ಸಂಪಾಜೆ, ಫೆ. ೪: ಕೊಡಗು ಸಂಪಾಜೆ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಗ್ರಾಮ ಪಂಚಾಯಿತಿ ಸಂಪಾಜೆ ಸಭಾಂಗಣದಲ್ಲಿ ಕೆನರಾ ಬ್ಯಾಂಕ್ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಹಭಾಗಿತ್ವದಲ್ಲಿ ನಡೆಸಲಾಯಿತು.

ಈ ಸಂದರ್ಭ ಆದರ್ಶ ಕೃಷಿಕ ಶ್ರೀಧರ್ ಭಟ್ ಅರೆಕಲ್ಲು, ಗ್ರಾಮದ ಸ್ವ-ಉದ್ಯೋಗಿನಿಯಾಗಿ (ಹೈನುಗಾರಿಕೆ) ಉದಯಕುಮಾರಿ ಸಂಪಾಜೆ, ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿ ಅಕ್ಷಯ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಪ್ರಗತಿಪರ ಕೃಷಿಕರಾದ ಶ್ರೀಧರ್ ಭಟ್ ಅರೆಕಲ್ಲು ಮಾತನಾಡಿ, ಹಳದಿ ರೋಗಕ್ಕೆ ಸವಾಲೊಡ್ಡಿ ಯಾವ ರೀತಿಯಲ್ಲಿ ಅಡಿಕೆ ಕೃಷಿಯನ್ನು ಚೇತರಿಕೆ ಹಂತಕ್ಕೆ ತರಬಹುದೆಂದು ಮಾಹಿತಿ ನೀಡಿದರು. ಅದೇ ವೇಳೆ ಸ್ವಉದ್ಯೋಗಿನಿಯಾಗಿ ಗುರುತಿಸಲ್ಪಟ್ಟ ಉದಯ ಕುಮಾರಿ ಹೈನುಗಾರಿಕೆ, ಕೋಳಿ ಸಾಕಣೆ ನಡೆಸುವುದರ ಬಗ್ಗೆ ಮಾಹಿತಿ ನೀಡಿದರು. ನಂತರ ನಮ್ಮ ಸಂಕಲ್ಪ ವಿಕಸಿತ ಭಾರತ ಎಂಬ ಧ್ಯೇಯ ವಾಕ್ಯದೊಂದಿಗೆ ಬಂದಿದ್ದ ವಾಹನದಿಂದ ಟಿವಿ ಪರದೆಯ ಮೂಲಕ ಕೇಂದ್ರ ಸರಕಾರದ ಯೋಜನೆಗಳನ್ನು ವೀಡಿಯೋ ಚಿತ್ರೀಕರಣದ ಮೂಲಕ ತೋರಿಸಿಕೊಟ್ಟರು. ಹಾಗೆಯೇ ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಹೀಗೆ ಹತ್ತು ಹಲವು ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುದರ ಮೂಲಕ ಕೊನೆಗೊಂಡಿತು. ನಂತರ ಸ್ಥಳದಲ್ಲಿ ಇದ್ದ ವಿಜಯ ವಿನಾಯಕ ಗ್ಯಾಸ್ ಮಡಿಕೇರಿ ಇವರು ಉಜ್ವಲ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ ಮಾತನಾಡಿ, ಶುಚಿತ್ವದ ಬಗ್ಗೆ ನಮ್ಮ ಕಾಳಜಿ ಯಾವ ರೀತಿ ಇರಬೇಕು, ಸರಕಾರದ ಯೋಜನೆಯನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬೇಕು ಎನ್ನುವುದರ ಬಗ್ಗೆಯೂ ಮಾಹಿತಿ ನೀಡಿದರು.

ಸಮಾರಂಭದಲ್ಲಿ ಕೆನರಾ ಬ್ಯಾಂಕ್ ವ್ಯವಸ್ಥಾಪಕರು ಕಲ್ಲುಗುಂಡಿ ಹಾಗೂ ಸಿಬ್ಬಂದಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರು ಸಂಪಾಜೆ ಹಾಗೂ ಸಿಬ್ಬಂದಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಓ ಹಾಗೂ ಸಿಬ್ಬಂದಿ ವರ್ಗ, ಸಹಕಾರ ಸಂಘದ ಸದಸ್ಯರು, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಗ್ರಾಮದ ಎಲ್ಲಾ ಬಂಧುಗಳು, ಹಿರಿಯರು, ಕಿರಿಯರು ಸಭೆಯಲ್ಲಿ ಉಪಸ್ಥಿತರಿದ್ದರು.