ವೀರಾಜಪೇಟೆ, ಫೆ. ೬: ದ. ಕೊಡಗಿನ ವಿವಿಧ ಸ್ಥಳಗಳಲ್ಲಿ ಲೈನ್ ಮನೆಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಕಾರ್ಮಿಕ ಕುಟುಂಬಗಳು ಸೂರಿಗಾಗಿ ಪರಿತಪಿಸುತ್ತಿರುವ ಕೂಗು ವೀರಾಜಪೇಟೆ, ಫೆ. ೬: ದ. ಕೊಡಗಿನ ವಿವಿಧ ಸ್ಥಳಗಳಲ್ಲಿ ಲೈನ್ ಮನೆಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಕಾರ್ಮಿಕ ಕುಟುಂಬಗಳು ಸೂರಿಗಾಗಿ ಪರಿತಪಿಸುತ್ತಿರುವ ಕೂಗು ವೀರಾಜಪೇಟೆ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡು ಪೈಸಾರಿಯಲ್ಲಿ ನಿರಾಶ್ರಿತರು ಅನುಭವಿಸುತ್ತಿರುವ ಸಮಸ್ಯೆಗಳು ಮುಗಿಲಷ್ಟಿವೆ. ಐದು ವರ್ಷಗಳಿಂದ ಗುಡಿಸಲಿನಲ್ಲಿ ನೆಲೆ ಕಾಣುತ್ತಿರುವ ನಾಗರಿಕರು, ವನ್ಯಮೃಗಗಳ ಭಯ, ವಿದ್ಯುತ್, ಬೀದಿ ದೀಪ ಇಲ್ಲದಿರುವುದು, ಆರೋಗ್ಯ ಸಮಸ್ಯೆ ಒಟ್ಟಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ, ಇವರ ಜೀವನವು ಅತಂತ್ರ ಪರಿಸ್ಥಿತಿಯ ತಾಣವಾಗಿದೆ.
ಇಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಮಂದಿ ಸೇರಿದಂತೆ ೬೨ ಕುಟುಂಬಗಳು ವಾಸ ಮಾಡುತ್ತಿದೆ. ಸುಮಾರು ಐದು ವರ್ಷಗಳಿಂದ ಸೂರು ಒದಗಿಸಿಕೊಡುವ ಭರವಸೆಯ ಮಾತುಗಳಿಗೆ ಮಾತ್ರ ಸೀಮಿತವಾಗಿದೆ. ಐದು ವರ್ಷಗಳಿಂದ ಪ್ಲಾಸ್ಟಿಕ್ ಟಾರ್ಪಲ್ ಹೊದಿಕೆಯಿಂದ ನಿರ್ಮಾಣ ಮಾಡಿರುವ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದು ವನ್ಯ ಮೃಗಗಳ ಭೀತಿಯೂ ಇದೆ. ಮಳೆಗಾಲದಲ್ಲಿ ಹೊದಿಕೆಯಿಂದ ಸೋರಿಕೆಗೊಂಡ ಮಳೆ ನೀರು ಗುಡಿಸಲಲ್ಲಿ ತುಂಬಿಕೊAಡು ರಾತ್ರಿ ಸಮಯದಲ್ಲಿ ನಿದ್ರಿಸಲು ಕಷ್ಟಪಡುತ್ತಿದ್ದ ಸನ್ನಿವೇಶವೂ ಇತ್ತು.
ಇಲ್ಲಿ ವಾಸಿಸುತ್ತಿರುವ ನಿರಾಶ್ರಿತರು ಮೊದಲು ವಾಸಿಸುತ್ತಿದ್ದ ತೋಟದ ಲೈನ್ ಮನೆಗೂ ತೆರಳದೆ ಇಲ್ಲಿಯು ನೆಲೆಸಲಾಗದೆ ಅತಂತ್ರದ ಜೀವನವನ್ನು ಸಾಗಿಸುತ್ತಿದ್ದಾರೆ.
ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯಿಂದ ತಿಂಗಳಿಗೊಮ್ಮೆ ಪಡಿತರ ಪೌಷ್ಠಿಕ ಆಹಾರ ಸಾಮಾಗ್ರಿಗಳನ್ನು ನೀಡಲಾಗುತ್ತಿದೆ.
ಪ್ರಥಮ ಆದ್ಯತೆಯಂತೆ ಸ್ಥಳೀಯ ವಸತಿ ರಹಿತರಿಗೆ ಮನೆ ನೀಡಲಾಗುತ್ತದೆ. ಉಳಿದಂತೆ ವಲಸೆ ಬಂದ ವಸತಿ ರಹಿತರಿಗೆ ನೀಡಲಾಗುವುದು. ಸುಮಾರು ೧೨೯ ಮಂದಿ ಸ್ಥಳೀಯರು ಸೂರಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ.
ಕೆದಮುಳ್ಳ್ಳೂರು ಪಂಚಾಯಿತಿ ವ್ಯಾಪ್ತಿಯ ಸರ್ವೇ ಸಂಖ್ಯೆ ೩೭೦/೧ ರಲ್ಲಿ ಸುಮಾರು ೨೦ ಎಕ್ರೆ ಸ್ಥಳವಿದ್ದು ೨೦೧೭ ರಲ್ಲಿ ದಿಡ್ಡಳ್ಳಿ ಹೋರಾಟದ ನಂತರದಲ್ಲಿ ಹೆಗ್ಗಳ ಗ್ರಾಮದಲ್ಲಿ ಬಿಡಾರ ಹೂಡಿದ್ದ ಇವರನ್ನು ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಜಂಟಿಯಾಗಿ ಹೆಗ್ಗಳ ಗ್ರಾಮದಿಂದ ತೆರವು ಮಾಡಲಾಯಿತು. ಹೆಗ್ಗಳದಿಂದ ಮಾನವೀಯ ನೆಲೆಯಲ್ಲಿ ಬಾರಿಕಾಡುವಿನಲ್ಲಿ ತಾತ್ಕಾಲಿಕವಾಗಿ ತಂಗಲು ಆಶ್ರಯ ನೀಡಲಾಗಿತ್ತು. ಸುಮಾರು ೨೦ ಎಕ್ರೆ ಸ್ಥಳದಲ್ಲಿ ೭.೫೦ ಎಕ್ರೆ ಜಮೀನು ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಗೆ ನೀಡಲಾಗಿ ಸ್ಥಳದಲ್ಲಿ ವಸತಿ ರಹಿತರಿಗಾಗಿ ೧೨೯ ಮನೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ ಸುಮಾರು ೪೦ ಮನೆಗಳು ನಿರ್ಮಾಣವಾಗಿದ್ದು ಉಳಿದ ಮನೆಗಳು ನಿರ್ಮಾಣ ಹಂತದಲ್ಲಿವೆ. ಐ.ಟಿ.ಡಿ.ಪಿ, ಕೆ.ಆರ್.ಡಿ.ಐ.ಆರ್.ಎಲ್, ಮತ್ತು ನಿರ್ಮಿತಿ ಕೇಂದ್ರ ಇಲಾಖೆಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಸುಮಾರು ಸರಾಸರಿ ೧೨೦೦ ಚದರ ಅಡಿ ಅಳತೆಯಲ್ಲಿ ರೂ. ೫ ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿ ೧೦ ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು. ೫ಲಕ್ಷ ರೂ. ವೆಚ್ಚಗಳಲ್ಲಿ ಒಂದು ಮನೆ ನಿರ್ಮಾಣ ಮಾಡಲು ಸಾದ್ಯವಾಗದ ಹಿನ್ನೆಲೆ ಮತ್ತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ರೂ.೬ ಲಕ್ಷ ೬೦ ಸಾವಿರ ವೆಚ್ಚದಲ್ಲಿ ಮನೆ ಕಾಮಗಾರಿ ನಡೆಸಲಾಗುತ್ತಿದೆ.
ಇತ್ತೀಚೆಗೆ ಶಾಸಕರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರಕಾರದಿಂದ ಅನುದಾನಗಳು ದೊರೆತಲ್ಲಿ ಕಾಮಗಾರಿ ಬೇಗ ಪೂರ್ಣಗೊಳ್ಳಬಹುದು. ಈಗಾಗಲೇ ೩ ಕೋಟಿಗೂ ಅಧಿಕ ಮೊತ್ತದ ಹಣ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಮೊದಲ ಹಂತದಲ್ಲಿ ೪೦ ಮನೆಗಳು, ಎರಡನೇ ಹಂತದಲ್ಲಿ ೬೦ ಮನೆಗಳನ್ನು ಹಸ್ತಾಂತರ ಮಾಡುವ ಯೋಜನೆ ಇದ್ದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರದವರು ವಹಿಸಿಕೊಂಡಿದ್ದಾರೆ. ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಕೆ.ಆರ್.ಡಿ.ಐ.ಆರ್.ಎಲ್ ಸಂಸ್ಥೆ ಮಾಡುತ್ತಿದೆ.
ಸರಕಾರದಿಂದ ಸರಿಯಾದ ಸಮಯಕ್ಕೆ ಅನುದಾನ ದೊರಕದೆ ಇದ್ದ ಹಿನ್ನೆಲೆ ಮತ್ತು ಇಚ್ಚಾಶಕ್ತಿಯ ಕೊರತೆ ಕಾರಣ
(ಮೊದಲ ಪುಟದಿಂದ) ಕಾಮಗಾರಿ ನೆನೆಗುದಿಗೆ ಬಿದ್ದು ಬಡವರಿಗೆ ಸೂರು ಇದುವರೆಗೆ ದೊರಕದಂತಾಗಿದೆ. ಇದೀಗ ಮತ್ತೆ ಕಾಮಗಾರಿ ಪ್ರಾರಂಭವಾಗಿದ್ದು ಇನ್ನೆಷ್ಟು ದಿನಗಳ ಕಾಲ ಜಾತಕ ಪಕ್ಷಿಯಂತೆ ಕಾಯಬೇಕಿದೆ ಎನ್ನುವುದನ್ನು ಕಾದು ನೋಡಬೇಕು.
ಇಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಬಸ್ಸಿನ ವ್ಯವಸ್ಥೆ ಇಲ್ಲ, ಎರಡು ಬೋರ್ವೆಲ್ಗಳನ್ನು ಕೊರೆಸಿದ್ದರೂ ಬೇಸಿಗೆಯಲ್ಲಿ ನೀರಿನ ಕೊರತೆ ಕಾಡಲಿದೆ. ಶೌಚಾಲಯಕ್ಕೆ ಮೊಬೈಲ್ ಟಾಯ್ಲೇಟ್ಗಳನ್ನು ಬಳಸುತ್ತಿದ್ದು ಅದು ಕೆಲವು ಕೆಟ್ಟಿದೆ. ಅದರ ವ್ಯವಸ್ಥೆ ಮಾಡಬೇಕು. ಆದಷ್ಟು ಬೇಗ ಸಮಸ್ಯೆಗಳ ಪರಿಶೀಲನೆ ಮಾಡಿ ವ್ಯವಸ್ಥೆ ಕಲ್ಪಿಸಬೇಕಿದೆ.
ಸೂರಿಗಾಗಿ ಹೋರಾಟಗಳು ಮುಂದುವರೆದರು ನಿರ್ಗತಿಕ ವಸತಿ ರಹಿತರಿಗೆ ಸೂರು ಒದಗಿಸಲು ಸರ್ಕಾರಗಳು ವಿಫಲವಾಗಿದೆ. ಪ್ರಸ್ತುತ ಸ್ಥಳದಲ್ಲಿರುವ ಸ್ಥಿತಿಗತಿಗಳನ್ನು ಅವಲೋಕಿಸಿದಲ್ಲಿ ಸರಕಾರ ಮತ್ತು ಸಮಾಜ ತಲೆತಗ್ಗಿಸುವಂತಿದೆ. ಸರ್ಕಾರವು ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಬೇಕಿದೆ.