೨೦ ವರ್ಷಗಳಿಂದ ಉಚಿತ ಸೇವೆ

ವೀರಾಜಪೇಟೆ, ಫೆ. ೮: ಭಾರತೀಯ ವೈದ್ಯ ಪದ್ಧತಿಗೆ ನಾಟಿವೈದ್ಯವೇ ಮೂಲ. ಅದೆಷ್ಟೋ ರೋಗಗಳಿಗೆ ನಾಟಿ ಔಷಧಿಯೇ ರಾಮಬಾಣ. ತಲೆ ತಲಾಂತರಗಳಿAದ ಬಂದ ಈ ನಾಟಿ ವೈದ್ಯ ಪದ್ಧತಿ ಈಗ ವಿನಾಶದತ್ತ ಸಾಗುತ್ತಿದೆ. ಶೇ. ೪೫ ರಷ್ಟು ಜನ ಪಾರಂಪರಿಕ ನಾಟಿ ವೈದ್ಯ ಪದ್ಧತಿಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾರಂಪರಿಕ ವೈದ್ಯ ಪದ್ಧತಿಯ ಜ್ಞಾನವನ್ನು ಇನ್ನೂ ವ್ಯಾಪಕವಾಗಿ ಪಸರಿಸಬೇಕಾಗಿದೆ. ಈಗಲೂ ಜನ ಹಲವು ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ಪಡೆದು ಫಲಕಾರಿಯಾಗದೇ ಇದ್ದರೆ ಕೊನೆಗೆ ಮೊರೆ ಹೋಗುವುದು ನಾಟಿ ವೈದ್ಯ ಪದ್ಧತಿಗೆ. ಈ ವಿಶೇಷ ಜ್ಞಾನವು ಸದ್ಯ ಕೆಲವರಲ್ಲೇ ಸುಪ್ತವಾಗಿದ್ದು, ಒಂದು ರಹಸ್ಯ ಪದ್ಧತಿಯಾಗಿ ಅನುವಂಶಿಕವಾಗಿ ಇಲ್ಲವೆ ಶಿಷ್ಯ ಪರಂಪರೆಯಾಗಿ ಮುಂದುವರಿದಿದೆ.

ಇಲ್ಲೊಬ್ಬರು ನಾಟಿ ವೈದ್ಯರಿದ್ದಾರೆ. ೨೦ ವರ್ಷಗಳಿಂದ ಉಚಿತ ಸೇವೆಯನ್ನು ಇವರು ನೀಡುತ್ತಿದ್ದಾರೆ. ಇವರೇ ಬೇಟೋಳಿಯ ರಾಮನಗರದ ಬಿ.ಜಿ. ನಟರಾಜ್ ಬೋರ್ಕರ್.

ಹಾವು ಕಚ್ಚಿದರೆ, ಸರ್ಪಸುತ್ತು, ಜಾಂಡೀಸ್ ಹೀಗೆ ಕೆಲವು ರೋಗಗಳು ಉಂಟಾದರೆ ತಕ್ಷಣ ಜನರ ಮನದಲ್ಲಿ ನೆನಪಾಗುವುದೇ ನಾಟಿ ವೈದ್ಯ ನಟರಾಜ್ ಅವರು. ಇಂದಿನ ವೈಜ್ಞಾನಿಕ ಯುಗದಲ್ಲಿ ಸಾಂಪ್ರದಾಯಿಕವಾಗಿ ವನೌಷಧಿ ನೀಡುವ ವೈದ್ಯರು ಇದ್ದಾರೆ ಎಂದರೆ ನಂಬಲೇಬೇಕು. ಯಾವುದೇ ಫಲಾಪೇಕ್ಷೆ ಇಲ್ಲದೆ ಉಚಿತ ಸೇವೆಯನ್ನು ಮಾಡುತ್ತಿದ್ದು ಇವರು ಪರಿಣಾಮಕಾರಿ ಔಷಧಿಯಿಂದ ಮನೆ ಮಾತಾಗಿದ್ದಾರೆ.

ಹಲವು ಕಾರಣಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗದೆ ಹಲವು ಜನ ಇವರಿಂದ ನಾಟಿ ಔಷಧಿ ಪಡೆದು ಗುಣಮುಖರಾಗಿದ್ದು, ವಿವಿಧೆಡೆಯಿಂದ ಬಹುತೇಕ ಜನ ಇವರ ಬಳಿಯೇ ಬರುತ್ತಾರೆ. ಗಿಡಮೂಲಿಕೆ ಬಳಸಿ, ನಾಟಿ ಔಷಧಿ ತಯಾರಿಸಿ ನೀಡುತ್ತಾರೆ.

ನಾಟಿ ವೈದ್ಯ ಪದ್ಧತಿ ಹಾಗೂ ಕೃಷಿ ಎರಡನ್ನು ಇವರು ಜೊತೆಯಾಗಿಯೇ ನಿಭಾಯಿಸುತ್ತಿದ್ದಾರೆ. ನಮ್ಮ ತಂದೆ ಯಾವುದೇ ರೋಗಿಯನ್ನು ಬಡವ, ಶ್ರೀಮಂತ ಎನ್ನದೆ ನಿಸ್ವಾರ್ಥ ಸೇವೆ ಮಾಡುತ್ತಿದ್ದು ನನಗೆ ಮಾರ್ಗದರ್ಶಕರಾಗಿದ್ದಾರೆ. ನಾನು ಸಹ ಈ ವಿದ್ಯೆ ಕಲಿತಿದ್ದು ಬಡ ಜನರ ನೋವಿಗೆ ಸ್ಪಂದಿಸುತ್ತೇನೆ ಎನ್ನುತ್ತಾರೆ ನಾಟಿ ವೈದ್ಯ ನಟರಾಜ್.

ಹತ್ತಾರು ಆಸ್ಪತ್ರೆ ಸುತ್ತಿ ಬರುವ ರೋಗಿಯಿಂದ ಯಾವುದೇ ಶುಲ್ಕ ಅಪೇಕ್ಷಿಸದೆ ಚಿಕಿತ್ಸೆ ನೀಡುವ ಇವರ ನಿಸ್ವಾರ್ಥ ಸೇವೆಗೆ ಕೆಲ ಸ್ಥಳೀಯ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ. ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದೇವೆ ಎಂದು ಫೋನ್ ಮೂಲಕ ತಿಳಿಸುವಾಗ ಆಗುವ ಆನಂದವೇ ನಮಗೆ ಸಿಗುವ ದೊಡ್ಡ ಬಿರುದು ಎನ್ನುತ್ತಾರೆ ನಟರಾಜ್.

ನಟರಾಜ್ ಬೋರ್ಕರ್ ದಿ. ಗೋಪಾಲರಾವ್ ಹಾಗೂ ದಿ. ಗಂಗಮ್ಮ ದಂಪತಿ ಪುತ್ರ. ಇವರಿಬ್ಬರು ನಾಟಿ ವೈದ್ಯ ಸೇವೆಯನ್ನು ಸಲ್ಲಿಸುತ್ತಿದ್ದರು. ತದನಂತರ ನಟರಾಜ್ ಅವರ ಅಣ್ಣ ಶಶಿಧರ್ ನಾಟಿ ವೈದ್ಯ ಸೇವೆಯನ್ನು ಮುಂದುವರೆಸಿಕೊAಡು ಬಂದರು. ಅವರ ಕಾಲವಾದ ಬಳಿಕ ಸಹೋದರ ನಟರಾಜ್ ೨೦ ವರ್ಷಗಳಿಂದ ನಿರಂತರವಾಗಿ ನಾಟಿ ಔಷಧಿ ಸೇವೆಯನ್ನು ನೀಡುತ್ತಾ ಬರುತ್ತಿದ್ದಾರೆ. ನಟರಾಜ್ ಬೋರ್ಕರ್ ಹಾವು ಕಡಿತ, ಸರ್ಪ ಸುತ್ತು, ಹುಳಕಡ್ಡಿ, ಜಾಂಡಿಸ್, ಸುಟ್ಟ ಗಾಯಗಳಿಗೆ ಹಾಗೂ ವಿಷಕಾರಿ ಜಂತು ಕಡಿತಕ್ಕೆ ನಾಟಿ ಔಷಧಿ ನೀಡುತ್ತಾರೆ.

ಔಷಧಿಗೆ ಗಿಡಮೂಲಿಕೆಗಳನ್ನು ತೋಟ, ಕಾಡು ಗದ್ದೆ ಹೊಳೆಯಲ್ಲಿ ಸಂಗ್ರಹಿಸುತ್ತಾರೆ. ಕೆಲವು ಗಿಡಮೂಲಿಕೆಯನ್ನು ಬೇಸಿಗೆಯಲ್ಲಿ ಒಣಗಿಸಿಡುತ್ತಾರೆ. ಇವರು ಹಾವು ಕಡಿತ, ಜಾಂಡಿಸ್, ಸರ್ಪ ಸುತ್ತುಗಳಿಗೆ ಮೂರು ದಿವಸ ನಿರಂತರ ಚಿಕಿತ್ಸೆ ನೀಡಿ ತದನಂತರ ಮನೆಯಲ್ಲಿಯೇ ಔಷಧಿ ಹಚ್ಚಲು ನೀಡಿ ಗುಣಪಡಿಸುತ್ತಾರೆ. ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ಹಲೆವೆಡೆಗಳಿಂದಲೂ ಜನರು ಇವರ ಬಳಿ ಚಿಕಿತ್ಸೆಗೆ ಬರುತ್ತಾರೆ. ಜನರು ಇಷ್ಟಪಟ್ಟು ನೀಡಿದ ಮೊತ್ತವನ್ನು ತೆಗೆದುಕೊಳ್ಳುತ್ತಾರೆ.

ಕೇವಲ ಹಣಕ್ಕೆ ಮಾತ್ರ ಆರೋಗ್ಯ ಸೇವೆ ನೀಡುವುದು ತಪುö್ಪ ಎನ್ನುವ ಇವರು ಜನರ ಆರೋಗ್ಯ ಮುಖ್ಯ ಎಂದು ಹೇಳುತ್ತಾರೆ. ಇವರ ಈ ಸೇವೆಗೆ ಪತ್ನಿ ಸುನಂದ, ಮಕ್ಕಳಾದ ಲಾವಣ್ಯ, ಜಿತೇಶ್ ಅವರುಗಳ ಸಹಕಾರ ಹಾಗೂ ಪ್ರೋತ್ಸಾಹವು ಇದೆ.

ಗ್ರಾಮಸ್ಥರು ಹಾಗೂ ಔಷಧಿ ಪಡೆದಿರುವವರು ಇವರ ಕೈಗುಣವು ಸಂಜೀವಿನಿಯAತೆ ಎಂದು ಭಾವಿಸುತ್ತಾರೆ. ಯಾವುದೇ ವೇಳೆಯಲ್ಲೂ ಇವರು ವೈದ್ಯ ಸೇವೆಗೆ ಸಿದ್ದರೆನ್ನುವುದು ಗಮನಾರ್ಹವಾಗಿದೆ ಮಾತ್ರವಲ್ಲದೇ ಇವರು ನೀಡುವ ಔಷಧಿಯಿಂದ ರೋಗಿಗಳು ಬೇಗ ಗುಣಮುಖರಾಗುತ್ತಾರೆ.

- ಬಡಕಡ ರಜಿತ ಕಾರ್ಯಪ್ಪ