ವೀರಾಜಪೇಟೆ, ಫೆ. ೨೫: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೊಡಗು ಜಿಲ್ಲಾ ಪಂಚಾಯಿತಿ, ವೀರಾಜಪೇಟೆ ತಾಲೂಕು ಪಂಚಾಯಿತಿ ಆಶ್ರಯದಲ್ಲಿ ಕೆದಮುಳ್ಳೂರು ಪಂಚಾಯಿತಿ ಆವರಣದಲ್ಲಿ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಜೀವಿನಿ ಒಕ್ಕೂಟದ ತಾಲೂಕು ವಲಯ ಮೇಲ್ವಿಚಾರಕ ಸೋಮಶೇಖರ್ ಮಾತನಾಡಿ, ಸಂಜೀವಿನಿ ಸಂಘದ ಸದಸ್ಯರಿಗೆ ಸರಕಾರದ ಮೂಲಕ ಸಿ.ಐ.ಎಫ್ ಅನುದಾನ ಬಂದಿದ್ದು ಇದನ್ನು ಸರಿಯಾದ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಬೇಕು. ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಮಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಂಜೀವಿನಿ ಒಕ್ಕೂಟದಿಂದ ಸಾಲ ಪಡೆದ ಮಹಿಳೆಯರು ಸ್ವ ಉದ್ಯೋಗ ಮಾಡುವುದರೊಂದಿಗೆ ಮನೆಯಲ್ಲಿಯೇ ಉತ್ಪನ್ನಗಳನ್ನು ತಯಾರಿಸಿ ನಂತರ ಮಾರಾಟದಿಂದ ಲಾಭ ಗಳಿಸಬೇಕು ಎಂದರು.
ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ. ಉತ್ತಪ್ಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಸಂಘ ಸಂಸ್ಥೆಗಳ ಮೂಲಕ ಸ್ವ ಉದ್ಯೋಗದೊಂದಿಗೆ ಸ್ವಾವಲಂಬಿಗಳಾಗಿ ಜೀವನ ನಡೆಸಬೇಕೆಂದರು.
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಎA. ಇಸ್ಮಾಯಿಲ್, ತಾಯಮ್ಮ, ಮೀನಾಕ್ಷಿ, ಜಯಂತಿ, ವಿಮಲಾ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪಿ.ಎನ್. ಸಾವಿತ್ರಿ, ಕಾರ್ಯದರ್ಶಿ ಎ.ಪಿ. ವಿಮಲಾ, ಖಜಾಂಚಿ ಪಿ.ಎಸ್. ಸುಮಾ, ಸಮುದಾಯ ಸಂಪನ್ಮೂಲ ವ್ಯಕ್ತಿ ವಿಕೇಂದ್ರಿಕೃತ ತರಬೇತಿದಾರರಾದ ಕೆ.ಪಿ. ಶೈನಿ, ಸಮುದಾಯ ಸಂಪನ್ಮೂಲ ವ್ಯಕ್ತಿ ಎಂ.ಎA. ರೇವತಿ, ಶೈನಿ, ಮಡಿಕೇರಿಯ ಕೃಷಿ ಸಹಾಯಕಿ ಎಂ.ಎಸ್. ರಮ್ಯ ಮತ್ತು ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.