ಮಡಿಕೇರಿ, ಫೆ. ೪: ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಿ. ಧನರಾಜು ಅವರ ಉಪಸ್ಥಿತಿಯಲ್ಲಿ ‘ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನಾ ಕಾರ್ಯಕ್ರಮ’ ಅನುಷ್ಠಾನದ ಬಗ್ಗೆ ಇತ್ತೀಚೆಗೆ ಸಭೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಭಿತ್ತಿಪತ್ರಗಳು, ಕರಪತ್ರಗಳು ಹಾಗೂ ಬ್ಯಾನರ್ ಬಿಡುಗಡೆಗೊಳಿಸಿದರು. ಕರಪತ್ರ ಬಿಡುಗಡೆ ಮಾಡಿದ ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ಕುಮಾರ್ ಎಂ.ಕೆ. ಮಾತನಾಡಿ, ಕುಷ್ಠರೋಗದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ನಡೆಸಲಾಯಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಕುಷ್ಠರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯ ಎಂದು ತಿಳಿಸಿದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ. ಎನ್. ಆನಂದ್ ಮಾತನಾಡಿ, ಜನವರಿ ೩೦ ರಿಂದ ಫೆಬ್ರವರಿ ೧೩ ರವರೆಗೆ ಜಿಲ್ಲಾದ್ಯಂತ “ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ” ಕಾರ್ಯಕ್ರಮ ನಡೆಯಲಿದೆ.

ಪ್ರತಿ ಗ್ರಾಮಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ, ಹಾಗೂ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಕುಷ್ಠರೋಗದ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.

ಕೊಡಗು ಜಿಲ್ಲೆಯಲ್ಲಿ ಒಟ್ಟು ೫ ಎಂ.ಬಿ ಪ್ರಕರಣಗಳಿದ್ದು ಇವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಸೆಲ್ಫ್ಕೇರ್ ಕಿಟ್ ಹಾಗೂ ಎಂ.ಸಿ.ಆರ್. ಫೂಟ್‌ವೇರ್‌ಗಳನ್ನು ಸಹ ನೀಡಿದ್ದೇವೆ ಎಂದು ಹೇಳಿದರು.

ವ್ಯಾಪಕ ಪ್ರಚಾರ ಕೈಗೊಳ್ಳಲು ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಸಮುದಾಯ ಆರೋಗ್ಯಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

ವಿವಿಧ ಇಲಾಖೆಯ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿ ಕುಷ್ಠರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ನಡೆಸಲಾಗುತ್ತಿದೆ. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಸತೀಶ್ ಕುಮಾರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮಾಧಿಕಾರಿಗಳು ಡಾ. ಆನಂದ್ ಅವರು ಹಾಗೂ ಇತರೆ ಸಿಬ್ಬಂದಿ ವರ್ಗದವರು ಹಾಜರಾಗಿದ್ದರು.

ಕುಷ್ಠರೋಗವು ಸಾಂಕ್ರಾಮಿಕ ರೋಗವಾಗಿದ್ದು, ಸಾರ್ವಜನಿಕರು ಇದಕ್ಕೆ ಭಯಪಡುವ ಅಗತ್ಯವಿಲ್ಲ, ಈ ಜಾಗೃತಿ ಅಭಿಯಾನದ ಸಂದರ್ಭದಲ್ಲಿ ಶಾಲಾ ಮಕ್ಕಳ ತಪಾಸಣೆ, ಉಪ ಆರೋಗ್ಯ ಕೇಂದ್ರ ಮೂಲಕ ಗ್ರಾಮದಲ್ಲಿ ಜಾಗೃತಿ ಮೂಡಿಸುವುದಲ್ಲದೇ, ಕುಷ್ಠರೋಗ ನಿರ್ಮೂಲನೆಯ ಕುರಿತು ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಲಾಗುವುದು ಎಂದರು.

ಪಾದಗಳ ದೌರ್ಬಲ್ಯ, ಬೆರಳುಗಳ ದೌರ್ಬಲ್ಯ, ಕಣ್ಣು ಮುಚ್ಚುವಲ್ಲಿ ತೊಂದರೆ, ವ್ಯಕ್ತಿಯ ದೇಹದ ಮೇಲೆ ಸ್ಪರ್ಶ ಜ್ಞಾನವಿಲ್ಲ, ಮಚ್ಚೆಗಳು, ತ್ವಚ್ಚೆಯ ಮೇಲೆ ಕೆಂಪಾದ ಬಾವು, ನೋವಿನಿಂದ ಕೂಡಿದ ಹಗ್ಗದ ಹಾಗೆ ಊದಿಕೊಂಡ ನರಗಳು, ವ್ಯಕ್ತಿಯ ದೇಹದ ಯಾವುದೇ ಭಾಗಗಳಲ್ಲಿ ತಿಳಿ ಬಿಳಿ ತಾಮ್ರದ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ, ಮಚ್ಚೆಗಳು ಕಂಡುಬAದಲ್ಲಿ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕರ ತೆರಳಿ ಪರೀಕ್ಷಿಸಿಕೊಳ್ಳಬೇಕು ಡಾ. ಆನಂದ್ ತಿಳಿಸಿದ್ದಾರೆ.