ಪಾಲಿಬೆಟ್ಟ, ಫೆ. ೪: ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ನರೇಗಾ ದಿವಸ್ ಆಚರಿಸಲಾಯಿತು.
ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೇರಿರ ಅರುಣ್ ಕುಮಾರ್ ಮಾತನಾಡಿ, ಸಮಗ್ರ ಗ್ರಾಮೀಣಾಭಿವೃದ್ಧಿಗೆ ನರೇಗಾ ಯೋಜನೆಯು ವರದಾನವಾಗಿದೆ. ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ಗ್ರಾಮಗಳಲ್ಲಿ ನೈರ್ಮಲ್ಯವನ್ನು ಸಾಧಿಸುವ ನಿಟ್ಟಿನಲ್ಲಿ ನರೇಗಾ ಯೋಜನೆಯಡಿ ಪ್ರತಿ ಮನೆಗೂ ವ್ಯವಸ್ಥಿತ ಬಚ್ಚಲು ಗುಂಡಿ ನಿರ್ಮಿಸಲಾಗುತ್ತಿದೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಂಡು ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಮಾತನಾಡಿ, ನರೇಗಾ ಯೋಜನೆಯು ಕೇವಲ ಕೂಲಿಗಾಗಿ ಕೆಲಸ ಮಾಡುವ ಯೋಜನೆ ಅಲ್ಲ, ಈ ಯೋಜನೆಯಡಿ ಪ್ರತಿ ಗ್ರಾಮವನ್ನು ಅಭಿವೃದ್ಧಿಗೊಳಿಸುವ ಮೂಲಕ ಗ್ರಾಮ ಪಂಚಾಯಿತಿಯನ್ನು ಮಾದರಿಯಾಗಿ ರೂಪಿಸಬಹುದು ಎಂದರು ನರೇಗಾ ಯೋಜನೆಯಡಿ ನೂರು ದಿವಸ ಕೆಲಸ ಮಾಡಿದ ಅಕುಶಲ ಕೆಲಸಗಾರರಿಗೆ ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಕಾವೇರಿ, ಸದಸ್ಯರಾದ ವಿಜು, ಶಿವಲಿಂಗ, ಮಂಜುಳ, ಪಂಚಾಯಿತಿ ಕಾರ್ಯದರ್ಶಿ ಮುತ್ತುರಾಜ್, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.