ವೀರಾಜಪೇಟೆ, ಫೆ. ೨೨: ೬೦ ವಸಂತ ಕಳೆದಿರುವ ಸರಕಾರಿ ಅನುದಾನಿತ ಕಾಕೋಟುಪರಂಬು ಪ್ರೌಢಶಾಲೆಯನ್ನು ಹಸ್ತಾಂತರ ಮಾಡುವುದಿಲ್ಲ ಎಂದು ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಪೊಕ್ಕುಳಂಡ್ರ ರಮೇಶ್ ತಿಳಿಸಿದ್ದಾರೆ.
ಅನೇಕ ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಯಲ್ಲಿದ್ದಾರೆ. ಇಂತಹ ವಿದ್ಯಾ ಸಂಸ್ಥೆಯನ್ನು ಬೇರೆ ವಿದ್ಯಾಸಂಸ್ಥೆಗಳಿಗೆ ಹಸ್ತಾಂತರಿಸಿದರೆ ಸುತ್ತಮುತ್ತಲ ಗ್ರಾಮದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರೌಢಶಾಲೆಯನ್ನು ಯಾವುದೇ ಸಂಸ್ಥೆಗೆ ಪರಭಾರೆ ಅಥವಾ ಹಸ್ತಾಂತರ ಮಾಡಲು ನಮ್ಮ ಸಂಪೂರ್ಣ ವಿರೋಧ ಇರುವುದರಿಂದ ಹಿಂದಿನ ರೀತಿಯಲ್ಲಿಯೇ ಮುಂದು ವರೆಸಿಕೊಂಡು ಹೋಗುತ್ತೇವೆ ಎಂದು ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಕಾಕೋಟುಪರಂಬು ಶಾಲೆ ಅಂದಾಜು ಐದು ಎಕರೆ ಜಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಕನ್ನಡ ಮಾಧ್ಯಮ ಆದ ಕಾರಣ ಮಕ್ಕಳ ಸಂಖ್ಯೆ ಕಡಿಮೆ ಆಗಿರುವ ಹಿನ್ನಲೆಯಲ್ಲಿ ಆಡಳಿತ ಸಮಿತಿ ಸಭೆ ಸೇರಿ ಅನುದಾನಿತ ಶಾಲೆಯನ್ನು ಮುನ್ನಡೆಸಿಕೊಂಡು ಹೋಗುವ ಸಂಸ್ಥೆಗೆ ಹಸ್ತಾಂತರ ಅಥವಾ ಪರಭಾರೆ ಮಾಡುವಂತೆ ಆಡಳಿತ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಮಕ್ಕಳ ಪೋಷಕರ ವಿರೋಧ ಇರುವುದರಿಂದ ಹಿಂದಿನAತೆಯೇ ಶಾಲೆಯನ್ನು ಮುನ್ನಡೆಸಿಕೊಂಡು ಹೋಗುವಂತೆಯು, ತಪ್ಪಿದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಹಳೆ ವಿದ್ಯಾರ್ಥಿಗಳ ಸಂಚಾಲಕ ಹಾಗೂ ನಿರ್ದೇಶಕ ಐಚೇಟ್ಟಿರ ರಂಜಿ ಕುಟ್ಟಯ್ಯ, ವಿ.ಜಿ ಗೋಪಾಲಕೃಷ್ಣ ಉಪಸ್ಥಿತರಿದ್ದರು.