ಕೂಡಿಗೆ, ಫೆ. ೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಸಮೀಪದ ಕಾಳಿದೇವನ ಹೊಸೂರು ಗ್ರಾಮದಲ್ಲಿ ಈಗಾಗಲೇ ನಿವೇಶನ ರಹಿತರಿಗೆ ನಿವೇಶನ ನೀಡುವ ಉದ್ದೇಶದಿಂದ ಕಾಯ್ದಿರಿಸಲಾಗಿದ್ದ ಜಾಗದ ಖಾತೆಯನ್ನು ಸರಿಯಾದ ರೀತಿಯಲ್ಲಿ ಗ್ರಾಮ ಪಂಚಾಯಿತಿ ಅಥವಾ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರ ಹೆಸರಿಗೆ ಸೇರ್ಪಡೆ ಮಾಡದೆ ಅರಣ್ಯ ಇಲಾಖೆಯ ಹೆಸರಿಗೆ ಸೇರ್ಪಡೆ ಮಾಡಿರುವುದನ್ನು ರದ್ದುಗೊಳಿಸಿ ನಿವೇಶನ ರಹಿತರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕಲ್ಪಿಸುವಂತೆ ಈ ವ್ಯಾಪ್ತಿಯ ನೂರಾರು ಗ್ರಾಮಸ್ಥರ ಒತ್ತಾಯವಾಗಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಿದೇವನ ಹೊಸೂರು ಗ್ರಾಮದಲ್ಲಿರುವ ಸರ್ವೆ ನಂಬರ್ ೮/೩ ರಲ್ಲಿ ೪ ಎಕರೆಗಳಷ್ಟು ಪ್ರದೇಶದ ಜಾಗವನ್ನು ಸಮತಟ್ಟು ಮಾಡಿ ಹುದುಗೂರು, ಕಾಳಿದೇವನ ಹೊಸೂರು, ಮದಲಾಪುರ, ಶಿರಹೊಳಲು ಗ್ರಾಮಗಳ ನಿವೇಶನ ರಹಿತರಿಗೆ ನಿವೇಶನ ನೀಡುವ ಉದ್ದೇಶದಿಂದ ಕಾಯ್ದಿರಿಸಲಾಗಿತ್ತು. ಆದರೆ ಈ ಜಾಗದ ಖಾತೆಯು ಅರಣ್ಯ ಇಲಾಖೆಗೆ ಬದಲಾವಣೆ ಆಗಿರುವ ಹಿನ್ನೆಲೆಯಲ್ಲಿ ನಿವೇಶನ ಮಂಜೂರು ಆಗಿರುವ ನೂರಾರು ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಹೆಚ್ಚು ಬುಡಕಟ್ಟು ಜನಾಂಗದವರು, ವಸತಿ ರಹಿತರು ವಾಸಿಸುತ್ತಿದ್ದಾರೆ. ಆದರೆ ಆ ಜನಾಂಗದವರು ಸೇರಿದಂತೆ ವಿವಿಧ ವರ್ಗದವರು ಮನೆಗಳ ನಿರ್ಮಾಣಕ್ಕೆ ಮುಂದಾಗುವ ಸಂದರ್ಭದಲ್ಲಿ ಇದಿಗ ಅಡೆತಡೆಗಳು ಉಂಟಾಗುತ್ತಿವೆ.