ಸಿದ್ದಾಪುರ, ಫೆ. ೮: ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ತಡೆಗಟ್ಟಬೇಕು, ಉದ್ಯೋಗ ಖಾತ್ರಿ ಯೋಜನೆ ಯಡಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು, ಜಲಜೀವನ್ ಯೋಜನೆಯಡಿಯಲ್ಲಿ ನಿರ್ಮಿಸಿದ ಟ್ಯಾಂಕ್ ವಿರುದ್ಧ ಅಸಮಾಧಾನ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಿದರು.

ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯ ಸಭೆಯು ಗ್ರಾ.ಪಂ. ಅಧ್ಯಕ್ಷೆ ಧನಲಕ್ಷಿö್ಮ ಹೆಚ್.ಎನ್. ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭ ಗ್ರಾಮಸ್ಥರು ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟವಾಗುತ್ತಿದ್ದು, ಗ್ರಾಮ ವ್ಯಾಪ್ತಿಯಲ್ಲಿ ಹದಿಹರೆಯದ ಯುವಕರು ಗಾಂಜಾ ವ್ಯಸನಿಗಳಾಗುತ್ತಿದ್ದು, ಪೊಲೀಸ್ ಇಲಾಖೆಯವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನೆಲ್ಲಿಹುದಿಕೇರಿ ಗ್ರಾಮಸ್ಥ ಟಿ.ಟಿ. ಉದಯಕುಮಾರ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಡೆಸಿದ ವಿವಿಧ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದ್ದು, ಕಾಮಗಾರಿಗಳು ಕೂಡ ಕಳಪೆ ಗುಣಮಟ್ಟದಿಂದ ಕೂಡಿವೆ. ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಓ.ಎಂ. ಮುಸ್ತಫ ಮಾತನಾಡಿ, ನೆಲ್ಲಿಹುದಿಕೇರಿ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಗಂಭೀರವಾಗಿದ್ದು, ಬಸ್ಸುಗಳು ಪಟ್ಟಣದ ಮುಖ್ಯ ಭಾಗದಲ್ಲಿ ನಿಲ್ಲಿಸುತ್ತಿರುವುದರಿಂದ ಇತರ ವಾಹನಗಳಿಗೆ ಸಮಸ್ಯೆಯಾಗಿದೆ ಎಂದರು.

ನಾಲ್ಕು ಚಕ್ರ ವಾಹನಗಳು ನಿಲ್ಲಿಸುವ ಸ್ಥಳಗಳಲ್ಲಿ ದ್ವಿಚಕ್ರ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿ ತಡವಾಗಿ ತೆಗೆಯುತ್ತಾರೆ ಎಂದರಲ್ಲದೆ, ಪೊಲೀಸರು ವಾಹನ ನಿಲುಗಡೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ಎಂ.ಜಿ. ಜೋಸ್ ಮಾತನಾಡಿ, ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಗ್ರಾಮಸ್ಥರು ಇದೀಗ ಕೋತಿಗಳ ಹಾವಳಿಯಿಂದಾಗಿ ನೆಮ್ಮದಿ ಇಲ್ಲದಂತಾಗಿದೆ. ವನ್ಯಜೀವಿಗಳ ಹಾವಳಿಯಿಂದ ನಷ್ಟಗೊಂಡಿರುವ ಕೃಷಿಕರಿಗೆ ಪರಿಹಾರ ಕೂಡಲೇ ನೀಡಬೇಕೆಂದರು.

ಜಲಜೀವನ್ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಹಳೇ ಪೈಪ್‌ಗಳನ್ನು ಬಳಸಿ ನೀರು ಸರಬರಾಜು ಮಾಡುತ್ತಿರುವುದನ್ನು ಗ್ರಾಮಸ್ಥರು ಖಂಡಿಸಿದರು. ಕೋಟ್ಯಂತರ ರೂಪಾಯಿ ವೆಚ್ಚಮಾಡಿ ಈ ರೀತಿ ಯೋಜನೆಯನ್ನು ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.

ನೆಲ್ಲಿಹುದಿಕೇರಿ ಗ್ರಾಮದ ಶ್ರೀ ಸತ್ಯನಾರಾಯಣ ದೇವಾಲಯದ ಅಧ್ಯಕ್ಷ ಟಿ.ಜಿ. ಚಂದ್ರಶೇಖರ್ ಮಾತನಾಡಿ, ದೇವಾಲಯದ ವಾರ್ಷಿಕೋತ್ಸವದ ಸಂದರ್ಭದಲ್ಲಿ ದೇವರುಗಳು ಜಳಕಕ್ಕೆ ತೆರಳುತ್ತಿರುವ ರಸ್ತೆಗಳಲ್ಲಿ ಅನಗತ್ಯವಾಗಿ ಕಾಮಗಾರಿಗಳನ್ನು ಕೈಗೊಂಡು ರಸ್ತೆಗೆ ಅಡ್ಡಪಡಿಸಬಾರದೆಂದರು. ಅಲ್ಲದೇ ಇತಿಹಾಸ ಪ್ರಸಿದ್ಧ ಪ್ರಾಚೀನ ಕಾಲದ ಈ ದೇವಾಲಯದ ಪಾವಿತ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ದೇವರು ಜಳಕಕ್ಕೆ ತೆರಳುವ ರಸ್ತೆಯನ್ನು ಹಾಗೂ ಜಾಗವನ್ನು ಶ್ರೀ ಸತ್ಯನಾರಾಯಣ ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ಮೀಸಲಿಡಲು ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಮನವಿ ಮಾಡಿದರು. ಗ್ರಾಮಸಭೆಯಲ್ಲಿ ಕ್ಷÄಲ್ಲಕ ವಿಚಾರಕ್ಕೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ಎದುರಾಯಿತು. ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಕೆ.ಪಿ.ಎಸ್. ಶಾಲೆಯ ಉಪ ಪ್ರಾಂಶುಪಾಲ ಅನಿಲ್ ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಪ್ರಮೀಳಾ ಟಿ.ಆರ್. ಹಾಗೂ ಪಂಚಾಯಿತಿಯ ಸದಸ್ಯರುಗಳು ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂಜುAಡಸ್ವಾಮಿ ಸ್ವಾಗತಿಸಿ, ವಂದಿಸಿದರು. - ವಾಸು