ಕೂಡಿಗೆ, ಫೆ. ೨೪: ಕೃಷಿಯ ಬಗ್ಗೆ ಒಲವು ಅಗತ್ಯ. ಕೃಷಿ ಪ್ರಧಾನ ಪ್ರಾಂತ್ಯಗಳಲ್ಲಿ ಹಳ್ಳಿಗಾಡಿನ ಸೊಗಡು ವೃದ್ದಿಸುವ ಚಟುವಟಿಕೆಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಕೃಷಿಯ ಮಹತ್ವದ ಬಗ್ಗೆ ಅರಿವು ಮೂಡಿಸುವಂತಾಗಬೇಕಿದೆ ಎಂದು ಅರಮೇರಿ ಕಳಂಚೇರಿ ಮಠಾಧೀಶರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕರೆ ನೀಡಿದರು.
ಕುಶಾಲನಗರ ತಾಲೂಕಿನ ತೊರೆನೂರಿನ ಸೂರ್ಯೋದಯ ಪುರುಷರ ಸ್ವಸಹಾಯ ಸಂಘದ ೨೦ನೇ ವಾರ್ಷಿಕೋತ್ಸವ ಅಂಗವಾಗಿ ಗ್ರಾಮದ ಶ್ರೀ ಕಾವೇರಿ ಮಾತಾ ರೈತ ಕೂಟ, ಗ್ರಾಮ ಪಂಚಾಯಿತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ದೇವಾಲಯ ಸಮಿತಿ, ಗ್ರಾಮದ ವಿವಿಧ ಸಂಘ ಸಂಸ್ಥೆಗಳು, ಮಹಿಳಾ ಮತ್ತು ಪುರುಷರ ಸ್ವಸಹಾಯ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ, ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರೈತರ ಕನ್ನಡ ಸಿರಿ ಸಂಕ್ರಾAತಿ ಸುಗ್ಗಿ ಹಬ್ಬ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಇರುವ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವುದಕ್ಕೆ ಪ್ರಮುಖ ಆದ್ಯತೆ ನೀಡಬೇಕು. ಕೃಷಿಕರು ಸಂಘಟಿತರಾಗಿ, ಹೊಸ ಚಿಂತನೆಗಳ ಮೂಲಕ ಕೃಷಿ ಉತ್ಪನ್ನ ಸಹಕಾರ ಸಂಘ ಹಾಗೂ ಒಕ್ಕೂಟಗಳನ್ನು ರಚಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಮುಂದಾಗಬೇಕಿದೆ ಎಂದು ಹೇಳಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಸ್ವಸಹಾಯ ಸಂಘಗಳ ಮೂಲಕ ಲಕ್ಷಾಂತರ ಮಂದಿ ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ಆರ್ಥಿಕ ಮಟ್ಟವನ್ನು ವೃದ್ದಿಸಿ ಬದುಕು ಕಟ್ಟಿಕೊಳ್ಳುವಲ್ಲಿ ಸಹಕಾರ ಸಂಘಗಳ ಪಾತ್ರ ಬಹುಮುಖ್ಯವಾಗಿದೆ ಎಂದರು.
ಗ್ರಾಮೀಣ ಸೊಗಡು ನಶಿಸಿ ಹೋಗದಂತೆ ಉಳಿಸಿ ಬೆಳೆಸಲು, ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಇಂತಹ ಕಾರ್ಯಕ್ರಮಗಳು ಅವಶ್ಯಕ ಎಂದರು.
ರೈತ, ಬಿಗ್ ಬಾಸ್ ಖ್ಯಾತಿಯ ಹಳ್ಳಿಕಾರ್ ವರ್ತೂರು ಸಂತೋಷ್ ಮಾತನಾಡಿ; ಭಾರತದ ಅರ್ಧದಷ್ಟು ರಾಸುಗಳಿಗೆ ಹಳ್ಳಿಕಾರ್ ಮಾತೃ ಸ್ವರೂಪಿ, ಹಳ್ಳಿಕಾರ್ ತಳಿ ವೃದ್ದಿಗೆ ರೈತರು ಮುಂದಾಗಬೇಕಿದೆ ಎಂದು ಹೇಳಿದರು. ಜೀವನದಲ್ಲಿ ಯಶಸ್ಸು ಗಳಿಸುವ ವಿಷಯಗಳತ್ತ ಮಾತ್ರ ನಮ್ಮ ಗಮನವಿರಬೇಕಿದೆ. ಇತರರನ್ನು ತೆಗಳುವುದು, ಪರರ ಜೀವನದ ಬಗ್ಗೆ ಟೀಕೆ ಮಾಡುವುದರಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವಿನಾಕಾರಣ ಕಾಲಹರಣ ಮಾಡದೆ ಯಶಸ್ಸಿಗೆ ಶ್ರಮಿಸಬೇಕಿದೆ ಎಂದು ಕರೆ ನೀಡಿದರು.
ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ, ಕೊಡಗು ವಿವಿ ಕುಲಪತಿ ಪ್ರೊ.ಅಶೋಕ್ ಆಲೂರು, ಉರಗ ರಕ್ಷಕ ಸ್ನೇಕ್ ಶ್ಯಾಂ, ಜಿ.ಪಂ. ಮಾಜಿ ಸದಸ್ಯ ಬಿ.ಬಿ.ಭಾರತೀಶ್, ಕಸಾಪ ನಿಕಟ ಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿದರು. ಸೂರ್ಯೋದಯ ಪುರುಷರ ಸ್ವಸಹಾಯ ಸಂಘದ ಪ್ರಥಮ ಪ್ರತಿನಿಧಿ ಟಿ.ಬಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ತೊರೆನೂರು ಗ್ರಾಪಂ ಅಧ್ಯಕ್ಷೆ ಶೋಭಾ ಪ್ರಕಾಶ್, ಉಪಾಧ್ಯಕ್ಷೆ ರೂಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಗೌರಮಣಿ,
ಉದ್ಯಮಿ ನಟೇಶ್ ಗೌಡ ಸೇರಿದಂತೆ ಕಾರ್ಯಕ್ರಮದ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು ಇದ್ದರು.
ಭವ್ಯ ಮೆರವಣಿಗೆ-ರಾಸುಗಳ ಪ್ರದರ್ಶನ
ಇದಕ್ಕೂ ಮುನ್ನ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪೂರ್ಣಕುಂಭ ಮೆರವಣಿಗೆಗೆ ಚಾಲನೆ ನೀಡಲಾಯಿತು. ೬೦ಕ್ಕೂ ಹೆಚ್ಚು ಅಲಂಕೃತ ರಾಸುಗಳ ಸಮ್ಮುಖದಲ್ಲಿ ಎತ್ತಿನ ಬಂಡಿಯಲ್ಲಿ ವಾದ್ಯಗೋಷ್ಠಿಗಳ ಸಮ್ಮುಖದಲ್ಲಿ ಗಣ್ಯರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.
ನಂತರ ರಾಸುಗಳ ಪ್ರದರ್ಶನದಲ್ಲಿ ಅಲಂಕೃತ ರಾಸುಗಳು, ಶ್ವಾನ, ಮೇಕೆ, ಕುರಿಗಳ ಪ್ರದರ್ಶನ ನಡೆಯಿತು. ವಸ್ತು ಪ್ರದರ್ಶನದಲ್ಲಿ ಸಿರಿಧಾನ್ಯ, ಜೋಳ, ಭತ್ತ, ರಾಗಿ ರಾಶಿಯ ಪ್ರದರ್ಶನ ಜೊತೆಯಲ್ಲಿ ಗ್ರಾಮೀಣ ಸೊಗಡು ಬಿಂಬಿಸುವ ಹಿಂದಿನ ಕಾಲದ ಕೃಷಿ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ನಂತರ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರಿಗೆ ಗ್ರಾಮೀಣ ಕ್ರೀಡೆಗಳಾದ ಲಗೋರಿ, ಬುಗರಿ ಆಟ, ಹರಳುಮಣೆ, ಕುಂಟೆಬಿಲ್ಲೆ, ಕಟ್ಟೆಮಣೆ ಸೇರಿದಂತೆ ವಿವಿಧ ಶಾಲಾ ಬಾಲಕ ಬಾಲಕಿಯರಿಗೆ ಕಬ್ಬಡಿ ಪಂದ್ಯಾಟಗಳನ್ನು ಆಯೋಜಿಸಲಾಗಿತ್ತು.
ಗ್ರಾಮದ ಸಾವಿರಕ್ಕೂ ಅಧಿಕ ಮಹಿಳೆಯರು, ಪುರುಷರು ಹೊಸ ವರ್ಷದ ಮಾದರಿಯಲ್ಲಿ ಹೊಸ ಉಡುಪುಗಳನ್ನು ತೊಟ್ಟು ಸಂಭ್ರಮಿಸುತ್ತಿದ್ದುದು ಕಂಡುಬAತು.
ಪುರುಷರ ಸ್ವಸಹಾಯ ಸಂಘದ ಪ್ರಥಮ ಅಧ್ಯಕ್ಷ ಟಿ.ಕೆ.ಪಾಂಡುರAಗ ಪ್ರಾಸ್ತಾವಿಕ ನುಡಿಗಳಾಡಿದರು, ಎಚ್.ಬಿ.ಚಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು, ಕೆ.ಎಸ್.ಕೃಷ್ಣೇಗೌಡ ಸ್ವಾಗತಿಸಿ, ವಂದಿಸಿದರು.
-ಕೆ.ಕೆ.ನಾಗರಾಜಶೆಟ್ಟಿ