ಸೋಮವಾರಪೇಟೆ, ಫೆ. ೨೩: ತಾಲೂಕು ಹೋಂ ಸ್ಟೇ ಅಸೋಸಿಯೇಷನ್ ನೇತೃತ್ವದಲ್ಲಿ ಆಯತನ ರೆಸಾರ್ಟ್ ಹಾಗೂ ಬೆಟ್ಟದಹಳ್ಳಿ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತದ ಪ್ರದೇಶದಲ್ಲಿ ಸ್ವಚ್ಛತಾ ಆಂದೋಲನ ನಡೆಯಿತು.

ಜಲಪಾತದ ಪ್ರದೇಶದಲ್ಲಿ ಪ್ರವಾಸಿಗರು ಹಾಕಿದ್ದ ತ್ಯಾಜ್ಯಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಯಿತು. ಇದರೊಂದಿಗೆ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಪ್ರವಾಸಿಗರಿಗೆ ತಿಳುವಳಿಕೆ ನೀಡಲಾಯಿತು.

ಸೋಮವಾರಪೇಟೆ ಹೋಂಸ್ಟೇ ಅಸೋಸಿಯೇಷನ್ ಸದಸ್ಯರುಗಳು, ಆಯತನ ರೆಸಾರ್ಟ್ ಸಿಬ್ಬಂದಿ ವರ್ಗದವರು ಹಾಗೂ ಬೆಟ್ಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಸ್ವಚ್ಛತಾ ಆಂದೋಲನದಲ್ಲಿ ಭಾಗವಹಿಸಿದ್ದರು.

ಮುಂದಿನ ದಿನಗಳಲ್ಲಿ ತಾಲೂಕಿನ ಇತರ ಪ್ರವಾಸಿ ತಾಣಗಳಲ್ಲೂ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗುವುದು. ಸೋಮವಾರಪೇಟೆ ತಾಲೂಕಿನ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸಲು ನಿರಂತರವಾಗಿ ಶ್ರಮಿಸಲಾಗುವುದು. ಕಳೆದ ಬಾರಿ ಕೋವರ್ ಕೊಲ್ಲಿ ಜಂಕ್ಷನ್ ಬಳಿ ರೂ. ೨೫ ಸಾವಿರ ವೆಚ್ಚದಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗಿದೆ ಎಂದು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ. ರೋಹಿತ್ ತಿಳಿಸಿದರು.

ಸ್ವಚ್ಛತಾ ಆಂದೋಲನದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿಮಲಾಕ್ಷಿ, ಅಸೋಸಿಯೇಷನ್ ಉಪಾಧ್ಯಕ್ಷ ಯೋಗೇಶ್ ಪಟೇಲ್, ಕಾರ್ಯದರ್ಶಿಯಾದ ಅಭಿನಂದ್ ಎಸ್.ಎಲ್. ಹಾಗೂ ಖಜಾಂಚಿ ಪ್ರೀತಮ್ ಸೇರಿದಂತೆ ಇತರರು ಭಾಗವಹಿಸಿದ್ದರು.