ಮಡಿಕೇರಿ, ಫೆ. ೨೫ : ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಡಿಕೇರಿಯ ರಾಜಾಸೀಟಿನಲ್ಲಿ ಪ್ರವಾಸಿಗರನ್ನು, ಮಕ್ಕಳನ್ನು ರಂಜಿಸುತ್ತಿದ್ದ ಪುಟಾಣಿ ರೈಲು ಮೂಲೆಗುಂಪಾಗಿ ಹಲವಾರು ವರ್ಷಗಳೇ ಕಳೆದಿವೆ. ಕೊಡಗಿನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಒತ್ತು ನೀಡುತ್ತೇವೆ ಎಂದು ಬೀಗುವ ನಮ್ಮ ಜನನಾಯಕರು ಹಾಗೂ ಅಧಿಕಾರಿ ವರ್ಗದ ಇಚ್ಛಾಶಕ್ತಿಯ ಕೊರತೆಗೆ ಸ್ತಬ್ದಗೊಂಡಿರುವ ಪುಟಾಣಿ ರೈಲು ಜೀವಂತ ಸಾಕ್ಷಿಯಾಗಿದೆ.
ಹಿಂದೊಮ್ಮೆ ಗಾಲ್ಫ್ ಮೈದಾನ ಸಮೀಪ ಆರಂಭಗೊAಡ ಈ ಪುಟಾಣಿ ರೈಲು ಪ್ರವಾಸಿಗರ ಕೊರತೆಯಿಂದಾಗಿ ರಾಜಾಸೀಟಿಗೆ ಸ್ಥಳಾಂತರಿಸಲ್ಪಟ್ಟಿತ್ತು. ರಾಜಾಸೀಟಿನಲ್ಲಿ ೧೧-೦೭-೧೯೯೧ ರಂದು ಪುಟಾಣಿ ರೈಲು ಉದ್ಘಾಟನೆಗೊಂಡಿತ್ತು. ನಗರಸಭೆಯ ಅಧೀನದಲ್ಲಿದ್ದ ಈ ಪುಟಾಣಿ ರೈಲು ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ರಾಜಾಸೀಟಿಗೆ ಭೇಟಿ ನೀಡುವವರು ಪುಟಾಣಿ ರೈಲಿನಲ್ಲಿ ಕೂತು ತಿಂಡಿ-ತಿನಿಸುಗಳನ್ನು ಸವಿಯುತ್ತಾ ಕೇಕೆ ಹಾಕುತ್ತಾ ಸಂಭ್ರಮಿಸದೆ ತೆರಳಲು ಸಾಧ್ಯವಿಲ್ಲ ಎಂಬಷ್ಟರ ಮಟ್ಟಿಗೆ ಈ ರೈಲು ರಾಜಾಸೀಟಿನಲ್ಲಿ ಮನರಂಜನೆಯ ಕೇಂದ್ರ ಬಿಂದುವಾಗಿತ್ತು. ಬಾಬಾ ಸಾಹೇಬ್ ಎಕ್ಸ್ಪ್ರೆಸ್ ಹೆಸರಿನಲ್ಲಿ ರಾಜಾಸೀಟಿನಲ್ಲಿ ಪ್ರವಾಸಿಗರನ್ನು ಸುತ್ತಾಡಿಸುತ್ತಿದ್ದ ಈ ರೈಲು ದುರಸ್ತಿಗೀಡಾದಾಗ ಅದನ್ನು ಇದ್ದ ಸ್ಥಿತಿಯಲ್ಲಿಯೇ ಪಡೆದು ನಿರ್ವಹಣೆ ಮಾಡುವವರಿಗೆ ವಹಿಸಲಾಗುವುದು ಎಂದು ನಗರಸಭೆ ಟೆಂಡರ್ ಕರೆದಿತ್ತು. ಟೆಂಡರ್ ಪಡೆದ ಟೆಂಡರ್ ದಾರರೋರ್ವರು ಸಾಕಷ್ಟು ಹಣ ವ್ಯಯಿಸಿ ಪುಟಾಣಿ ರೈಲನ್ನು ನಿರ್ವಹಣೆ ಮಾಡುತ್ತಿದ್ದರು. ಆದರೆ ಹಲವಾರು ಕಾರಣಗಳಿಂದ ರೈಲಿನ ನಿರ್ವಹಣೆ ಕಷ್ಟವಾದಾಗ ಆ ವ್ಯಕ್ತಿ ನಂತರದ ದಿನಗಳಲ್ಲಿ ಟೆಂಡರ್ ಪಡೆಯಲು ಮುಂದಾಗಲಿಲ್ಲ. ಇದಾದ ಬಳಿಕ ಒಂದೆರಡು ಮಂದಿ ಟೆಂಡರ್ ಪಡೆದು ಪುಟಾಣಿ ರೈಲನ್ನು ನಡೆಸಿದ್ದರು.
ಆದರೆ ಕಾಲ ಕ್ರಮೇಣ ಈ ರೈಲು ಸಂಪೂರ್ಣವಾಗಿ ದುರಸ್ತಿಗೊಳ ಗಾಯಿತು. ರೈಲ್ವೇ ಇಲಾಖೆಯಿಂದ ಮಾತ್ರ ಇದನ್ನು ಸರಿಪಡಿಸಲು ಸಾಧ್ಯ ಎಂಬ ಹಿನ್ನೆಲೆಯಲ್ಲಿ ಈ ಬಗ್ಗೆ ಆಗಿನ ಜಿಲ್ಲಾಧಿಕಾರಿ ರೈಲ್ವೇ ಇಲಾಖೆಗೆ ಪತ್ರ ಬರೆದರು. ಬಂದು ಪರಿಶೀಲಿಸಿದ ರೈಲ್ವೇ ಇಲಾಖೆ ತಂಡ ಈ ರೈಲು ನಿರ್ಮಾಣವಾಗಿ ಬಹಳ ವರ್ಷಗಳು ಕಳೆದಿದ್ದು, ಇದು ತನ್ನ ಚಾಲನಾ ಸಾಮರ್ಥ್ಯವನ್ನು ಕಳೆದುಕೊಂಡಿದೆ. ಆದ್ದರಿಂದ ಇದನ್ನು ರಿಪೇರಿ ಮಾಡಲು ಸಾಧ್ಯವಿಲ್ಲ. ಬದಲಿಗೆ ಹೊಸ ರೈಲನ್ನು ತಯಾರು ಮಾಡಬೇಕು ಎಂದು ವರದಿ ನೀಡಿತ್ತು. ಅದರಂತೆ ಸುಮಾರು ೨ ಕೋಟಿಯ ಯೋಜನೆಯನ್ನು ಆಗಿನ ಜಿಲ್ಲಾಧಿಕಾರಿಗಳು ಸಿದ್ಧಪಡಿಸಿದ್ದ ರಾದರೂ ನೂತನ ರೈಲಿನ ಯೋಜನೆ ಜಾರಿಯಾಗಲೇ ಇಲ್ಲ. ಪರಿಣಾಮ ಪುಟಾಣಿ ರೈಲು ಮೂಲೆ ಗುಂಪಾಗಿ ಶೆಡ್ಡಿನೊಳಗೆ ನಿಲ್ಲಿಸಲ್ಪಟ್ಟಿದೆ. ಟ್ರಾö್ಯಕ್ಗಳು ತುಕ್ಕು ಹಿಡಿದಿವೆ. ರಾಜಾಸೀಟಿಗೆ ಬರುವ ಪ್ರವಾಸಿಗರು ಪುಟಾಣಿ ರೈಲಿನಲ್ಲಿ ಸಂಭ್ರಮಿಸಲಾಗದೆ ನಿರಾಸೆಯಿಂದ ಹಿಂತಿರುಗುತ್ತಿದ್ದಾರೆ.
ಈ ಬಗ್ಗೆ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರನ್ನು ಪ್ರಶ್ನಿಸಿದರೆ ಪುಟಾಣಿ ರೈಲನ್ನು ಹೊಸದಾಗಿ ಆರಂಭಿಸುವ ನಿಟ್ಟಿನಲ್ಲಿ ಪುಟಾಣಿ ರೈಲಿನ ಜಾಗವನ್ನು ನಗರ ಸಭೆಗೆ ವಹಿಸುವಂತೆ ಹಿಂದಿನ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿತ್ತು. ಆದರೆ ಆ ಜಾಗ ತೋಟಗಾರಿಕಾ ಇಲಾಖೆಗೆ ವರ್ಗಾಯಿಸಲಿಟ್ಟಿರುವು ದಾಗಿ ಮಾಹಿತಿ ಸಿಕ್ಕಿದ್ದರಿಂದ ಅದನ್ನು ಅಲ್ಲಿಗೆ ಕೈ ಬಿಡಲಾಯಿತು ಎಂದು ಹೇಳುತ್ತಾರೆ. ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್ ಅವರ ಪ್ರತಿಕ್ರಿಯೆ ಬಯಸಿದರೆ ಈ ಹಿಂದೆ ಪುಟಾಣಿ ರೈಲು ಸುಸ್ಥಿತಿಯಲ್ಲಿತ್ತು . ಈ ನಡುವೆ ಎರಡೂವರೆ ವರ್ಷ ಚುನಾವಣೆ ನಡೆಯದೆ ನಗರಸಭೆ ಆಡಳಿತ ಮಂಡಳಿ ಇಲ್ಲದಿದ್ದ ಸಂದರ್ಭ ಟೆಂಡರ್ ಆಗದೆ ರೈಲು ನಿಂತಲ್ಲೇ ನಿಂತು ಸೂಕ್ತ ನಿರ್ವಹಣೆ ಇಲ್ಲದೆ ದುರಸ್ತಿಗೊಳಗಾಯಿತು ಎನ್ನುತ್ತಾರೆ.
ಆಯುಕ್ತ ವಿಜಯ ಅವರನ್ನು ಕೇಳಿದರೆ ಪುಟಾಣಿ ರೈಲು ಸ್ಥಗಿತಗೊಂಡಿರುವ ಕುರಿತು ಹಾಗೂ ಅದು ಯಾರಿಗೆ ಸೇರಿದ್ದು ಎಂಬ ಬಗ್ಗೆ ತನಗೆ ಮಾಹಿತಿಯೇ ಇಲ್ಲ ಎಂದು ಹೇಳುತ್ತಾರೆ. ಪುಟಾಣಿ ರೈಲಿಗೆ ಸಂಬAಧಿಸಿದAತೆ ಸಮಗ್ರ ಯೋಜನಾ ವರದಿ ತಯಾರಾಗುತ್ತಿದ್ದು, ಆದಷ್ಟು ಶೀಘ್ರವಾಗಿ ಚಾಲನೆಗೊಳ್ಳಲಿದೆ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಯೋಗೇಶ್ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಇನ್ನಾದರೂ ಪುಟಾಣಿ ರೈಲಿಗೆ ಕಾಯಕಲ್ಪ ಸಿಗಲಿದೆಯೇ ಅಥವಾ ಯಥಾಸ್ಥಿತಿ ಮುಂದು ವರಿಯಲಿ ದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಈ ನಿಟ್ಟಿನಲ್ಲಿ ಶಾಸಕ ಡಾ. ಮಂಥರ್ಗೌಡ ಹಾಗೂ ಜಿಲ್ಲಾಧಿಕಾರಿ ವೆಂಕಟ್ರಾಜ ಅವರು ತುರ್ತು ಗಮನ ಹರಿಸಬೇಕಿದೆ. ಸರಕಾರದಿಂದ ಸಾಧ್ಯವಾಗದಿದ್ದರೆ ಖಾಸಗಿ ಸಂಸ್ಥೆ ಗಳ ಮೂಲಕ ವಾದರೂ ಪುಟಾಣಿ ರೈಲಿಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕಿದೆ.