ನಾಪೋಕ್ಲು, ಫೆ. ೨೧: ಮೂರ್ನಾಡಿನ ನಕ್ಷತ್ರ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಆಟೋ ಮಾಲೀಕರ ಹಾಗೂ ಚಾಲಕರ ಕುಟುಂಬಗಳ ಸಮ್ಮಿಲನ ಕಾರ್ಯಕ್ರಮ ಮೂರ್ನಾಡು ಪಾಂಡಾಣೆ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ ಮುಖ್ಯ ಅತಿಥಿಗಳು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಕ್ಷತ್ರ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಬಿ.ಡಿ. ಉಮೇಶ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಾಂತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ ಬಿ.ಎಸ್., ತ್ರಿನೇತ್ರ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಕರವಂಡ ಸಜನ್ ಗಣಪತಿ, ಫ್ರೆಂಡ್ಸ್ ವಾಹನ ಮಾಲೀಕ ಮತ್ತು ಚಾಲಕರ ಸಂಘದ ಅಧ್ಯಕ್ಷ ರಿಯಾಜ್, ನಾಪೋಕ್ಲುವಿನ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ರಾಜೀವ್, ಅಮ್ಮತಿಯ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಅಭಿಜಿತ್, ಮೂರ್ನಾಡು ಪೊಲೀಸ್ ಉಪಠಾಣೆಯ ಪಿ.ಟಿ. ಶ್ರೀನಿವಾಸ್, ಸಿಬ್ಬಂದಿ ರಾಜೇಂದ್ರ, ಕಾಂತೂರು ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎನ್. ರಘು, ನಕ್ಷತ್ರ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಗೌರವ ಅಧ್ಯಕ್ಷ ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಟಿ.ಕೆ. ಚಂದ್ರ, ಕಾರ್ಯದರ್ಶಿ ಹೆಚ್.ಎಸ್. ಸತೀಶ್, ಸದಸ್ಯರು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
ಸನ್ಮಾನ: ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಹಿರಿಯ ಚಾಲಕರಾದ ವೇಣುಗೋಪಾಲ್, ಗಣೇಶ್ ಬಿ.ಆರ್., ಚೆಟ್ಟಿಮಾಡ ದಿವಿ, ಬೋಜಣ್ಣ, ಅಂಥೋಣಿ, ರಘುಪತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರಾದ ಸುಬಾನ್ ಅವರ ಪುತ್ರಿ ಇನ್ಷ ಎಂ.ಎ., ದೇರಜೆ ಸತೀಶ್ ಅವರ ಪುತ್ರಿ ಭವಿತ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಕ್ರೀಡಾಕೂಟದಲ್ಲಿ ಸಂಘದ ಪುರುಷ ಸದಸ್ಯರಿಗೆ ಕ್ರಿಕೆಟ್ ಪಂದ್ಯಾಟ, ಹಗ್ಗಜಗ್ಗಾಟ ಮತ್ತು ಮಹಿಳೆಯರಿಗೆ ನಿಂಬೆಹಣ್ಣಿನ ಓಟ ಇನ್ನಿತರ ಸ್ಪರ್ಧೆ ಮತ್ತು ಮಕ್ಕಳಿಗೆ ವಿವಿಧ ಬಗ್ಗೆ ಆಟೋಟಗಳನ್ನು ಹಮ್ಮಿಕೊಳ್ಳಲಾಯಿತು.
ಕ್ರೀಡಾ ವಿಜೇತರು : ಕ್ರಿಕೆಟ್ ಪಂದ್ಯದಲ್ಲಿ ಖಜಾಂಚಿ ೯, ತಂಡ ಪ್ರಥಮ, ಅಧ್ಯಕ್ಷ ೯ ತಂಡ ದ್ವಿತೀಯ ಸ್ಥಾನವನ್ನು ಗಳಿಸಿತು. ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಅನಿತಾ ಮತ್ತು ತಂಡದವರು ಪ್ರಥಮ, ಶೋಭ ಮತ್ತು ತಂಡದವರು ದ್ವಿತೀಯ ಸ್ಥಾನ ಗಳಿಸಿದರು.