ಚೆಯ್ಯಂಡಾಣೆ, ಫೆ. ೨೩: ಇತಿಹಾಸ ಪ್ರಸಿದ್ಧ ಕುಂಜಿಲ ಪೈನರಿ ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಔಲಿಯರವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜುಮಾ ನಮಾಜಿನ ಬಳಿಕ ದರ್ಗಾಗೆ ತೆರಳಿದ ಸಮುದಾಯದವರು ಜಮಾಅತ್ ಮುದರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ಅವರ ನೇತೃತ್ವದಲ್ಲಿ ಮಖಾಂ ಝಿಯಾರತ್ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಎ. ಶೌಕತ್ ಅಲಿ ಧ್ವಜಾರೋಹಣ ನೆರವೇರಿಸಿ ಉರೂಸ್ಗೆ ಚಾಲನೆ ನೀಡಿದರು.
ಉರೂಸ್ ಸಮಾರಂಭವು ತಾ.೨೭ ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದ್ದು, ತಾ.೨೬ ರಿಂದ ಮಧ್ಯಾಹ್ನ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಅದೇ ದಿನ ಸಂಜೆ ೪ ಗಂಟೆಗೆ ಮಸೀದಿಯಲ್ಲಿ ಮೌಲೂದ್ ಪಾರಾಯಣ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಲಿದೆ.
ಈ ಸಂದರ್ಭ ಜಮಾಅತ್ ಉಪಾಧ್ಯಕ್ಷ ಇಬ್ರಾಹಿಂ, ಕಾರ್ಯದರ್ಶಿ ಸಹೀದ್, ಜಮಾಅತ್ ಮಾಜಿ ಅಧ್ಯಕ್ಷ ಮಹಮ್ಮದ್ ಹಾಜಿ ಕುಂಜಿಲ, ಮೂಸಾ ಪತ್ತಂಗೋಡ್, ಹಮೀದ್, ಉಸ್ಮಾನ್ ವಯಕೋಲ್, ಜಮಾಅತ್ ರಿಲೀಫ್ ಸಮಿತಿ ಅಧ್ಯಕ್ಷ ಬಷೀರ್ ಪೊಯಕ್ಕರೆ, ಸಲಹಾ ಸಮಿತಿ ಸದಸ್ಯರು, ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.