ಗೋಣಿಕೊಪ್ಪಲು, ಫೆ. ೬: ಹದಗೆಟ್ಟಿದ್ದ ವೀರಾಜಪೇಟೆ, ಕಾಕೋಟುಪರಂಬು, ಮಡಿಕೇರಿ ಸಂಪರ್ಕ ರಸ್ತೆ ಡಾಂಬರೀಕರಣ ಪೂರ್ಣಗೊಂಡಿದ್ದು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಮೂಲಕ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು.

ವೀರಾಜಪೇಟೆಯಿಂದ ಪ್ರಮುಖ ಮುಖ್ಯರಸ್ತೆ ಮಾರ್ಗವಾಗಿ ಮಡಿಕೇರಿಗೆ ತೆರಳುವ ವಾಹನ ಸವಾರರು ರಸ್ತೆಯ ದುರಸ್ಥಿ ಹಾಗೂ ಕಿರಿದಾದ ಹಿನ್ನೆಲೆಯಲ್ಲಿ ಪ್ರಯಾಣಿಸುವ ಸಂದರ್ಭ ಹಲವು ಗಂಟೆಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಅಲ್ಲದೆ ಮುಖ್ಯ ರಸ್ತೆಗೆ ಹೊಂದಿಕೊAಡAತೆ ವಿದ್ಯುತ್ ಕಂಬಗಳು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು.

ಇದರಿಂದ ನೂತನ ಶಾಸಕರಿಗೆ ಕಾಕೋಟುಪರಂಬು ಗ್ರಾಮಸ್ಥರು ಮುಖ್ಯರಸ್ತೆಯ ಅಗಲೀಕರಣ ಹಾಗೂ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬವನ್ನು ತೆರವುಗೊಳಿಸುವಂತೆ ಮನವಿ ಸಲ್ಲಿಸಿದ್ದರು. ನಾಗರಿಕರ ಸಮಸ್ಯೆಗೆ ಸ್ಪಂದಿಸಿದ ಶಾಸಕರು ರಸ್ತೆ ಬದಿಯಲ್ಲಿ ವಾಹನ ಸವಾರರಿಗೆ ತೊಂದರೆ ಆಗುತ್ತಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಚೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಅಲ್ಲದೆ ರಸ್ತೆಯ ಅಗಲೀಕರಣ ಹಾಗೂ ಗುಣಮಟ್ಟದ ಕಾಮಗಾರಿ ಸಲುವಾಗಿ ರೂ. ೨.೫೧ ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದ್ದರು.

ರಸ್ತೆ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರೈಸುವ ಮೂಲಕ ಸಾರ್ವಜನಿಕರ ಸುಗಮ ಓಡಾಟಕ್ಕೆ ಅನುಕೂಲವಾಗಿದೆ. ರಸ್ತೆ ಬದಿಯಲ್ಲಿ ವಾಹನ ಸವಾರರಿಗೆ ಅನುಕೂಲವಾಗಲು ರಿಫ್ಲೆಕ್ಟರ್‌ಗಳನ್ನು ಅಳವಡಿಸಲಾಗಿದೆ. ರಸ್ತೆ ತೊಂದರೆ ನೀಡುತ್ತಿದ್ದ ೯ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗಿದೆ. ಉತ್ತಮ ರಸ್ತೆ ನಿರ್ಮಾಣ ಮಾಡಿರುವುದರಿಂದ ವಾಹನ ಸವಾರರು ಕಡಿಮೆ ಸಮಯದಲ್ಲಿ ಸಂಚರಿಸಬಹುದಾಗಿದೆ.

ಮುಖ್ಯ ರಸ್ತೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಶರವೇಗದಲ್ಲಿ ಕಾರ್ಯಕ್ರಮಗಳು ನಡೆಯಬೇಕು. ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು. ಅಧಿಕಾರಿ ವರ್ಗ ಈ ನಿಟ್ಟಿನಲ್ಲಿ ಇತ್ತೀಚಿನ ದಿನದಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿರುವುದು ಶ್ಲಾಘನೀಯ. ರಸ್ತೆ ಕಾಮಗಾರಿ ಗುಣಮಟ್ಟ ಕಾಪಾಡಿರುವ ಬಗ್ಗೆ ಸಾರ್ವಜನಿಕ ವಲಯ ಪ್ರಶಂಸಿಸಿದೆ. ಕೋಟ್ಯಂತರ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುವ ಸಂದರ್ಭ ಅಧಿಕಾರಿಗಳು ವಿಶೇಷ ರೀತಿಯಲ್ಲಿ ಮುತುವರ್ಜಿ ವಹಿಸಬೇಕು. ನಾಗರಿಕರಿಗೆ ಉತ್ತಮ ಸೌಲಭ್ಯ ಒದಗಿಸುವುದು ಜನಪ್ರತಿನಿಧಿಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಮುಂದೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿ ಕೊಳ್ಳಲಾಗುವುದು ಸಾರ್ವಜನಿಕರು ಸ್ಪಂದಿಸುವAತೆ ಮನವಿ ಮಾಡಿದರು.

ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಕಾಕೋಟುಪರಂಬು ವಲಯ ಅಧ್ಯಕ್ಷ ಮಂಡೇಟಿರ ಅನೀಲ್ ಅಯ್ಯಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಟ್ಟಕಾಳಂಡ ಕಾಮಿ, ಮಹಿಳಾ ಘಟಕದ ಅಧ್ಯಕ್ಷೆ ತೋರೆರ ಪೊನ್ನಕ್ಕಿ, ಗ್ರಾಮಸ್ಥರಾದ ಮೇವಡ ಚಿಣ್ಣಪ್ಪ, ಪೊಕ್ಕುಳಂಡ್ರ ರಮೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ರಾಫಿ, ಮತೀನ್, ಪಕ್ಷದ ಮುಖಂಡರಾದ ನಾಸೀರ್, ಚೋಕಿಂ ಸೇರಿದಂತೆ ಗುತ್ತಿಗೆದಾರರಾದ ನಾಮೇರ ನವೀನ್, ಕೊಕ್ಕಲೆಮಾಡ ಧನು ತಿಮ್ಮಯ್ಯ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಲಿಂಗರಾಜ್, ಇಂಜಿನಿಯರ್ ರಮಣಗೌಡ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

-ಹೆಚ್.ಕೆ.ಜಗದೀಶ್