ಮಡಿಕೇರಿ, ಫೆ. ೨೧: ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಫಿ ತೋಟಗಳಾಗಿ ಪರಿವರ್ತಿಸಿ ಕೊಂಡ ಸಣ್ಣ ಬೆಳೆಗಾರರಿಗೆ ಜಾಗವನ್ನು ಗುತ್ತಿಗೆಗೆ ನೀಡುವ ಬದಲು ಅವರ ಹೆಸರಿಗೆ ಮಂಜೂರಾತಿಗೊಳಿಸಿ ಎಂದು ಕೊಡಗಿನ ಶಾಸಕರುಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹಾಗೂ ಡಾ. ಮಂಥರ್ ಗೌಡ ಸದನದಲ್ಲಿ ಪ್ರಸ್ತಾಪಿಸಿದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಸರಕಾರಿ ಜಾಗ ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿದ ಜಾಗವನ್ನು ಗುತ್ತಿಗೆ ನೀಡುವ ವಿಚಾರದ ಕುರಿತ ಚರ್ಚೆಯಲ್ಲಿ ಶಾಸಕರು ಈ ಬಗ್ಗೆ ಗಮನ ಸೆಳೆದರು.

ಮಾಜಿ ಕಂದಾಯ ಸಚಿವ, ಪದ್ಮನಾಭ ನಗರದ ಹಾಲಿ ಶಾಸಕ ಆರ್. ಅಶೋಕ್ ಈ ನಿಯಮದ ಕುರಿತು ಪ್ರಸ್ತಾಪಿಸಿ ಹಲವು ವರ್ಷಗಳಿಂದ ಸಣ್ಣ ಬೆಳೆಗಾರರು ಜಾಗ ಒತ್ತುವರಿಗೊಳಿಸಿ ತೋಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಗುತ್ತಿಗೆ ವಿಚಾರವಾಗಿ ದರ ನಿಗದಿಯಾಗಿದೆ. ಇದರಿಂದ ಸರಕಾರಕ್ಕೆ ನೂರಾರು ಕೋಟಿ ಆದಾಯವೂ ಬರುತ್ತದೆ. ಷರತ್ತುಬದ್ಧ ಅವಕಾಶವಿರುವುದರಿಂದ ಜಾಗದ ಮೇಲೆ ಸರಕಾರದ ಹಿಡಿತÀವಿರುತ್ತದೆ. ನಿಯಮ ಜಾರಿಯಾಗಿ ಒಂದು ವರ್ಷ ಕಳೆದರು ಇದುವರೆಗೂ ಅನುಷ್ಠಾನವಾಗದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಒತ್ತುವರಿ ಮಾಡಿದ ಬೆಳೆಗಾರರು ಸಮಸ್ಯೆಯಲ್ಲಿದ್ದಾರೆ. ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಸಣ್ಣ ಬೆಳೆಗಾರರನ್ನು ಆದ್ಯತೆ ಮೇಲೆ ಪರಿಗಣಿಸಬೇಕು. ಸಣ್ಣ ಬೆಳೆಗಾರರಿಗೆ ಜಾಗವನ್ನು ಗುತ್ತಿಗೆ ನೀಡುವ ಬದಲು ಅವರ ಹೆಸರಿಗೆ ಮಂಜೂರಾತಿ ಗೊಳಿಸಬೇಕು. ಸಣ್ಣ ಬೆಳೆಗಾರರು ಸ್ವಾಧೀನಪಡಿಸಿಕೊಂಡ ಜಾಗವನ್ನು ಸರಕಾರದ ವಶಕ್ಕೆ ನೀಡಲು ಒಪ್ಪುವುದಿಲ್ಲ. ದೊಡ್ಡ ಬೆಳೆಗಾರರಿಗಾಗಿ ಈ ಕಾನೂನು ತರುವುದು ಸರಿಯಲ್ಲ. ಸಣ್ಣ ಬೆಳೆಗಾರರು ಇದರ ಫಲಾನುಭವಿಗಳಾಗಬೇಕೆಂದು ತಿಳಿಸಿದರು.

(ಮೊದಲ ಪುಟದಿಂದ) ಮಡಿಕೇರಿ ಶಾಸಕ ಡಾ. ಮಂಥರ್ ಈ ಸಂಬAಧ ಮಾತನಾಡಿ, ೩೦ ವರ್ಷಗಳ ಕಾಲ ಗುತ್ತಿಗೆ ನೀಡುವುದು ಒಳ್ಳೆಯ ವಿಚಾರ. ಆದರೆ, ಅವಧಿ ಮುಗಿದ ಬಳಿಕ ಮತ್ತೆ ಸಮಸ್ಯೆ ಉದ್ಭವಿಸುತ್ತದೆ. ಈ ಹಿನ್ನೆಲೆ ಅವಧಿಯನ್ನು ದೀರ್ಘ ಕಾಲಕ್ಕೆ ವಿಸ್ತರಿಸಬೇಕು ಎಂದು ಗಮನ ಸೆಳೆದರು.

ಈ ಸಂದರ್ಭ ಮಂಥರ್ ತಂದೆ, ಅರಕಲಗೋಡು ಶಾಸಕ ಎ. ಮಂಜು ಮಧ್ಯಪ್ರವೇಶಿಸಿ, ರೇಸ್ ಕೋರ್ಸ್, ಸ್ಟೇಡಿಯಂ, ಕ್ಲಬ್‌ಗಳಿಗೆ ಶೀಘ್ರ ಜಾಗ ನೀಡುತ್ತೇವೆ. ಆದರೆ, ರೈತರಿಗೆ ನೀಡಲು ವಿಳಂಬ ಏಕೆ ?ಎಂದು ಪ್ರಶ್ನಿಸಿದ ಅವರು, ಸರಕಾರ ಹಣ ಕಟ್ಟಿಸಿಕೊಂಡು ಜಾಗ ಗುತ್ತಿಗೆಗೆ ನೀಡುವಂತೆ ಸಲಹೆ ನೀಡಿದರು.

ಸ್ಪೀಕರ್ ಯು.ಟಿ. ಖಾದರ್ ಕಾಫಿ ಬೆಳೆ ಬೆಳೆಯುವ ಪ್ರದೇಶಗಳ ಶಾಸಕರಿಗೆ ಚರ್ಚೆಗೆ ಅವಕಾಶ ನೀಡಿದರು.

ಟಿ ವರದಿ : ಹೆಚ್.ಜೆ. ರಾಕೇಶ್