಿ ಶೀಘ್ರ ತೀರ್ಮಾನ ನೀಡಲಾಗುವುದು. ನ್ಯಾಯಾಲಯಕ್ಕೆ ಕಟ್ಟಿದ ಶುಲ್ಕವೂ ಶೇ. ೧೦೦ ವಾಪಾಸ್ಸು ದೊರೆಯುತ್ತದೆ. ಸಣ್ಣಪುಟ್ಟ ಪ್ರಕರಣಗಳೂ ಲೋಕ ಅದಾಲತ್‌ನಿಂದ ಇತ್ಯರ್ಥಗೊಳ್ಳುತ್ತವೆ ಎಂದು ತಿಳಿಸಿದರು. ವಕೀಲ ಕೃಷ್ಣಕುಮಾರ್ ಅವರು “ಮೋಟಾರು ಕಾಯ್ದೆ ಮತ್ತು ಜಾಗೃತಿ’’ ಹಾಗೂ ವಕೀಲ ಶಂಕರ್ ಅವರು ‘ಅಸಂಘಟಿತ ಕಾರ್ಮಿಕರ ಬವಣೆ’ ವಿಷಯದ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಹಾಗೂ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ವಿಠಲ್ ನಾಗರಾಜ್ ಮಾತನಾಡಿದರು. ಪೊಲೀಸ್ ಠಾಣೆ ಪಿಎಸ್‌ಐ ರವಿಶಂಕರ್, ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್, ವಿಘ್ನೇಶ್ವರ ಬಾಲಿಕಾ ವಿದ್ಯಾಸಂಸ್ಥೆ ಶಿಕ್ಷಕ ಕೆ.ಪಿ. ಜಯಕುಮಾರ್, ಕಾರ್ಮಿಕರ ಸಂಘದ ಆಡಳಿತ ಮಂಡಳಿಯ ಪದಾಧಿಕಾ ರಿಗಳು, ಕಚೇರಿ ಸಿಬ್ಬಂದಿ ಹಾಜರಿದ್ದರು. ನಳಿನಿ ಪ್ರಾರ್ಥಿಸಿ, ಶಿಕ್ಷಕ ಜಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.