ಮಡಿಕೇರಿ, ಫೆ. ೨೧: ಕಳೆದ ಕೆಲವು ತಿಂಗಳುಗಳ ಹಿಂದೆ ಕೆ.ಎಸ್.ಆರ್.ಟಿ.ಸಿ ಬಸ್ ಅವಘಡ ದಿಂದಾಗಿ ಹಾನಿಗೀಡಾಗಿರುವ ವೀರಸೇನಾನಿ, ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಪ್ರತಿಮೆಯನ್ನು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮರು ಅಳವಡಿಸುವ ಕಾರ್ಯಕ್ಕೆ ಇದೀಗ ಅಂತಿಮ ಸಿದ್ಧತೆಗಳು ನಡೆದಿವೆ. ಇದಕ್ಕಾಗಿ ಪೂರ್ವ ತಯಾರಿ ನಡೆಯುತ್ತಿದ್ದು ಬಹುತೇಕ ಮಾರ್ಚ್ ೮ ರಂದು ಪ್ರತಿಮೆ ಮರು ಅಳವಡಿಕೆ ಕಾರ್ಯ ನಡೆಯಲಿದೆ. ಮಡಿಕೇರಿ ನಗರಸಭೆಯ ಮೂಲಕ ಸ್ಥಳದಲ್ಲಿ ಸಿದ್ಧತೆ ನಡೆಯುತ್ತಿದ್ದು, ಈಗಾಗಲೇ ವೃತ್ತದಲ್ಲಿ ಒಂದಷ್ಟು ಕೆಲಸ ಕಾರ್ಯ ಮುಗಿದಿದೆ. ಪ್ರಸ್ತುತ ಹಾನಿಗೀಡಾಗಿದ್ದ ತಿಮ್ಮಯ್ಯ ಅವರ ಪ್ರತಿಮೆ ಮೈಸೂರಿನ ಶಿಲ್ಪ ಕಲಾ ಅಕಾಡೆಮಿಯಲ್ಲಿದ್ದು ಇದನ್ನು ಸರಿಪಡಿಸುವ ಕಾರ್ಯವೂ ಈಗಾಗಲೇ ಮುಗಿದಿದೆ.

ಜಿಲ್ಲಾಡಳಿತ, ನಗರಸಭೆ ಯೊಂದಿಗೆ ಜಿಲ್ಲೆಯ ಜನ ಪ್ರತಿನಿಧಿಗಳು ಇದಕ್ಕೆ ಸಹಕಾರ ನೀಡುತ್ತಿದ್ದು, ಮಡಿಕೇರಿ ಕೊಡವ ಸಮಾಜ ಇವರೊಂದಿಗೆ ಕೈಜೋಡಿಸುತ್ತಿದೆ.

ಅದ್ದೂರಿ ಮೆರವಣಿಗೆ- ಸ್ವಾಗತ

ದೇಶದ ಆಸ್ತಿಯಾಗಿರುವ ವಿಶ್ವಖ್ಯಾತಿಯ ಸೇನಾನಿಯ ಪ್ರತಿಮೆ ಅನಾವರಣವನ್ನು ಇವರ ಬಗ್ಗೆ ಇನ್ನಷ್ಟು ಗೌರವ ಮೂಡಿಸುವ ನಿಟ್ಟಿನ ಪ್ರಯತ್ನದೊಂದಿಗೆ

(ಮೊದಲ ಪುಟದಿಂದ) ನಡೆಸಲು ತಯಾರಿ ನಡೆಯುತ್ತಿದೆ. ಒಂದು ವೇಳೆ ಮಾರ್ಚ್ ೮ ರಂದೇ ಕಾರ್ಯಕ್ರಮ ಖಚಿತವಾದಲ್ಲಿ (ಸದ್ಯದ ಮಾಹಿತಿಯಂತೆ ಇದೇ ದಿನ) ಆ ದಿನದಂದು ಮೈಸೂರಿನಲ್ಲಿರುವ ಶಿಲ್ಪಕಲಾ ಅಕಾಡೆಮಿಯಿಂದ ಪ್ರತಿಮೆಯನ್ನು ಬೆಳಿಗ್ಗೆ ಮೆರವಣಿಗೆ ಮೂಲಕ ಮಡಿಕೇರಿಯತ್ತ ತರಲಾಗುವುದು. ಮೈಸೂರು ಕೊಡವ ಸಮಾಜ, ಅಲ್ಲಿನ ಮಾಜಿ ಸೈನಿಕರು, ವಿವಿಧ ಸಂಘ-ಸAಸ್ಥೆಯವರು, ಅಲ್ಲಿನ ಶಾಸಕರು ಪ್ರತಿಮೆಯನ್ನು ಬೀಳ್ಕೊಡಲಿದ್ದಾರೆ. ತಿಮ್ಮಯ್ಯ ಅವರ ಸೇವೆ-ಸಾಧನೆಗಳ ಮಾಹಿತಿಯನ್ನು ಒಳಗೊಂಡAತೆ ಅಲಂಕೃತವಾದ ಲಾರಿಯ ಮೂಲಕ ಮೈಸೂರಿನಿಂದ ಪ್ರತಿಮೆ ಜಿಲ್ಲೆಯತ್ತ ಆಗಮಿಸಲಿದೆ. ಮಾರ್ಗದ ಮದ್ಯೆ ಹುಣಸೂರು-ಪಿರಿಯಾಪಟ್ಟಣದಲ್ಲೂ ಸ್ವಾಗತದೊಂದಿಗೆ ಕುಶಾಲನಗರ ಗಡಿಯಲ್ಲಿ ಅಲ್ಲಿನ ಕೊಡವ ಸಮಾಜ, ವಿವಿಧ ಸಂಘ-ಸAಸ್ಥೆಗಳು, ಮಾಜಿ ಯೋಧರು ಅದ್ದೂರಿಯಾಗಿ ಬರಮಾಡಿಕೊಳ್ಳಲಿದ್ದಾರೆ. ತದನಂತರ ಸುಂಟಿಕೊಪ್ಪದಲ್ಲಿಯೂ ಸ್ವಾಗತಿಸಿ ಮಡಿಕೇರಿಗೆ ಪ್ರವೇಶಿಸುತ್ತಿದ್ದಂತೆ ಚೈನ್‌ಗೇಟ್ ಅಥವಾ ಕಾರ್ಯಪ್ಪ ವೃತ್ತದಲ್ಲಿ ಸಾರ್ವತ್ರಿಕವಾಗಿ ಪ್ರತಿಮೆಯನ್ನು ಬರಮಾಡಿಕೊಂಡು ಅಲ್ಲಿಂದ ಮೆರವಣಿಗೆಯ ಮೂಲಕ ಪ್ರತಿಮೆ ಅಳವಡಿಕೆಯಾಗುವ ಜಾಗಕ್ಕೆ ತರಲು, ಮಡಿಕೇರಿ ಕೊಡವ ಸಮಾಜದ ಉಸ್ತುವಾರಿಯಲ್ಲಿ ಜಿಲ್ಲಾಡಳಿತ, ನಗರಸಭೆಯ ಸಹಕಾರದೊಂದಿಗೆ ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಹಲವರು ಪ್ರಯತ್ನ ನಡೆಸುತ್ತಿದ್ದಾರೆ.

ಬೈಕ್ ಜಾಥಾ: ಮೈಸೂರಿನಿಂದ ಮಡಿಕೇರಿ ತನಕವೂ ಸುಮಾರು ೨೦೦ಕ್ಕೂ ಅಧಿಕ ಬೈಕ್ ಜಾಥಾ ಪ್ರತಿಮೆಯೊಂದಿಗೆ ಆಗಮಿಸಲಿವೆ. ಈ ಕಾರ್ಯಕ್ಕೆ ಎಲ್ಲರ ಸಹಕಾರ-ಸಹಮತವಿದ್ದು, ಕೈಜೋಡಿಸುತ್ತಿರುವುದಾಗಿ ಇದರ ಉಸ್ತುವಾರಿ ವಹಿಸಿ ಪ್ರಯತ್ನ ನಡೆಸುತ್ತಿರುವವರು ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿ ಪ್ರತಿಕ್ರಿಯೆ

ಈ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, ಕಾರ್ಯಕ್ರಮದ ಸಿದ್ಧತೆ ನಡೆದಿದ್ದು, ದಿನಾಂಕವನ್ನು ಅಧಿಕೃತವಾಗಿ ತಿಳಿಸಲಾಗುವುದು. ಮಾಜಿ ಸಚಿವರಾದ ಯಂ.ಸಿ. ನಾಣಯ್ಯ ಅವರ ಮುಂದಾಳತ್ವದಲ್ಲಿ ಇತರ ಜನಪ್ರತಿನಿಧಿಗಳ ಸಹಕಾರದೊಂದಿಗೆ ಸಮಾಜದವರ ಸಹಭಾಗಿತ್ವದೊಂದಿಗೆ ಪ್ರತಿಮೆ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.