ಕುಶಾಲನಗರ, ಫೆ. ೫: ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಅಧ್ಯಯನ ನಡೆಸುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ಕಲಾವಿದ ವೇಣೂರು ಅನೀಶ್ ಸಲಹೆ ನೀಡಿದರು. ಕುಶಾಲನಗರ ವಿವೇಕಾನಂದ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮೋಜು, ಮಸ್ತಿ ಬಿಟ್ಟು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಪರೀಕ್ಷೆ ಸಮೀಪಿಸುತ್ತಿದ್ದು ಹೆಚ್ಚಿನ ಆದ್ಯತೆ ನೀಡಬೇಕು. ಸಮಯ ವ್ಯರ್ಥ ಮಾಡದೆ ತಮ್ಮ ಬದುಕು ಕಟ್ಟಿಕೊಳ್ಳಲು ನಿರಂತರವಾಗಿ ಶ್ರಮಿಸಬೇಕು ಎಂದರು. ಪ್ರಾಂಶುಪಾಲೆ ಕ್ಲಾರಾ ರೇಷ್ಮಾ ಮಾತನಾಡಿ, ಯಾರಿಂದಲೂ ಕದಿಯಲಾಗದ, ಕಸಿಯಲಾಗದ ಸಂಪತ್ತು ಎಂದರೆ ವಿದ್ಯೆ ಮಾತ್ರ ವಿದ್ಯೆಯೊಂದಿಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅನೀಶ್ ಹಾಸ್ಯದ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಸಂಸ್ಥೆ ವತಿಯಿಂದ ಕಲಾವಿದ ಅನೀಶ್ ವೇಣೂರು ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಕೋಶಾಧಿಕಾರಿ ಎನ್.ಎನ್. ನಂಜಪ್ಪ, ಅಧೀಕ್ಷಕ ಮಹೇಶ್ ಅಮೀನ್ ಇದ್ದರು.