ಚೆಯ್ಯಂಡಾಣೆ/ನಾಪೋಕ್ಲು, ಫೆ. ೪: ನಿರ್ಬಂಧದ ನಡುವೆ ಯೂ ಜಲಪಾತಕ್ಕಿಳಿದು ಮತ್ತೋರ್ವ ಯುವಕ ಸಾವನ್ನಪ್ಪಿರುವ ಘಟನೆ ಸಮೀಪದ ಚೆಯ್ಯಂ ಡಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರದಲ್ಲಿರುವ ಜಲಪಾತದಲ್ಲಿ ನಡೆದಿದೆ.
ನೀರಿನ ಸುಳಿಗೆ ಸಿಲುಕಿ ಮಟ್ಟನ್ನೂರು ನಿವಾಸಿ ಮಹಮ್ಮದ್ ಅಶ್ರಫ್ ಎಂಬವರ ಪುತ್ರ ರಾಶೀದ್ (೨೫) ಮೃತಪಟ್ಟ ಯುವಕ.
ಕೇರಳದ ಕಣ್ಣೂರಿನಿಂದ ರಾಶೀದ್, ಮಹಮ್ಮದ್ ಶಾಲಿ ಹಾಗೂ ಇಬ್ಬರು ಯುವತಿಯರು ಭಾನುವಾರ ಬೆಳಿಗ್ಗೆ ಚೇಲಾವರ ಜಲಪಾತ ವೀಕ್ಷಣೆಗೆಂದು ಬಂದಿದ್ದಾರೆ. ಯುವತಿ ಯರು ಕ್ಯಾಲಿಕಟ್, ಯುವಕರು ಮಟ್ಟನೂರಿನಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಸುಡು ಬಿಸಿಲಿದ್ದ ಕಾರಣ, ರಶೀದ್ ಜಲಪಾತದ ಕೆಳಭಾಗದ ಹೊಂಡದಲ್ಲಿ ಸ್ನಾನ ಮಾಡಲು ತೆರಳಿದ ಸಂದರ್ಭ ಸುಳಿಗೆ ಸಿಲುಕಿ ಕಣ್ಮರೆಯಾಗಿದ್ದಾನೆ. ತಕ್ಷಣ ಯುವಕರು ಸ್ಥಳೀಯರ ನೆರವಿಗೆ ಪ್ರಯತ್ನಿಸಿದ್ದು, ಸ್ಥಳೀಯರು ೧೧೨ ತುರ್ತು ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ ಭಾಗಮಂಡಲದ ಹರ್ಷವರ್ಧನ್ ನೀರಿಗಿಳಿದು ಮೃತದೇಹವನ್ನು ಹೊರತೆಗೆಯಲು ಪ್ರಯತ್ನಿಸಿದರಾದರೂ ಫಲಪ್ರದ ವಾಗಲಿಲ್ಲ. ಬಳಿಕ ಮಡಿಕೇರಿಯ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಮಹಮ್ಮದ್, ನಂಜಪ್ಪ ಮತ್ತು ಶಾಹಿದ್ ಸ್ಥಳಕ್ಕೆ ಧಾವಿಸಿ ಕಾರ್ಯಾ ಚರಣೆ ನಡೆಸಿ ಮೃತದೇಹವನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ.
೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರಕರಣದ ಬಗ್ಗೆ ಮೃತರ ಪೋಷಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನಾಪೋಕ್ಲು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಶ್ರೀಧರ್, ಸಿಬ್ಬಂದಿಗಳಾದ ಪ್ರದೀಪ್ ಮತ್ತು ಶರತ್ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಚೇಲಾವರ ಫಾಲ್ಸ್ನಲ್ಲಿ ಪ್ರವಾಸಿಗರಿಗೆ ಯಾವುದೇ ಭದ್ರತೆ ಇಲ್ಲ. ಈ ಕಾರಣದಿಂದ ಆಗಿಂದಾಗ್ಗೆ ಈ ರೀತಿ ದುರ್ಘಟನೆಗಳು ಸಂಭವಿಸುತ್ತಿವೆ. ಇಲ್ಲಿಗೆ ಸಂಪರ್ಕ ಕಲ್ಪಿಸಲು ಸೂಕ್ತ ರಸ್ತೆ ವ್ಯವಸ್ಥೆಯೂ ಇಲ್ಲ. ತೂಗುಸೇತುವೆ ನಿರ್ಮಾಣ ಮಾಡಬೇಕೆಂಬ ಬೇಡಿಕೆಗೆ ಯಾವುದೇ ಸ್ಪಂದನವೂ ದೊರೆತಿಲ್ಲ.
ಬೇಲಿ ಅಳವಡಿಸಿ ಫಾಲ್ಸ್ಗೆ ಪ್ರವೇಶ ನಿರ್ಬಂಧ ವಿಧಿಸಿದ್ದರು. ಪ್ರವಾಸಿಗರು ಬೇಲಿಯನ್ನು ನುಸುಳಿ ಒಳ ಪ್ರವೇಶಿಸುತ್ತಾರೆ. ಬೇಲಿಗೆ ಜಾಲರಿ ಹಾಕಬೇಕೆಂಬ ಬೇಡಿಕೆಯೂ ಬೇಡಿಕೆಯಾಗಿಯೇ ಉಳಿದಿದೆ. ಇನ್ನೊಂದೆಡೆ ರಕ್ಷಣಾ ವ್ಯವಸ್ಥೆ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮ ಪಂಚಾಯಿತಿ ಈ ಹಿಂದೆಯೇ ನಿರ್ಣಯ ಮಾಡಿತ್ತು. ಕಬ್ಬೆ ಬೆಟ್ಟಕ್ಕೆ ಪ್ರವಾಸಕ್ಕೆಂದು ಬರುವ ಪ್ರವಾಸಿಗರು ಚೇಲಾವರ ಜಲಪಾತಕ್ಕೂ ಬರುತ್ತಾರೆ. ಕೆಲವು ಸಮಯಗಳ ಹಿಂದೆ ಜಲಪಾತದ ಬಳಿ ಮುಖ್ಯರಸ್ತೆಗೆ ಗೇಟ್ ನಿರ್ಮಿಸಿ ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಆದರೆ, ಪ್ರಸ್ತುತ ಜಲಪಾತದಲ್ಲಿ ನೀರು ಕ್ಷೀಣಿಸಿದ್ದು ಈ ಪ್ರದೇಶ ಮೃತ್ಯುತಾಣವಾಗಿ ಬದಲಾಗಿದೆ. ಚೇಲಾವರ ಜಲಪಾತವನ್ನು ಮರೆತಿರುವ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ಸದಸ್ಯ ಸುಬೈರ್, ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯಿತಿ ಸದಸ್ಯ ಬಶೀರ್ ಪೊಯಕ್ಕರೆ ಹಾಗೂ ಗ್ರಾಮಸ್ಥರು ಹಾಜರಿದ್ದರು.
-ಚಿತ್ರ, ವರದಿ : ಸದಾನಂದ/ಅಶ್ರಫ್
೨೪ ಮಂದಿಯ ಮರಣ
ಕಳೆದ ಹಲವು ವರ್ಷಗಳಿಂದ ಈ ಜಲಪಾತದಲ್ಲಿ ಸುಮಾರು ೨೪ ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಇದರ ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿಯಿAದ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಈ ಜಲಪಾತದ ಮೃತ್ಯುಕೂಪಕ್ಕೆ ಶಾಶ್ವತ ಪರಿಹಾರವನ್ನು ಮಾಡಬೇಕಾಗಿದೆ. ಇದಕ್ಕೆ ಜಿಲ್ಲಾಡಳಿತ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈಗಾಗಲೇ ಜಲಪಾತದ ಅವ್ಯವಸ್ಥೆ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೇವೆ. ಪ್ರವಾಸೋದ್ಯಮ ಇಲಾಖೆಯಿಂದ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದ್ದಾರೆ. ಆದಷ್ಟು ಶೀಘ್ರ ಜಲಪಾತದಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಿ ಮುಂದೆ ಜೀವಹಾನಿ ಆಗದ ರೀತಿ ಕ್ರಮ ಕೈಗೊಳ್ಳಬೇಕಾಗಿದೆ.
-ಕೋಡಿರ ವಿನೋದ್ ನಾಣಯ್ಯ, ಗ್ರಾ.ಪಂ. ಉಪಾಧ್ಯಕ್ಷ