ಐಗೂರು, ಫೆ. ೬: ಸೋಮವಾರಪೇಟೆ ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಕೋವರ್ಕೊಲ್ಲಿ ಗ್ರಾಮವು ೩ ರಸ್ತೆಗಳು ಸೇರುವ ಒಂದು ಕೇಂದ್ರ (ಜಂಕ್ಷನ್) ಆಗಿದ್ದು, ರಾಜ್ಯ ಹೆದ್ದಾರಿ ರಸ್ತೆಯಾಗಿರುವ ಈ ರಸ್ತೆಯಲ್ಲಿ ದಿನದ ೨೪ ಗಂಟೆಗಳೂ ವಾಹನಗಳು ಸಂಚರಿಸುತ್ತಿದ್ದು, ಮೈಸೂರು-ಕುಶಾಲನಗರ, ಬೆಂಗಳೂರು-ಮಡಿಕೇರಿ, ಮಂಗಳೂರು-ಸೋಮವಾರಪೇಟೆ- ಹಾಸನಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರ ಸ್ಥಳವಾಗಿದೆ. ಈ ಭಾಗದಲ್ಲಿ ನಾಲ್ಕು ಹೋಂಸ್ಟೇಗಳಿದ್ದು, ಪ್ರವಾಸಿಗರು ತಂಡೋಪ ತಂಡವಾಗಿ ವಾಹನಗಳಲ್ಲಿ ಆಗಮಿಸುತ್ತಾರೆ. ಈ ಜಂಕ್ಷನ್ನಲ್ಲಿ ಅಂಗಡಿಗಳಿದ್ದು ಸುತ್ತಲೂ ಕಾಫಿ ಎಸ್ಟೇಟ್ ಇದ್ದು, ಯಡವನಾಡು ಮೀಸಲು ಅರಣ್ಯ ದಿಂದ ಕಾಡಾನೆಗಳು ರಾತ್ರಿ ವೇಳೆ ಈ ಭಾಗಕ್ಕೆ ಸದಾ ಲಗ್ಗೆಯಿಡುತ್ತಿದೆ. ಇಂತಹ ಸ್ಥಳದಲ್ಲಿ ಹೆಚ್ಚು ಬೆಳಕನ್ನು ಕೊಡುವ ಉರಿಯುವ ಬೀದಿ ದೀಪ ಇಲ್ಲದೆ ಇರುವುದರಿಂದ ಬಸ್ ಕಾಯುವ ಮತ್ತು ಬಸ್ನಿಂದ ಇಳಿಯುವ ಪ್ರಯಾಣಿಕರಿಗೆ ಮತ್ತು ವಾಹನ ಸವಾರರಿಗೂ ಪ್ರಾಣ ಸಂಕಟವಾಗಿದೆ. ರಾತ್ರಿ ವೇಳೆ ಆಟೋ ಚಾಲಕರು ಬಾಡಿಗೆಗೆ ಕರೆದರೆ ಆನೆಗಳಿಗೆ ಹೆದರಿ ಈ ಭಾಗಕ್ಕೆ ಬರಲು ನಿರಾಕರಿಸುತ್ತಾರೆ. ಕಳೆದ ೨೦೧೮ರ ಭೂಕುಸಿತದ ಸಂದರ್ಭದಲ್ಲಿ ಭಾರೀ ಗಾತ್ರದ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು ಎರಡು ವಿದ್ಯುತ್ ಕಂಬಗಳು ತುಂಡಾಗಿದ್ದು, ಇದುವರೆಗೂ ಬೀದಿ ದೀಪವನ್ನು ಅಳವಡಿಸಲಿಲ್ಲ. ಸ್ವಲ್ಪ ಸಮಯ ಬೇಳೂರು ಗ್ರಾಮ ಪಂಚಾಯಿತಿ ಯವರು ಅಳವಡಿಸಿದ್ದ ಸೋಲಾರ್ ದೀಪವೊಂದು ಮೇಣದಬತ್ತಿಯಂತೆ ಮಂದ ಬೆಳಕಿನಿಂದ ಉರಿಯುತ್ತಿತ್ತು. ಈ ಬಗ್ಗೆ ವರದಿಗಳು ಪತ್ರಿಕೆಗಳಲ್ಲಿ ಬಂದಿದ್ದು, ಇತ್ತೀಚೆಗೆ ಯಡವನಾಡಿ ನಲ್ಲಿ ನಡೆದ ಐಗೂರು ಗ್ರಾಮ ಸಭೆಯಲ್ಲಿ ವಾಹನ ಸವಾರರು ಇಲಾಖಾಧಿಕಾರಿಗಳ ಎದುರು ವಿಷಯವನ್ನು ಪ್ರಸ್ತಾಪ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಬಗ್ಗೆ ಸೆಸ್ಕ್ ಇಲಾಖೆಯ ವರನ್ನು ವಿಚಾರಿಸಿದಾಗ ಬೇಳೂರು ಪಂಚಾಯಿತಿಯವರು ಬೀದಿ ದೀಪ ಅಳವಡಿಸುವ ಬಗ್ಗೆ ಸೆಸ್ಕ್ಗೆ ಪತ್ರ ವ್ಯವಹಾರ ಮಾಡುವ ಅಗತ್ಯವಿದ್ದು, ಪತ್ರ ಬಂದ ನಂತರ ಬೀದಿ ದೀಪ ಅಳವಡಿಸಲಾಗುವುದು ಎಂದಿದ್ದಾರೆ. ಇಂತಹ ಕೇಂದ್ರ ಸ್ಥಾನದಲ್ಲಿ ಕಳೆದ ೫ ವರ್ಷಗಳಿಂದ ಈ ಭಾಗದ ಪಂಚಾಯಿತಿ ವಾರ್ಡ್ ಸದಸ್ಯರು ಬೀದಿ ದೀಪವನ್ನು ಅಳವಡಿಸಲು ಆಸಕ್ತಿ ತೋರದ ಬಗ್ಗೆ ಐಗೂರು, ಕಿರುಗಂದೂರು, ಹೊಸ ತೋಟ ಮತ್ತು ಕಾರೆಕೊಪ್ಪ ಭಾಗದ ವಾಹನ ಸವಾರರು ಮತ್ತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. - ಸುಕುಮಾರ.