ಮಡಿಕೇರಿ, ಫೆ. ೨೩: ಇಡೀ ವಿಶ್ವದಲ್ಲಿ ಭಾರತವು ಶ್ರೇಷ್ಠ ಸಂವಿಧಾನವನ್ನು ಹೊಂದಿದ್ದು, ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬರೂ ಸಮಾನರು ಎಂಬುದನ್ನು ಪ್ರತಿಪಾದಿಸಲಾಗಿದೆ. ಅದರಂತೆ ಪ್ರತಿಯೊಬ್ಬರೂ ನಡೆದುಕೊಳ್ಳುವಂತಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.
ಸಂವಿಧಾನ ಜಾಗೃತಿ ಜಾಥಾ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಹಾಗೂ ನಗರಸಭೆ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬುಧವಾರ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತದ ಪ್ರಜೆಗಳಾದ ಪ್ರತಿಯೊಬ್ಬರೂ ಸಮನಾಗಿ ಬದುಕುವ ಹಕ್ಕು ಹೊಂದಿದ್ದಾರೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಪ್ರತಿ ಕ್ಷೇತ್ರದಲ್ಲೂ ಸಹ ಸಮಾನ ಅವಕಾಶವನ್ನು ಹೊಂದಿದ್ದಾರೆ. ಸಂವಿಧಾನದಡಿ ಪ್ರತಿಯೊಬ್ಬರೂ ಸಮಾನರಾಗಿದ್ದು, ಬಡವ-ಬಲ್ಲಿದ, ಮೇಲು-ಕೀಳು ಎಂಬುದಿಲ್ಲ. ರಾಷ್ಟçದಲ್ಲಿ ಯಾರೂ ಸಹ ಅಸಮಾನತೆ ಹೊಂದಿರಬಾರದು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಭಾರತ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ತಿಳಿಸಲಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಒಂದು ಸಮುದಾಯಕ್ಕೆ ಸೀಮಿತವಲ್ಲ. ಅವರೊಬ್ಬ ಪ್ರಬುದ್ಧ, ಜನಪರ ನಾಯಕ, ಮಾನವತಾವಾದಿ ಆಗಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರಸ್ತಾಪಿಸಿರುವ ಒಂದೊAದು ವಿಷಯಗಳು ಸಹ ಅತ್ಯದ್ಭುತವಾಗಿದ್ದು, ಜತನ ಮಾಡಿಕೊಳ್ಳುವಂತಿದ್ದು, ಭಾರತದ ಮುನ್ನೋಟವನ್ನು ಒಳಗೊಂಡಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್. ವೀಣಾ ಮಾತನಾಡಿ, ಅಂಬೇಡ್ಕರ್ ಒಬ್ಬ ವ್ಯಕ್ತಿಯಲ್ಲ. ಅವರೊಬ್ಬ ಬಹುಮುಖ ಪ್ರತಿಭೆ ವ್ಯಕ್ತಿತ್ವ ಹೊಂದಿರುವ ಸಮತಾವಾದಿ, ಸಂವಿಧಾನ ಶಿಲ್ಪಿ. ಭಾರತದ ಸಂವಿಧಾನ ಇಲ್ಲದಿದ್ದರೆ ರಾಷ್ಟçದ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟಸಾಧ್ಯ ಎಂದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ದಿವಾಕರ್ ಮಾತನಾಡಿ, ಭಾರತ ಸಂವಿಧಾನವು ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ, ಸಮಭಾವ, ಎಲ್ಲರನ್ನು ಒಳಗೊಂಡಿದೆ ಎಂದರು.
ನಗರಸಭೆ ಸದಸ್ಯ ಮನ್ಸೂರ್ ಮಾತನಾಡಿ, ಸಾಮಾಜಿಕ, ಆರ್ಥಿಕ, ರಾಜಕೀಯ ಅಭಿವ್ಯಕ್ತಿ ಹೊಂದಿದ್ದು, ಸಮಾನ ಅವಕಾಶವನ್ನು ಸಂವಿಧಾನ ಒಳಗೊಂಡಿದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ನ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ ಮಾತನಾಡಿ, ಭಾರತ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಒದಗಿಸಿದೆ ಆ ನಿಟ್ಟಿನಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಅರಿವು ಮೂಡಿಸಿದೆ ಎಂದು ಹೇಳಿದರು.
ಭಾಗಮಂಡಲ ಕಾವೇರಿ ಕಾಲೇಜಿನ ಪ್ರಾಂಶುಪಾಲ ಕೆ.ಜೆ. ದಿವಾಕರ, ತಹಶೀಲ್ದಾರ್ ಪ್ರವೀಣ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ನಗರಸಭೆ ಸದಸ್ಯ ಬಶೀರ್, ಸ್ಕೌಟ್ಸ್ ಮತ್ತು ಗೈಡ್ಸ್ನ ಕಾರ್ಯದರ್ಶಿ ಬೊಳ್ಳಜ್ಜೀರ ಅಯ್ಯಪ್ಪ, ಹೊನ್ನಪ್ಪ, ಕಲಾವಿದ ರಾಜು ಮತ್ತು ತಂಡದವರು ಅಂಬೇಡ್ಕರ್ ಕುರಿತು ಕ್ರಾಂತಿ ಗೀತೆ ಹಾಡಿದರು. ನಗರಸಭೆ ಪೌರಾಯುಕ್ತ ವಿಜಯ್ ಸ್ವಾಗತಿಸಿದರು, ಬಾಲಕೃಷ್ಣ ರೈ ವಂದಿಸಿದರು.