ನವದೆಹಲಿ, ಫೆ. ೭: ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ನಿರಂತರವಾಗಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರದ ತಾರತಮ್ಯ ನೀತಿ ಮತ್ತು ಮಲತಾಯಿ ಧೋರಣೆಯನ್ನು ಖಂಡಿಸಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಗುಡುಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯಸಂಪುಟದ ಎಲ್ಲ ಸಚಿವರು, ಕಾಂಗ್ರೆಸ್ ಪಕ್ಷದ ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರು, ಸಂಸದರು ಮತ್ತು ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ರಚಿಸಲಾದ ೧೫ ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯ ಆಗಿದೆ. ದಕ್ಷಿಣ ಭಾರತದ ರಾಜ್ಯಗಳು ಉತ್ತರ ಭಾರತದ ರಾಜ್ಯಗಳಿಗಿಂತ ಪರಿಣಾಮಕಾರಿ ಜನಸಂಖ್ಯೆ ನಿಯಂತ್ರಣ ಮಾಡಿದೆವು. ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕೊಂದು ಹಾಕಬೇಡಿ, ಹಾಲು ಕೊಡುವ ಕೆಚ್ಚಲು ಕತ್ತರಿಸಬೇಡಿ ಎಂದು ಒತ್ತಾಯಿಸಲು ಈ ಪ್ರತಿಭಟನೆ ನಡೆಸಿದ್ದೇವೆ. ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿಗೆ ಅನುದಾನ ಕೊಡುವ ಬಗ್ಗೆ ನಮಗೆ ತಕರಾರುಗಳಿಲ್ಲ. ಆದರೆ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಬೇಡಿ. ಕೇಂದ್ರ ಸರ್ಕಾರದ ಅಂಕಿ ಅಂಶಗಳೇ ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಹೇಳುತ್ತಿವೆ. ಎರಡನೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕ. ನಮಗೇ ಏಕೆ ಈ ಮಟ್ಟದ ಅನ್ಯಾಯ ಎಂದು ಪ್ರಶ್ನಿಸಿದರು.
೪೩೦೦೦೦ ಕೋಟಿ ತೆರಿಗೆಯನ್ನು ನಾವು ಕನ್ನಡಿಗರು ಕಟ್ಟುತ್ತೇವೆ. ನಮಗೆ ವಾಪಾಸ್ ಬರುವುದು ಕೇವಲ ೫೦೦೦೦ ಕೋಟಿ ಮಾತ್ರ. ಅಂದರೆ ನಾವು ಕೊಡುವ ಪ್ರತಿ
(ಮೊದಲ ಪುಟದಿಂದ) ೧೦೦ ರೂ. ನಲ್ಲಿ ೧೩ ರೂ ಮಾತ್ರ ನಮಗೆ ವಾಪಾಸ್ ಬರುತ್ತಿದೆ. ಇದಕ್ಕಿಂತ ಅನ್ಯಾಯ ಏನಿದೆ? ಈ ಅನ್ಯಾಯವನ್ನು ನಾವು ಸಹಿಸಬೇಕಾ?. ೧೫ ನೇ ಹಣಕಾಸು ಆಯೋಗದಿಂದಾಗಿ ನಮಗೆ ೬೨೦೯೮ ಕೋಟಿ ರೂ ತೆರಿಗೆಯೊಂದರಲ್ಲೇ ಅನ್ಯಾಯ ಆಗಿದೆ. ಇದನ್ನು ನಾವು ಪ್ರಶ್ನಿಸಬಾರದಾ? ಆದರೆ ಬಿಜೆಪಿ ನಿರಂತರ ಸುಳ್ಳುಗಳ ಮೂಲಕ ತಮ್ಮ ದ್ರೋಹವನ್ನು ಮರೆ ಮಾಚಲು ನೋಡುತ್ತಿದೆ. ಕೇಂದ್ರದ ಬಜೆಟ್ ಗಾತ್ರ ಹೆಚ್ಚಾದ ಹಾಗೆ ರಾಜ್ಯದ ತೆರಿಗೆ ಪಾಲು ಹೆಚ್ಚಾಗಬೇಕಿತ್ತು. ಆದರೆ ಈ ಪ್ರಮಾಣದಲ್ಲೂ ನಮಗೆ ಹಂಚಿಕೆ ಆಗಿಲ್ಲ. ಇದನ್ನು ಕೇಂದ್ರದ ಅಂಕಿ ಅಂಶಗಳೇ ಹೇಳುತ್ತಿವೆ. ಕಳೆದ ೧೦ ವರ್ಷಗಳಿಂದ ಹಂತ ಹಂತವಾಗಿ ರಾಜ್ಯದ ಪಾಲಿನ ತೆರಿಗೆ ಪಾಲು, ಕೇಂದ್ರದ ಅನುದಾನದ ಪಾಲು ನಿರಂತರವಾಗಿ ಕಡಿಮೆ ಆಗುತ್ತಿರುವು ದನ್ನು ಪ್ರತೀ ವರ್ಷದ ಅಂಕಿ ಅಂಶಗಳೊAದಿಗೆ ವಿವರಿಸಿದರು.
ಕೇಂದ್ರದ ಬಜೆಟ್ ಗಾತ್ರ ದುಪ್ಪಟ್ಟಾಗಿದೆ. ಆದರೆ ರಾಜ್ಯದ ಪಾಲಿನ ತೆರಿಗೆ ಪಾಲು ಅರ್ಧಕ್ಕಿಂತ ಕಡಿಮೆ ಆಗಿದೆ. ನಮ್ಮ ಪಾಲು ದುಪ್ಪಟ್ಟಾಗ ಬೇಕಾದ ಜಾಗದಲ್ಲಿ ಅರ್ಧಕ್ಕಿಂತ ಕಡಿಮೆ ಆಗಿರುವುದು ಅನ್ಯಾಯ ಅಲ್ಲವೇ? ಜಿ.ಎಸ್.ಟಿ.ಯಲ್ಲಿ ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಇನ್ನೂ ಬೃಹತ್ತಾಗಿದೆ. ಕೇಂದ್ರದ ಮಲತಾಯಿ ಧೋರಣೆಯಿಂದ ರಾಜ್ಯದ ತೆರಿಗೆ ಸಂಗ್ರಹ ಪ್ರಮಾಣ ೧೫% ನಿಂದ ೯%ಗೆ ಕುಸಿದಿದೆ ಎಂದು ವಿಷಾದಿಸಿದರು.
ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರು ರಾಜ್ಯದ ಪಾಲನ್ನು ಬಾಯಿ ಬಿಟ್ಟು ಕೇಳಲೇ ಇಲ್ಲ. ಯಡಿಯೂರಪ್ಪ, ಬೊಮ್ಮಾಯಿ ಅವರನ್ನು ಒತ್ತಾಯಿಸಿ ಕೇಂದ್ರದ ಮುಂದೆ ರಾಜ್ಯದ ಹಕ್ಕು ಮಂಡಿಸಿ ಎಂದು ಆಗ್ರಹಿಸಿದೆ. ಅವರು ಕೇಳಲಿಲ್ಲ. ನಮಗೆ ಅನ್ಯಾಯ ಸರಿಪಡಿಸಲು ವಿಶೇಷ ಅನುದಾನದವಾಗಿ ೧೧೪೯೫ ಕೋಟಿ ಕೊಡುತ್ತೇವೆ ಎಂದು ಘೋಷಿಸಿದರು. ಆದರೆ ಈ ಹಣ ಕೊಡಬೇಡಿ ಎಂದು ತಡೆ ಹಿಡಿದವರೇ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು. ಆದರೆ ಈಗ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಮೋದಿ ಅವರ ಕೇಂದ್ರ ಸರ್ಕಾರ ರಚಿಸಿದ ೧೫ ನೇ ಹಣಕಾಸು ಆಯೋಗದಲ್ಲಿ ದಕ್ಷಿಣ ಭಾರತ ರಾಜ್ಯಗಳಿಂದ ಒಬ್ಬೇ ಒಬ್ಬ ಸದಸ್ಯನೂ ಇರಲಿಲ್ಲ. ಇದರಿಂದ ನಮ್ಮ ರಾಜ್ಯಗಳಿಗೆ ಅನ್ಯಾಯ ಆಗಿದೆ. ಇದಕ್ಕೆ ಕಾರಣ ಮೋದಿಯವರೇ ಎಂದು ದೂರಿದ ಅವರು, ಕೇಂದ್ರ ಸರ್ಕಾರದ ಬಜೆಟ್ ದಾಖಲೆಗಳನ್ನೇ ಪರಿಶೀಲಿಸಿ ನೋಡಿ, ನಮಗಾಗಿರುವ ವಂಚನೆಯ ಪ್ರಮಾಣ ಅದರಲ್ಲಿ ದಾಖಲಾಗಿದೆ. ೧೫ ನೇ ಹಣಕಾಸು ಆಯೋಗ ಒಂದರಿAದಲೇ ಇದುವರೆಗೂ ೧,೮೭೦೦೦ ಕೋಟಿ ಒಟ್ಟು ರಾಜ್ಯಕ್ಕೆ ಅನ್ಯಾಯ ಆಗಿದೆ. ರಾಜ್ಯಕ್ಕೆ ಭೀಕರ ಬರಗಾಲ ಬಂತು. ಸೆಪ್ಟೆಂಬರ್ನಿAದ ನಿರಂತರವಾಗಿ ರಾಜ್ಯದ ಪಾಲಿನ ಬರ ಪರಿಹಾರ ಕೊಡಿ ಎಂದು ಒತ್ತಾಯಿಸುತ್ತಲೇ ಇದ್ದೇವೆ. ಆದರೆ ಇದುವರೆಗೂ ಒಂದೇ ಒಂದು ರೂಪಾಯಿ ಬರಪರಿಹಾರ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆದರೂ ಬರದಿಂದ ರಾಜ್ಯದ ಜನತೆ ಕಂಗಾಲಾಗದAತೆ ರಾಜ್ಯ ಸರ್ಕಾರವೇ ಪರಿಹಾರ ನೀಡಿದೆ. ೩೧ ಲಕ್ಷ ರೈತರಿಗೆ ೬೫೦ ಕೋಟಿ ಬರ ಪರಿಹಾರವನ್ನು ರಾಜ್ಯದ ಬೊಕ್ಕಸದಿಂದಲೇ ಕೊಟ್ಟಿದ್ದೇವೆ. ಇನ್ನೂ ಲಕ್ಷ ಲಕ್ಷ ರೈತರಿಗೆ ಪರಿಹಾರ ಕೊಡುವವರಿದ್ದೇವೆ. ಕೇಂದ್ರ ತನ್ನ ಕೈಯಿಂದ ಪರಿಹಾರ ಕೊಡುವುದಲ್ಲ. ನಮ್ಮ ಹಣ ಅವರ ಬಳಿ ಇದೆ. ಅದರಲ್ಲಿ ರಾಜ್ಯದ ಪಾಲನ್ನು ವಾಪಾಸ್ ಕೊಡಬೇಕಿತ್ತು. ಇದರಲ್ಲೂ ಒಂದೇ ಒಂದು ರೂಪಾಯಿ ಕೊಡಲಿಲ್ಲ. ನಾವು ಇನ್ನೂ ಎನ್.ಡಿ.ಆರ್.ಎಫ್. ನಿಧಿಗಾಗಿ ಕಾಯುತ್ತಲೇ ಇದ್ದೇವೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ೫೩೦೦ ಕೋಟಿ ರೂ ಕೊಡುವುದಾಗಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲೇ ಘೋಷಿಸಿದರು. ಇದರಲ್ಲೂ ಒಂದು ರೂಪಾಯಿ ಕೂಡ ಬಂದಿಲ್ಲ. ಅವರೇ ಘೋಷಿಸಿ ಅವರೇ ಕೈ ಎತ್ತಿಬಿಟ್ಟರು ಎಂದು ಬಜೆಟ್ ಪ್ರತಿ ತೋರಿಸಿ ಪ್ರಶ್ನಿಸಿದರು.
ಸ್ವಾತಂತ್ರ ಬಂದಾಗಿನಿAದ ದೇಶದ ಸಾಲ ೨೦೧೪ರ ವರೆಗೂ ೫೪ ಲಕ್ಷ ಕೋಟಿ ಮಾತ್ರ ಇತ್ತು. ಈಗ ೧೮೦ ಲಕ್ಷ ಕೋಟಿಗೆ ಭಾರತದ ಸಾಲ ಏರಿಕೆ ಆಗಿದೆ. ಮೋದಿ ಅವಧಿ ಒಂದರಲ್ಲೇ ೧೩೦ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ೧೩೦ ಕೋಟಿ ಸಾಲ ಒಬ್ಬರೇ ಮಾಡಿದ್ದಾರಲ್ಲಾ ಇದು ಸಾಧನೆಯಾ ಎಂದು ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್ ಆಕ್ರೋಶ
ಹಣಕಾಸು ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದರೂ ಒಂದು ರಾಜ್ಯಕ್ಕೆ ಆಗಿರುವ ಅನ್ಯಾಯ, ತಾರತಮ್ಯವನ್ನು ಸರಿಪಡಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಈ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲವಾದರೆ ಆ ಸರ್ಕಾರ ಯಾಕಿರಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದರು.
ರಾಜ್ಯಕ್ಕೆ ಅನುದಾನ ನೀಡುವ ಅಧಿಕಾರ ಹಣಕಾಸು ಆಯೋಗದ ಮುಂದೆ ಇದೆ. ಕೇಂದ್ರ ಸರ್ಕಾರದ ಕೈಯಲ್ಲಿಲ್ಲ ಎಂದು ನಿರ್ಮಲಾ ಸೀತರಾಮನ್ ಅವರು ಹೇಳಿದ್ದಾರೆ. ನಿಮ್ಮ ಬಳಿ ಅಧಿಕಾರವೇ ಇಲ್ಲವಾದರೆ ಸರ್ಕಾರ ಯಾಕಿರಬೇಕು? ರಾಜ್ಯಕ್ಕೆ ಅನ್ಯಾಯವಾಗಿರುವುದನ್ನು ಸರಿಪಡಿಸುವುದು ಕೇಂದ್ರ ಸರ್ಕಾರದ ಕೆಲಸವಲ್ಲವೇ?. ನಮ್ಮ ಹೋರಾಟದ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇಂತಹ ಟೀಕೆ ಟಿಪ್ಪಣಿಯನ್ನು ನಾವು ಸ್ವಾಗತಿಸುತ್ತೇವೆ. ಟೀಕೆ ಮಾಡುತ್ತಿರುವ ನಮ್ಮ ಬಿಜೆಪಿ ಸ್ನೇಹಿತರಿಗೆ ನಾನು ಕೇಳುವುದಿಷ್ಟೇ. ಜನ ನಿಮ್ಮ ೨೬ ಸಂಸದರನ್ನು ಆರಿಸಿದ್ದಾರೆ. ನೀವು ಒಂದು ದಿನ ರಾಜ್ಯದ ಪರವಾಗಿ ಹೋರಾಟ ಮಾಡಲಿಲ್ಲ. ರಾಜ್ಯದ ಹಿತದ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕಲಿಲ್ಲ. ಡಬಲ್ ಇಂಜಿನ್ ಸರ್ಕಾರ ಇದ್ದರೂ ಇಂಜಿನ್ಗಳು ಫೇಲ್ ಆದವು ಎಂದು ಟೀಕಿಸಿದರು.