ಮಡಿಕೇರಿ, ಫೆ. ೨೪: ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಮನ್ವಯತೆಯ ಕೊರತೆಯಿಂದ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ ಸಮಸ್ಯೆಯನ್ನು ಸ್ಥಳದಲ್ಲಿಯೇ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಇತ್ಯರ್ಥಪಡಿಸಿದ ಘಟನೆ ಭಾಗಮಂಡಲದಲ್ಲಿ ನಡೆದಿದೆ.

ಸರ್ವೆ ನಂ ೭೪ ರಲ್ಲಿ ಭಾಗಮಂಡಲ ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿದ್ದು ಪಕ್ಕದ ಸರ್ವೆ ನಂ ಜಾಗ ದೇವರಕಾಡು ಅರಣ್ಯಕ್ಕೆ ಸೇರಿದ್ದಾಗಿರುತ್ತದೆ. ದೇವರ ಕಾಡು ಅರಣ್ಯ ಪ್ರದೇಶಕ್ಕೆ ಅತಿಕ್ರಮಣ ಪ್ರವೇಶ ಮಾಡಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ನೀರಿನ ಪಂಪ್, ಮೋಟಾರ್ ಹಾಗೂ ಪೈಪ್'ಗಳನ್ನು ವಶಪಡಿಸಿಕೊಂಡಿದ್ದರು. ಜೊತೆಗೆ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ರಸ್ತೆ ಮಾಡಿದ್ದಾರೆ ಎಂದು ಕೇಸ್ ದಾಖಲಿಸಿದ್ದರು.

ಇಂದು ಭಾಗಮಂಡಲದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲು ಶಾಸಕ ಎ.ಎಸ್. ಪೊನ್ನಣ್ಣ ಅವರು ಆಗಮಿಸಿದಾಗ ಭಾಗಮಂಡಲ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ನಿವಾಸಿಗಳು ಸಮಸ್ಯೆಯನ್ನು ಬಗೆಹರಿಸಲು ಶಾಸಕರಲ್ಲಿ ಕೋರಿಕೊಂಡರು.

ತಕ್ಷಣವೇ ಪೊನ್ನಣ್ಣ ಸ್ಥಳಕ್ಕೆ ಅರಣ್ಯ ಅಧಿಕಾರಿಗಳನ್ನು ಕರೆಸಿಕೊಂಡು ಪರಿಶೀಲನೆ ನಡೆಸಿ ಅರಣ್ಯ ಇಲಾಖೆ ಗಡಿಯನ್ನು ಇನ್ನೂ ಕೂಡ ಗುರುತಿಸದೇ ಇರುವುದರಿಂದ ಹಾಗೂ ಕುಡಿಯುವ ನೀರು ಮೂಲಭೂತ ಹಕ್ಕು ಆಗಿರುವುದರಿಂದ ತಕ್ಷಣವೇ ಮೋಟಾರ್ ಪಂಪ್‌ಗಳನ್ನು ಹಿಂತಿರುಗಿಸಿ ನೀರಿನ ವ್ಯವಸ್ಥೆಗೆ ಅಡ್ಡಿಪಡಿಸದಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಕಾನೂನು ರೀತಿ ಅಡಚಣೆ ಬಂದರೆ ತಾವು ಇತ್ಯರ್ಥ ಪಡಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ಗ್ರಾಮಸ್ಥರಿಗೆ ನೆರವಾಗಿದ್ದಾರೆ.

ಜನರ ಸಮಸ್ಯೆಗೆ ಸ್ಪಂದಿಸಿ ದುರ್ಗಮ ಹಾದಿಯನ್ನು ಕ್ರಮಿಸಿ ಪರಿಶೀಲಿಸಿ ತಕ್ಷಣವೇ ಸ್ಥಳದಲ್ಲಿಯೇ ಪರಿಹಾರ ಒದಗಿಸಿದ ಎ.ಎಸ್.ಪೊನ್ನಣ್ಣ ಅವರ ಕಾರ್ಯಕ್ಷಮತೆಗೆ ಭಾಗಮಂಡಲ ಸುತ್ತಮುತ್ತಲಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.