ಮಡಿಕೇರಿ, ಫೆ. ೨೪: ಕಳೆದ ೨ ದಶಕಗಳಿಂದ ಹದಗೆಟ್ಟಿರುವ ಕೊಳಕೇರಿ - ಕೋಕೇರಿ ರಸ್ತೆ ದುರಸ್ತಿಗೆ ಆಗ್ರಹಿಸಿರುವ ಗ್ರಾಮಸ್ಥರು ಮಾರ್ಚ್ ೧೦ರೊಳಗೆ ಸೂಕ್ರ ಕ್ರಮಕೈಗೊಳ್ಳದಿದ್ದಲ್ಲಿ ಮಾ. ೧೧ ರಿಂದ ರಸ್ತೆ ತಡೆ ನಡೆಸಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳ ಲಾಗುವುದು ಎಂದು ಎಚ್ಚರಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಕೇರಿ ನಿವಾಸಿ ಚೇನಂಡ ಗಿರೀಶ್ ಪೂಣಚ್ಚ, ಕೊಳಕೇರಿ-ಕೋಕೇರಿ ರಸ್ತೆ ತೀವ್ರ ಹದಗೆಟ್ಟಿದ್ದು ೫ ಕಿ.ಮೀ ರಸ್ತೆ ಕಳೆದ ೨೦ ವರ್ಷದಿಂದ ಡಾಂಬರು ಕಂಡಿಲ್ಲ. ಇದರಿಂದ ತೀವ್ರ ಸಮಸ್ಯೆ ಉಂಟಾಗಿದ್ದು, ಸಂಚರಿಸುವುದು ತ್ರಾಸದಾಯಕವಾಗಿದೆ. ಗ್ರಾಮಗಳಲ್ಲಿ ೩,೫೦೦ ಮತದಾರರಿದ್ದು, ಮರಂದೋಡ, ಬಾವಲಿ, ಕಿರಂದಾಡು, ನರಿಯಂದಡ ಗ್ರಾಮ ಮತ್ತು ವೀರಾಜಪೇಟೆಗೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದೆ. ರಸ್ತೆಯಲ್ಲಿ ಪ್ರತಿನಿತ್ಯ ಖಾಸಗಿ ವಾಹನ, ಬಸ್ ಅಲ್ಲದೆ ಶಾಲಾ ವಾಹನಗಳು ಸಂಚರಿಸುತ್ತವೆ. ವಿದ್ಯಾರ್ಥಿಗಳು ಕೂಡ ಇದೇ ರಸ್ತೆ ಅವಲಂಬಿಸಿದ್ದು, ಹದಗೆಟ್ಟ ರಸ್ತೆಯಿಂದ ಅಪಾಯದ ಭೀತಿ ಸೃಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ, ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿ, ಶಾಸಕರು, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಇದುವರೆಗೂ ಸ್ಪಂದನ ದೊರೆತಿಲ್ಲ. ಕಳೆದ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದೆವು. ಆ ಸಂದರ್ಭ ಎ.ಎಸ್. ಪೊನ್ನಣ್ಣ ಅವರು ಗೆದ್ದು ಬಂದರೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಅದು ಇದುವರೆಗೂ ಈಡೇರಿಲ್ಲ. ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಗಳಿಗೆ ದಾಖಲೆ ಸಮೇತ ಪತ್ರ ಬರೆದು, ವೀಡಿಯೋಗಳನ್ನು ಕಳುಹಿಸಲಾಗಿದೆ. ಜ. ೨೭ ರಂದು ಶಾಸಕ ಎ.ಎಸ್. ಪೊನ್ನಣ್ಣ ಅವರಿಗೂ ಮನವಿ ಪತ್ರ ಸಲ್ಲಿಸಲಾಗಿದೆ. ಮಾ. ೧೦ ರೊಳಗೆ ಸೂಕ್ತ ಭರವಸೆ ನೀಡಬೇಕು. ಇಲ್ಲದಿದ್ದಲ್ಲಿ ಗ್ರಾಮಸ್ಥರು ಒಟ್ಟಾಗಿ ಮಾ. ೧೧ಕ್ಕೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು. ಮುಂದಿನ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಗಿರೀಶ್ ಪೂಣಚ್ಚ ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಗ್ರಾಮಸ್ಥರುಗಳಾದ ಚೇನಂಡ ಜಗದೀಶ್ ನಂದ, ಚೆರುವಾಳಂಡ ಲವಿನ್, ಎಂ.ಎ. ಮೊಯ್ದು, ಎಂ.ಎA. ಮೊಹಮ್ಮದ್ ಹಾಜರಿದ್ದರು.