*ಗೋಣಿಕೊಪ್ಪ, ಫೆ. ೨೫: ಪೊನ್ನಂಪೇಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ೮ನೇ ವಾರ್ಷಿಕ ಮಹಾಸಭೆ ಶಾಲೆಯ ಶತಮಾನೋತ್ಸವ ಸಭಾಂಗಣದಲ್ಲಿ ಮೂಕಳೇರ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘವು ಸುಮಾರು ೩೦೦ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದ್ದು, ಸಂಪೂರ್ಣವಾಗಿ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದೆ ಎಂದು ಮೂಕಳೇರ ಕುಶಾಲಪ್ಪ ಹೇಳಿದರು.
ಇದೇ ಸಂದರ್ಭ ಕೋಳೆರ ಗೋಕುಲ್ ಅವರು ಸ್ಥಾಪಿಸಿದ ದತ್ತಿ ನಿಧಿಯಲ್ಲಿ ಹೆಚ್.ಕೆ. ಪ್ರಭು ಹಾಗೂ ಮಂಜುಳಾ ದಂಪತಿಯ ಪುತ್ರಿ ಸ್ನೇಹ ಎಂಬ ವಿದ್ಯಾರ್ಥಿನಿಗೆ ೨೦ ಸಾವಿರ ರೂಪಾಯಿಗಳನ್ನು ನೀಡಲಾಯಿತು.
ಇದೇ ಹಣದಲ್ಲಿ ರೂ. ೧೦,೦೦೦ ವನ್ನು ಪ್ರಭು ದಂಪತಿ ಇದೇ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದಿ ಅತಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗೆ ಪ್ರೋತ್ಸಾಹ ಧನವಾಗಿ ನೀಡುವಂತೆ ದತ್ತಿ ನಿಧಿ ಸ್ಥಾಪಿಸಿದರು.
ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ವಿದ್ಯಾರ್ಥಿಗಳಾದ ಜೆ.ಎ ದೀಪಿಕಾ ಮತ್ತು ಜೆ.ಕೆ. ಗಣೇಶ್ ಎಂಬವರುಗಳಿಗೆ ಪ್ರೋತ್ಸಾಹಕ ನಗದು ಬಹುಮಾನ ನೀಡಲಾಯಿತು. ಜೊತೆಗೆ ಪುಣೆಯಲ್ಲಿ ನಡೆದ ವಯಸ್ಕರ ಓಟದಲ್ಲಿ ತೃತೀಯ ಸ್ಥಾನವನ್ನು ಪಡೆದ ಪೆಮ್ಮಂಡ ಅಪ್ಪಯ್ಯ ಅವರನ್ನು ಸನ್ಮಾನಿಸಲಾಯಿತು.
ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಕಳೆದ ಸಾಲಿನ ವರದಿಯನ್ನು ವಾಚಿಸಿದರು. ಶಿಕ್ಷಕಿ ಹಾಗೂ ಸಂಘದ ನಿರ್ದೇಶಕಿ ರೋಸಿ ಆಡಳಿತ ಮಂಡಳಿಯ ವರದಿಯನ್ನು ವಾಚಿಸಿದರು. ಲೆಕ್ಕಪತ್ರ ಮಂಡನೆಯನ್ನು ದಾದು ಪೂವಯ್ಯ ನೆರವೇರಿಸಿದರು.
ಕೋಳೆರ ದಯಾ ಚಂಗಪ್ಪ, ಚೇಂದಿರ ನಿರ್ಮಲಾ ಬೋಪಣ್ಪ, ರೇಖಾ ಶ್ರೀಧರ್, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಬಾನಂಡ ರಮೇಶ್, ಸ್ಥಾಪಕ ಅಧ್ಯಕ್ಷ ಚಂಗಪ್ಪ, ಮುಖ್ಯ ಶಿಕ್ಷಕಿ ಝಾನ್ಸಿ ಇದ್ದರು. ಅಮ್ಮತ್ತಿರ ವಾಸುವರ್ಮ ನಿರೂಪಿಸಿದರು.