ಬೆಂಗಳೂರು, ಫೆ. ೭: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ಹಂಚಿಕೆ ವಿಚಾರದಲ್ಲಿ ಅನ್ಯಾಯ ವಾಗಿದೆ ಎಂದು ದೆಹಲಿಯ ಜಂತರ್ ಮಂತರ್ನಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿರು ವಂತೆಯೇ ಇದಕ್ಕೆ ಪ್ರತಿಯಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದೆ.
ಸರ್ಕಾರದ ಧೋರಣೆಯನ್ನು ಖಂಡಿಸಿ ಬಿಜೆಪಿ ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿತು. ಈ ಮೂಲಕ ಒಂದೇ ದಿನ ಎರಡು ಪಕ್ಷಗಳು ದೆಹಲಿ ಹಾಗೂ ರಾಜ್ಯದಲ್ಲಿ ಪ್ರತಿಭಟನೆಯನ್ನು ನಡೆಸುವ ಮೂಲಕ ಏಟಿಗೆ ಎದಿರೇಟು ನೀಡಲು ಸಜ್ಜಾಗಿವೆ.
ದೆಹಲಿಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಧರಣಿಯನ್ನು ಎದುರಿಸಲು ಕರ್ನಾಟಕ ಬಿಜೆಪಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಶಾಸಕರು ಮತ್ತು ಮುಖಂಡರು ಕರ್ನಾಟಕ ರಾಜ್ಯ ವಿಧಾನಸೌಧ ಮತ್ತು ಕಾರ್ಯದರ್ಶಿ ಕಚೇರಿ ಇರುವ ವಿಧಾನಸೌಧದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದರು.
ರಾಜ್ಯದ ೨೨೩ ತಾಲೂಕುಗಳು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಪರಿಹಾರವನ್ನು ನೀಡಿಲ್ಲ. ೨೦೦೦ ರೂಪಾಯಿ ರೈತರಿಗೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ. ಆದರೆ ಈ ಹಣ ಇನ್ನೂ ತಲುಪಿಲ್ಲ. ಸರ್ಕಾರ ಪರಿಹಾರವನ್ನು ನೀಡುವ ಬದಲಾಗಿ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳ ಜೊತೆಗೆ ಜನರಿಗೆ ನಾಮ ಹಾಕುವ ಗ್ಯಾರಂಟಿಯನ್ನೂ ನೀಡಿದೆ.
(ಮೊದಲ ಪುಟದಿಂದ) ಖಜಾನೆ ಖಾಲಿ ಮಾಡಿಕೊಂಡ ಸರ್ಕಾರ ಬೀಗ ಹಾಕಿಕೊಳ್ಳುವ ಸ್ಥಿತಿ ಬಂದಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಒಂದೊAದು ಗ್ಯಾರಂಟಿಗೂ ಹೆಚ್ಚು ಸಮಯ ತೆಗೆದುಕೊಂಡು ಜನರಿಗೆ ಪಂಗನಾಮ ಹಾಕಲಾಗಿದೆ. ಈ ನಾಮದ ಗ್ಯಾರಂಟಿಯನ್ನು ಎಲ್ಲರಿಗೂ ತಲುಪಿಸಲು ೮೦ ಶಾಸಕರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಬರಕ್ಕೆ ೧೦೦ ಕೋಟಿ ನೀಡುತ್ತೇನೆಂದು ಹೇಳಿ, ಶಾಸಕರಿಗಾಗಿ ೩೦೦-೪೦೦ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಮುಸ್ಲಿಮರ ಕಲ್ಯಾಣಕ್ಕೆ ೧ ಸಾವಿರ ಕೋಟಿ ರೂ. ನೀಡಿ, ರೈತರಿಗೆ ಆತ್ಮಹತ್ಯೆ ಭಾಗ್ಯ ನೀಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬರಗಾಲ ಬಂದಿದೆ ಎಂದರು.
ಅಧಿಕಾರದ ಅಮಲು
ವಿಜಯೇಂದ್ರ ಟೀಕೆ
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಸರ್ಕಾರ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ ಲಾಠಿ ಚಾರ್ಜ್ ಮಾಡುತ್ತಾರೆ, ಶಾಸಕರು ಪ್ರತಿಭಟಿಸಿದರೆ ವಿಧಾನಸೌಧದ ಒಳಗೆ ಪ್ರವೇಶ ನಿರಾಕರಿಸುತ್ತಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಅಮಲಿನಲ್ಲಿದೆ. ಕಾಂಗ್ರೆಸ್ ನಾಯಕರು ಇಂದು ಚುನಾವಣೆ ಹತ್ತಿರ ಬರುತ್ತಿದ್ದಂತೆ ಗಾಬರಿಯಾಗುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಇಬ್ಬಾಗ - ಬಸವರಾಜ ಬೊಮ್ಮಾಯಿ
ನರೇಂದ್ರ ಮೋದಿಯವರು ಮೂರನೆ ಬಾರಿ ಪ್ರಧಾನಿಯಾದ ಒಂದು ತಿಂಗಳಲ್ಲಿ ಕಾಂಗ್ರೆಸ್ ದೇಶಾದ್ಯಂತ ಇಬ್ಬಾಗವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕರ್ನಾಟಕದ ಇತಿಹಾಸದಲ್ಲಿ ಇಷ್ಟು ದೊಡ್ಡ ನಾಟಕ ಮಾಡುವ ಸರ್ಕಾರ ಇನ್ನೊಂದಿಲ್ಲ. ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆದ ಮೇಲೆ ತಮ್ಮ ತತ್ವ ಸಿದ್ಧಾಂತ ಗಾಳಿಗೆ ತೂರಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಆರಂಭವಾಗಿಲ್ಲ. ಬರಗಾಲ ಬಿದ್ದಿದೆ ಬರ ಪರಿಹಾರ ನೀಡಿಲ್ಲ. ಯಾವ ನೈತಿಕತೆ ಇಟ್ಟುಕೊಂಡು ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ನಾಚಿಕೆಯಾಗಬೇಕು ಇವರಿಗೆ. ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ. ಎನ್ಡಿಎ ಅವಧಿಯಲ್ಲಿ ಎಷ್ಟು ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಲಿ, ಯುಪಿಎ ಅವಧಿಯಲ್ಲಿ ೮೨ ಸಾವಿರ ಕೋಟಿ ಮಾತ್ರ ಬಂದಿದೆ. ಮೋದಿ ಕಾಲಾವಧಿಯಲ್ಲಿ ೨.೮೨ ಲಕ್ಷ ಕೋಟಿ ಬಂದಿದೆ. ಎನ್ಡಿಎ ಅವಧಿಯಲ್ಲಿ ಎರಡು ಲಕ್ಷ ಕೋಟಿ ರೂ. ಹೆಚ್ಚಿಗೆ ಬಂದಿದೆ. ರಾಜ್ಯಕ್ಕೆ ಅನ್ಯಾಯ ಮಾಡಿದವರು ಮನಮೋಹನ್ ಸಿಂಗ್ ಮತ್ತು ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದರು.
ಇದೇ ಸಂದರ್ಭ ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.