ಮಡಿಕೇರಿ, ಫೆ. ೫: ಜಿಲ್ಲೆಯ ಬಹುಕಾಲದ ಸಮಸ್ಯೆಯಾಗಿರುವ ಜಮ್ಮಾಬಾಣೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ೧ ವರ್ಷದೊಳಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬೃಹತ್ ಆಂದೋಲನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಪ್ರಮುಖವಾಗಿ ಜಮ್ಮಾಬಾಣೆ ಸಮಸ್ಯೆ ಬಗೆಹರಿಯದೆ ಹಾಗೆಯೇ ಉಳಿದಿದೆ. ಶಾಸಕರು, ಜಿಲ್ಲಾಧಿಕಾರಿಗಳು ಈ ಬಗ್ಗೆ ನನ್ನ ಗಮನ ಸೆಳೆದಿದ್ದಾರೆ. ಕಳೆದ ವಾರ ಉನ್ನತ ಮಟ್ಟದ ಅಧಿಕಾರಿಗಳನ್ನು ಜಿಲ್ಲೆಗೆ ಕಳುಹಿಸಿ ಅಧ್ಯಯನ ನಡೆಸಿ ವರದಿ ಪಡೆದುಕೊಂಡಿದ್ದೇನೆ. ಜಿಲ್ಲೆಯಲ್ಲಿ ೨೫ ಸಾವಿರ ಜಮ್ಮಾಬಾಣೆ ಸರ್ವೆ ನಂಬರ್‌ಗಳಿವೆ. ಗ್ರಾಮಸಭೆ ನಡೆಸಿ ಜನರ ಸಹಮತ ಪಡೆದು, ತಕರಾರು ಇಲ್ಲದ ಕಡೆ ನೇರ ಸರ್ವೆ ನಡೆಸಿ ಸಾಗುವಳಿ ಮಾಡುವವರಿಗೆ ಪಹಣಿ ನೀಡಲಾಗುವುದು. ಕಂದಾಯ ಇಲಾಖಾಧಿಕಾರಿಗಳು, ವಿವಿಧ ಹಂತದ ಅಧಿಕಾರಿಗಳು ಒಂದಾಗಿ ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಲಾಗುವುದು ಎಂದರು.

ಜಮ್ಮಾ ಭೂಮಿ ಹಿಡುವಳಿದಾರರಿಗೆ ಆರ್.ಟಿ.ಸಿ. ಇಲ್ಲದಿರುವುದರಿಂದ ಸಾಲ ಸೌಲಭ್ಯ ಹಾಗೂ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೃಷಿ ಮಾಡುವ ಕುಟುಂಬದವರಿಗೆ ಆರ್.ಟಿ.ಸಿ. ಮಾಡಿಕೊಡ ಬೇಕಿದ್ದು, ಆ ನಿಟ್ಟಿನಲ್ಲಿ ಸರ್ವೆ ಕಾರ್ಯವನ್ನು ಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದರು.

ಕೊಡಗು ಜಿಲ್ಲೆಯಲ್ಲಿ ೨೫ ಸಾವಿರ ಜನರು ಜಮ್ಮಬಾಣೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು, ಪಟ್ಟೆದಾರ ಕುಟುಂಬದ ಒಬ್ಬರ ಹೆಸರಿಗೆ ಮಾತ್ರ ಭೂಮಿ ಇದ್ದು, ಆ ಕುಟುಂಬದ ಇತರರಿಗೂ ಆರ್.ಟಿ.ಸಿ. ಮಾಡಬೇಕಿದೆ. ಆ ನಿಟ್ಟಿನಲ್ಲಿ ಸರ್ವೆ ಕಾರ್ಯ ಕೈಗೊಳ್ಳುವಂತೆ ತಿಳಿಸಿದರು.

ಸರ್ವೆಯರ್‌ಗಳ ನೇಮಕ - ಅಗತ್ಯ ಉಪಕರಣ

ಜಮ್ಮಾಬಾಣೆ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಕೆಲಸ ಇರುವ ಕಾರಣ ಹೆಚ್ಚುವರಿ ಸರ್ವೆಯರ್‌ಗಳ ಅವಶ್ಯಕತೆ ಇದೆ. ಸರಕಾರಿ ಸರ್ವೆಯರ್‌ಗಳ ಅನುಮತಿಯುಳ್ಳ ಪರವಾನಗಿ ಇರುವ ಖಾಸಗಿ ಸರ್ವೆಯರ್‌ಗಳನ್ನು ಈ ಕೆಲಸಕ್ಕೆ ಬಳಸಿಕೊಳ್ಳಲಾಗುವುದು. ಜೊತೆಗೆ ರಾಜ್ಯದ ವಿವಿಧೆಡೆಗಳಿಂದಲೂ ಇದಕ್ಕಾಗಿ ಸರ್ವೆಯರ್‌ಗಳನ್ನು ಕಳುಹಿಸಿಕೊಡಲಾಗುವುದು.

ಒತ್ತುವರಿ ಕಾಫಿ ತೋಟ ಗುತ್ತಿಗೆ ಅನುಷ್ಠಾನ

ಸರಕಾರಿ ಜಾಗ ಒತ್ತುವರಿಗೊಳಿಸಿಕೊಂಡು ಕಾಫಿ ತೋಟ ಮಾಡಿದವರಿಗೆ ಅದೇ ಜಾಗ ಗುತ್ತಿಗೆ ನೀಡುವ ವಿಚಾರ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲಿಯೇ ಅನುಷ್ಠಾನವಾಗಲಿದೆ ಎಂದು ಕಂದಾಯ ಸಚಿವರು ತಿಳಿಸಿದರು.

ಈಗಾಗಲೇ ಸರಕಾರ ಅಂತಿಮ ನಿರ್ಧಾರ ಕೈಗೊಂಡಿದ್ದು, ನೋಟಿಫಿಕೇಷನ್ ಆಗಿದೆ. ಇದಕ್ಕೆ ಸರಕಾರದ ನಿಲುವು ಸ್ಪಷ್ಟವಿದ್ದು, ಕಾರ್ಯಗತವಾಗಲಿದೆ ಎಂದರು.

ಆರ್.ಟಿ.ಸಿ.ಗೆ ಆಧಾರ್ ಲಿಂಕ್

ಆರ್.ಟಿ.ಸಿ.ಗಳಿಗೆ ಆಧಾರ್ ಲಿಂಕ್ ಮಾಡುವ ಯೋಜನೆ ಮುಂದಿನ ದಿನಗಳಲ್ಲಿ ಅನುಷ್ಠಾನವಾಗಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಆರ್.ಟಿ.ಸಿ. ನಕಲು ಮಾಡಿ ದುರುಪಯೋಗ ಪ್ರಕರಣ ತಪ್ಪಿಸುವ ಸಲುವಾಗಿ, ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಈ ಯೋಜನೆ ಸರಕಾರದ ಮುಂದಿದೆ. ಮುಂದಿನ ದಿನಗಳಲ್ಲಿ ಇದು ಕಾರ್ಯಗತವಾಗಲಿದೆ ಎಂದರು.

ಕಡತಗಳ ವಿಲೇವಾರಿ ವಿಳಂಬವಾಗಬಾರದು

ಕAದಾಯ ಇಲಾಖೆಯ ವಿವಿಧ ವಿಭಾಗಗಳಲ್ಲಿರುವ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ವಿಳಂಬವಾಗದAತೆ ಎಚ್ಚರಿಕೆ ವಹಿಸುವಂತೆ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ, ತಹಶೀಲ್ದಾರ್, ಉಪವಿಭಾಗಧಿಕಾರಿ ಹಂತದ ನ್ಯಾಯಾಲಯದಲ್ಲಿ ಇರುವ ವ್ಯಾಜ್ಯಗಳನ್ನು ಶೀಘ್ರ ಪರಿಹರಿಸಬೇಕು. ಸರಕಾರ ಈ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಕೈಗೊಂಡಿದ್ದು, ಅಧಿಕಾರಿಗಳು ಕೈಜೋಡಿಸಬೇಕು ಎಂದು ತಿಳಿಸಿದರು.

ಪಹಣಿ ವ್ಯತ್ಯಾಸ ಪರಿಹಾರಕ್ಕೆ ಸೂಚನೆ

ಪ್ರಸ್ತುತ ರಾಜ್ಯಾದ್ಯಂತ ಪೈಕಿ ಮತ್ತು ಪಹಣಿ ಕಾಲಂ ೩ ಮತ್ತು ೯ರಲ್ಲಿ ವ್ಯತ್ಯಾಸವಿರುವ ಪ್ರಕರಣಗಳ ಸಂಖ್ಯೆ ಒಟ್ಟಾರೆ ೧,೩೨,೬೧೮. ಈ ಪೈಕಿ ಕೊಡಗಿನಲ್ಲೇ ಸುಮಾರು ೬೦ ಸಾವಿರಕ್ಕೂ ಹೆಚ್ಚಿನ ಪ್ರಕರಣಗಳಿದ್ದು, ಈ ಸಮಸ್ಯೆಯನ್ನು ಮುಂದಿನ ೬೦ ದಿನಗಳಲ್ಲಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.