ಶನಿವಾರಸಂತೆ, ಫೆ. ೩: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಮಾರುಕಟ್ಟೆಯನ್ನು ಆಯೋಜಿಸಲಾಗಿತ್ತು. ೧ನೇ ತರಗತಿಯಿಂದ ೭ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಸಂತೆ ಮಾರುಕಟ್ಟೆಯಲ್ಲಿ ಪಾಲ್ಗೊಂಡಿದ್ದರು.
ಮುಖ್ಯಶಿಕ್ಷಕ ವಿಶ್ವನಾಥ್ ಮಕ್ಕಳ ಸಂತೆ ಮಾರುಕಟ್ಟೆಗೆ ಚಾಲನೆ ನೀಡಿ, ಮಾತನಾಡಿ, ವಿದ್ಯಾರ್ಥಿಗಳು ಪಠ್ಯದಲ್ಲಿ ಮಾತ್ರವಲ್ಲ; ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಮಕ್ಕಳಲ್ಲಿ ವ್ಯವಹಾರ ಜ್ಞಾನವನ್ನು ಹೆಚ್ಚಿಸಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಂತೆ ಮಾರುಕಟ್ಟೆ ಆಯೋಜಿಸಲಾಗಿದೆ ಎಂದರು. ವಿದ್ಯಾರ್ಥಿ ಗಳು ತಾವು ಮನೆಯ ಅಂಗಳ ಹಾಗೂ ಹಿತ್ತಲಲ್ಲಿ ಬೆಳೆದಿದ್ದ ವಿವಿಧ ಬಗೆಯ ಸೊಪ್ಪುಗಳು, ತರಕಾರಿಗಳು, ಹಣ್ಣುಗಳು ಹಾಗೂ ಮನೆಯಲ್ಲೆ ತಯಾರಿಸಿದ ತಿಂಡಿ-ತಿನಿಸುಗಳನ್ನು ತಂದಿದ್ದು ಅಂಗಡಿಗಳನ್ನು ತೆರೆದು ಉತ್ಸಾಹದಿಂದ ವ್ಯಾಪಾರ ಮಾಡಿದರು. ಪೋಷಕರು ಗ್ರಾಹಕರಾಗಿ ಪಾಲ್ಗೊಂಡು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚರಣ್ ಕುಮಾರ್, ಉಪಾಧ್ಯಕ್ಷೆ ರಾಧಾ, ಸದಸ್ಯರು, ಹಿರಿಯ ಶಿಕ್ಷಕಿ ಜಾಕ್ಲಿನ್, ಸಹ ಶಿಕ್ಷಕಿಯರಾದ ಜಸಿಂತಾ, ರಜಿಯಾ, ಮಮತಾ, ರಾಧಾ, ಲಿಪಿಕಾ, ದೈಹಿಕ ಶಿಕ್ಷಣ ಶಿಕ್ಷಕಿ ಸುನಂದಾ ಹಾಜರಿದ್ದರು.