ಮಡಿಕೇರಿ, ಫೆ. ೨೩: ಸಂವಿಧಾನ ದಿನಾಚರಣೆ ಪ್ರಯುಕ್ತ ಕೊಡಗು ಜಿಲ್ಲೆಯಲ್ಲಿ ಕಳೆದ ೨೭ ದಿನಗಳಿಂದ ಹಮ್ಮಿಕೊಂಡಿರುವ ಜಾಗೃತಿ ಜಾಥಾ ಅಭಿಯಾನದ ‘ಸ್ತಬ್ಧಚಿತ್ರ’ ಒಳಗೊಂಡ ವಾಹನವನ್ನು ಬುಧವಾರ ನಗರದ ರಾಜಾಸೀಟಿನಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿ ಕೊಳ್ಳಲಾಯಿತು.
ನಗರದ ರಾಜಾಸೀಟು ಉದ್ಯಾನವನ ಬಳಿಯಿಂದ ಹೊರಟ ಸಂವಿಧಾನ ಜಾಗೃತಿ ಅಭಿಯಾನದ ಸ್ತಬ್ಧಚಿತ್ರ ಒಳಗೊಂಡAತೆ ಮೆರವಣಿಗೆಯಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಆಟೋ ಚಾಲಕರು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಸಂತ ಮೈಕಲರ ಶಾಲೆಯ ವಿದ್ಯಾರ್ಥಿಗಳು, ಸ್ತಿçÃಶಕ್ತಿ ಗುಂಪುಗಳು ಇತರರು ಪಾಲ್ಗೊಂಡಿದ್ದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್. ವೀಣಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೇಖರ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಿ. ಬಸಪ್ಪ, ಪೌರಾಯುಕ್ತ ವಿಜಯ್, ಸ್ಕೌಟ್ಸ್ ಮತ್ತು ಗೈಡ್ಸ್ನ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ, ಸ್ಕೌಟ್ಸ್ ಮತ್ತು ಗೈಡ್ಸ್ನ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ, ದಲಿತ ಸಂಘರ್ಷ ಸಮಿತಿಯ ಸಂಘಟಕ ಹೆಚ್.ಎಲ್. ದಿವಾಕರ, ನಿರ್ವಾಣಪ್ಪ, ಹೊನ್ನಪ್ಪ, ವಿವಿಧ ಇಲಾಖೆ ಅಧಿಕಾರಿಗಳು ಇತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಜಾಥಾವು ರಾಜಾಸೀಟು ಬಳಿಯಿಂದ ಹೊರಟು ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ ಮೂಲಕ ಕಾವೇರಿ ಕಲಾಕ್ಷೇತ್ರಕ್ಕೆ ಆಗಮಿಸಿತು. ಸಂವಿಧಾನದ ಮಹತ್ವ ತಿಳಿಯುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ೧೦೩ ಗ್ರಾಮ ಪಂಚಾಯಿತಿಗಳು ಸೇರಿದಂತೆ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳು ಒಳಗೊಂಡು ಕಳೆದ ೨೭ ದಿನಗಳ ಕಾಲ ಸಂವಿಧಾನ ಜಾಗೃತಿ ಜಾಥಾ ಅಭಿಯಾನ ನಡೆದಿದೆ.