ಸೋಮವಾರಪೇಟೆ, ಫೆ. ೪: ಪ್ರಸ್ತುತ ಕುಶಾಲನಗರ ತಾಲೂಕು ವ್ಯಾಪ್ತಿಗೆ ಒಳಪಟ್ಟಿರುವ ಹಾರಂಗಿ ಕಾವೇರಿ ಮೀನುಗಾರರ ಸಹಕಾರ ಸಂಘವು ಬೈಲಾ ನಿಯಮಾನುಸಾರ ಕಾರ್ಯನಿರ್ವಹಿಸದೇ ಇರುವುದು ಹಾಗೂ ಹಣಕಾಸಿನ ವ್ಯವಹಾರಕ್ಕೆ ಸಂಬAಧಿಸಿದAತೆ ಪಾರದರ್ಶಕತೆ ಕಾಯ್ದುಕೊಳ್ಳದೇ ಇರುವುದು ಅಧಿಕಾರಿಗಳ ವರದಿಯಿಂದ ಬಯಲಾಗಿದೆ.

ಕಾವೇರಿ ಮೀನುಗಾರರ ಸಹಕಾರ ಸಂಘವು ಸಹಕಾರ ಕಾಯ್ದೆಯಡಿ ನೋಂದಣಿಯಾಗಿದ್ದು, ಇದರ ಕಾರ್ಯವೈಖರಿಯ ಬಗ್ಗೆ ಐಗೂರು ಗ್ರಾಮದ ಎ.ಪಿ. ಸುಬ್ಬಯ್ಯ ಅವರು ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ದೂರು ಸಲ್ಲಿಸಿದ್ದರು.

ಈ ದೂರಿನ ಹಿನ್ನೆಲೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪರಿಶೀಲಿಸಿ ವರದಿ ನೀಡುವಂತೆ ಸೋಮವಾರಪೇಟೆ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರನ್ವಯ ಸಹಕಾರ ಅಭಿವೃದ್ಧಿ ಅಧಿಕಾರಿಗಳು ತನಿಖೆ ನಡೆಸಿ ವರದಿ ಸಲ್ಲಿಸಿದ್ದು, ಇದರಲ್ಲಿ ಬೈಲಾದಂತೆ ಮೀನುಗಾರರ ಸಹಕಾರ ಸಂಘ ಕೆಲಸ ನಿರ್ವಹಿಸದೇ ಇರುವುದು ದೃಢಪಟ್ಟಿದೆ.

ಪ್ರಮುಖವಾಗಿ ಸುಬ್ಬಯ್ಯ ಅವರು ಮೀನುಗಾರರ ಸಹಕಾರ ಸಂಘದ ವಿರುದ್ಧ ೬ ಆರೋಪಗಳನ್ನು ಮಾಡಿದ್ದರು. ಬೈಲಾದಲ್ಲಿ ಸೇರದೇ ಇರುವ ಗ್ರಾಮಗಳಿಂದ ನಿರ್ದೇಶಕರುಗಳನ್ನು ಆಯ್ಕೆ ಮಾಡಿರುವುದು, ಬೈಲಾದಲ್ಲಿ ಸೇರದ ಗ್ರಾಮಗಳಿಂದ ಸಂಘಕ್ಕೆ ಸದಸ್ಯರನ್ನು ಸೇರಿಸಿಕೊಂಡಿರುವುದು, ಸಂಘದ ಕಚೇರಿ ಕಳೆದ ೬ ತಿಂಗಳಿನಿAದ ಬಾಗಿಲು ತೆರೆಯದೇ ಇರುವುದು, ಪ್ರತಿ ವರ್ಷದ ಲೆಕ್ಕಪರಿಶೋಧನೆಯಲ್ಲಿ ನಷ್ಟ ಮತ್ತು ನ್ಯೂನತೆಗಳಿಂದ ಕೂಡಿರುವುದು-ಇದಕ್ಕೆ ಅಧ್ಯಕ್ಷರು ಸಹಿ ಮಾಡದೇ ಇರುವುದು, ನೀಲಿಕ್ರಾಂತಿಯಲ್ಲಿ ಬಿಡುಗಡೆಯಾದ ಹಣಕ್ಕೆ ಯಾವುದೇ ಲೆಕ್ಕಪತ್ರ ಇಡದೇ ಹಣವನ್ನು ಖರ್ಚು ಮಾಡಿರುವುದು ಮತ್ತು ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಆರೋಪಗಳನ್ನು ಮಾಡಲಾಗಿತ್ತು.

ಈ ಮೇಲಿನ ಆರೋಪಗಳಿಗೆ ಸಂಬAಧಿಸಿದAತೆ ಸಹಕಾರ ಅಭಿವೃದ್ಧಿ ಅಧಿಕಾರಿಗಳು ತನಿಖೆ ನಡೆಸಿ ವರದಿ ಸಲ್ಲಿಸಿದ್ದು, ಮೇಲ್ನೋಟಕ್ಕೆ ಆರೋಪಗಳಿಗೆ ಪುಷ್ಠಿ ನೀಡುವ ಅಂಶಗಳನ್ನು ತಮ್ಮ ವರದಿಯಲ್ಲಿ ಬಹಿರಂಗ ಪಡಿಸಿದ್ದಾರೆ.

ವರದಿಯ ಸಾರಾಂಶ: ಸಂಘದ ಕಾರ್ಯಕ್ಷೇತ್ರವು ಹುಲುಗುಂದ, ಹಾರಂಗಿ ಪ್ರಾಜೆಕ್ಟ್, ಹೊಸಕೋಟೆ, ಹೆರೂರು, ಗರಗಂದೂರು, ಮಾದಾಪುರ, ನಾಕೂರು, ಶಿರಂಗಾಲ, ಮುಳ್ಳೂರು, ಚಿಕ್ಲಿಹೊಳೆ, ಕಂಬಿಬಾಣೆ, ನಂಜರಾಯಪಟ್ಟಣ, ಕುಶಾಲನಗರ, ಕೂಡ್ಲೂರು, ಕಣಿವೆ, ತೊರೆನೂರು, ಹೆಬ್ಬಾಲೆ, ಕಟ್ಟೆಪುರ, ಜನಾರ್ದನಹಳ್ಳಿ, ಮಾವಿನಹಳ್ಳಿ, ಚಿಕ್ಕಕುಂದ, ಹಿಪ್ಪುಗಳಲೆ, ನೀರುಗುಂದ, ಕುಶಾಲನಗರ ಹೋಬಳಿ, ಗೋಣಿಮರೂರು, ಆಲೂರುಸಿದ್ದಾಪುರ, ಗಣಗೂರು ಗ್ರಾ.ಪಂ. ವ್ಯಾಪ್ತಿಗೆ ಸೀಮಿತವಾಗಿದೆ.

ಸಂಘದ ಬೈಲಾವನ್ನು ಪರಿಶೀಲಿಸಿದ ಸಂದರ್ಭ ಮೊದಲನೇ ಪುಟ ಮಾತ್ರ ಸಂಘದಲ್ಲಿ ಲಭ್ಯವಿದ್ದು, ಈ ಬಗ್ಗೆ ಮುಖ್ಯ ಕಾರ್ಯದರ್ಶಿಯನ್ನು ವಿಚಾರಿಸಿದಾಗ ಬೈಲಾ ತಿದ್ದುಪಡಿಗಾಗಿ ಸಂಘದ ಅಧ್ಯಕ್ಷರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಗೆ ಸಲ್ಲಿಸಲು ಕ್ರಮವಹಿಸಿರುವುದಾಗಿ ತಿಳಿಸಿದ್ದು, ವಿಚಾರಣೆ ಸಂದರ್ಭ ಬೈಲಾ ಪ್ರತಿ ಸಂಘದಲ್ಲಿ ಲಭ್ಯವಿಲ್ಲ ಎಂದು ವರದಿ ನೀಡಿದ್ದಾರೆ. ಇದರೊಂದಿಗೆ ಸಂಘದ ಕಾರ್ಯವ್ಯಾಪ್ತಿಗೆ ಒಳಪಡದ ಹೊಸತೋಟ, ಯಡವಾರೆಗಳಿಂದ ಆಡಳಿತ ಮಂಡಳಿಗೆ ನೇಮಕ ಮಾಡಿಕೊಳ್ಳಲಾಗಿದೆ. ಇದು ಸಂಘದ ಬೈಲಾಕ್ಕೆ ವಿರುದ್ಧವಾಗಿದೆ. ಇದರೊಂದಿಗೆ ಸಂಘದ ಕಚೇರಿಯು ಪ್ರತಿ ದಿನ ಬಾಗಿಲು ತೆರೆಯದಿರುವುದು ಕಂಡುಬAದಿದೆ.

೨೦೨೨-೨೩ನೇ ಸಾಲಿನ ಲೆಕ್ಕಪರಿಶೋಧನೆ ನಡೆಸದಿರುವ ಬಗ್ಗೆ ಮುಖ್ಯಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ. ಸಂಘದ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರಿಗೆ ದಾಖಲಾತಿ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದು, ಸದರಿ ಲೆಕ್ಕಪರಿಶೋಧಕರನ್ನು ವಿಚಾರಿಸಿದ ಸಂದರ್ಭ ಯಾವುದೇ ದಾಖಲಾತಿ ನೀಡಿಲ್ಲ ಎಂದು ಮಾಹಿತಿಯಿತ್ತಿದ್ದಾರೆ.

ತಾ.೨೧.೦೯.೨೦೨೩ರಂದು ಸಂಘದ ಮಹಾಸಭೆ ನಡೆದಿದ್ದು, ಇದರಲ್ಲಿ ಹಾಜರಾತಿ ಬಿಟ್ಟರೆ ಬೇರೆ ಯಾವುದೇ ಅಜೆಂಡಾ ಇರುವುದಿಲ್ಲ ಮತ್ತು ಲೆಕ್ಕಪರಿಶೋಧನಾ ವರದಿ ಆಗದೇ ಇದ್ದರೂ ಸಹ ಮಹಾಸಭೆಯನ್ನು ನಡೆಸಿರುವುದು ಸಹಕಾರ ಕಾಯ್ದೆ ಮತ್ತು ಬೈಲಾಕ್ಕೆ ವಿರುದ್ಧವಾಗಿದೆ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಂಘದ ಮಾಸಿಕ ಸಭೆಗಳಲ್ಲೂ ಹಾಜರಾತಿ ವಿನಃ ಬೇರಿನ್ಯಾವುದೇ ಅಜೆಂಡಾ ಇಲ್ಲ. ಷೇರು ಪುಸ್ತಕವನ್ನು ಪರಿಶೀಲಿಸಿದ ಸಂದರ್ಭ ಷೇರು ಹಣ ಸ್ವೀಕೃತಿಯಾಗಿರುವ ಬಗ್ಗೆ ರಶೀದಿಗಳು ಇರುವುದಿಲ್ಲ. ಷೇರು ಹಣವು ಸಂಘಕ್ಕೆ ಜಮೆಯಾಗಿರುವ ಬಗ್ಗೆ ನಗದು ಪುಸ್ತಕದಲ್ಲಿ ಜಮೆಯಾದ ದಾಖಲೆಗಳು ಇರುವುದಿಲ್ಲ. ನಗದು ಪುಸ್ತಕಕ್ಕೆ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಹಿ ಮಾಡಿಲ್ಲ. ನಗದು ಪುಸ್ತಕ ಮತ್ತು ಪಾಸ್ ಪುಸ್ತಕಕ್ಕೂ ತಾಳೆ ಇರುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸಂಘದ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಯನ್ನು ಹೊಸದಾಗಿ ನೇಮಕ ಮಾಡಿಕೊಂಡಿದ್ದು, ಈ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯವಾಗಿರುವ ದಾಖಲೆಯಿಲ್ಲ. ಸಂಘದ ಸದಸ್ಯರು ಹಾರಂಗಿ ಅಣೆಕಟ್ಟೆಯಿಂದ ಮೀನು ಹಿಡಿದು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದು, ಮಾರಾಟ ಮಾಡಿದ ಹಣವನ್ನು ಸಂಘಕ್ಕೆ ಪಾವತಿಸಿರುವ ಬಗ್ಗೆ ನಗದು ಪುಸ್ತಕದಲ್ಲಿ ನಮೂದಿಸಿರುವುದಿಲ್ಲ ಮತ್ತು ಮಾರಾಟ ಮಾಡಿರುವ ಬಗ್ಗೆ ಎಲ್ಲೂ ದಾಖಲಾತಿಗಳು ಸಂಘದಲ್ಲಿ ಲಭ್ಯವಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಂಘದ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಲಾಗಿ ಸಂಘದ ಬೈಲಾಕ್ಕೆ ಅನುಗುಣವಾಗಿ ಹಾಗೂ ಸಹಕಾರ ಸಂಘಗಳ ಕಾಯ್ದೆ ಮತ್ತು ಕಾನೂನಿಗೆ ಅನುಗುಣವಾಗಿ ಯಾವುದೇ ಕೆಲಸ ಕಾರ್ಯಗಳು ನಿರ್ವಹಿಸದೆ ಇರುವುದು ಕಂಡುಬAದಿದೆ ಎಂದು ಒಟ್ಟಾರೆ ಅಭಿಪ್ರಾಯ ವ್ಯಕ್ತಪಡಿಸಿರುವ ಸಹಕಾರ ಅಭಿವೃದ್ಧಿ ಅಧಿಕಾರಿಗಳು, ಈ ಬಗೆಗಿನ ದಾಖಲಾತಿಗಳೊಂದಿಗೆ ವರದಿಯನ್ನು ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಸಲ್ಲಿಸಿದ್ದಾರೆ.