ಕಣಿವೆ, ಫೆ. ೨ : ಮಳೆಗಾಲದ ದಿನಗಳಲ್ಲಿ ಕಾವೇರಿ ನದಿಯ ಪ್ರವಾಹದಿಂದ ಸಂತ್ರಸ್ತರಾಗುತ್ತಲೇ ಇರುವ ನದಿ ತೀರದ ನಿವಾಸಿಗಳು ಕುಶಾಲನಗರದ ಕಾವೇರಿ ನೀರಾವರಿ ನಿಗಮದ ಅಧೀಕ್ಷಕರ ಕಚೇರಿ ಬಳಿ ಬಂದು ಕಾಮಗಾರಿಗೆ ತಡೆ ಒಡ್ಡುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಕಾವೇರಿ ನದಿಯ ಪ್ರವಾಹದಿಂದ ಮುಳುಗಡೆಯಾಗುವ ನದಿಯಂಚಿನ ಉದ್ದಕ್ಕೂ ತಡೆಗೋಡೆ ನಿರ್ಮಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಹೋರಾಟ ಮಾಡಿದ್ದರ ಫಲವಾಗಿ ಸರ್ಕಾರ ಬಿಡುಗಡೆ ಮಾಡಿರುವ ಅನುದಾನದಲ್ಲಿ ನಡೆಯುತ್ತಿರುವ ತಡೆಗೋಡೆ ಕಾಮಗಾರಿಗೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಕಾಮಗಾರಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಮುಂಬರುವ ಮಳೆಗಾಲದ ಒಳಗೆ ತಡೆಗೋಡೆ ಕಾಮಗಾರಿ ಪೂರ್ಣಗೊಳಿಸಲೇ ಬೇಕಿರುವ ಕಾರಣ ಕಾಮಗಾರಿಗೆ ಅಡ್ಡಿಮಾಡುತ್ತಿರುವ ಮಂದಿಯ ವಿರುದ್ಧ ದೂರು ದಾಖಲಿಸಬೇಕೆಂದು ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ದೇವೇಗೌಡ ಅವರಲ್ಲಿ ನಿವಾಸಿಗಳು ಆಗ್ರಹಿಸಿದರು.

ಬಳಿಕ ಕುಶಾಲನಗರದ ತಹಶೀಲ್ದಾರ್ ಕಚೇರಿ ಬಳಿ ಬಂದ ನಿವಾಸಿಗಳು ತಹಶೀಲ್ದಾರರ ಬಳಿಯೂ ಅಹವಾಲು ಹೇಳಿದರು. ನಂತರ ನಿವಾಸಿಗಳಿಗೆ ಮಾಹಿತಿ ನೀಡಿದ ತಹಸೀಲ್ದಾರ್ ಕಿರಣ್ ಗೌರಯ್ಯ, ಸರ್ಕಾರದ ಅನುದಾನದಲಿನಡೆಯುತ್ತಿರುವ ಕಾಮಗಾರಿಗೆ ಅಡ್ಡಿಪಡಿಸುವ ವ್ಯಕ್ತಿಗಳ ವಿರುದ್ಧ ಸಂಬAಧಿಸಿದ ಇಲಾಖಾ ಇಂಜಿನಿಯರ್‌ಗಳು ಪೊಲೀಸರಿಗೆ ದೂರು ನೀಡಿ ಸಮಸ್ಯೆ ಬಗೆಹರಿಸಬೇಕೇ ವಿನಃ, ನಿವಾಸಿಗಳು ಬರುವ ಅಗತ್ಯವಿಲ್ಲ. ಸಂಬAಧಿಸಿದ ಇಲಾಖಾ ಮುಖ್ಯಸ್ಥರನ್ನು ಕರೆದು ಮಾತನಾಡುವುದಾಗಿ ಹೇಳಿದರು.

ಬಳಿಕ ‘ಶಕ್ತಿ’ ಯೊಂದಿಗೆ ಮಾತನಾಡಿದ ಮುಳ್ಳುಸೋಗೆಯ ಕುವೆಂಪು ಬಡಾವಣೆ ಹಾಗೂ ಶ್ರೀನಿಧಿ ಬಡಾವಣೆಯ ನಿವಾಸಿಗಳು, ನಾವು ಮಳೆಗಾಲದಲ್ಲಿ ಅನುಭವಿಸುವ ನರಕಯಾತನೆಯಿಂದ ಹೊರಬರಬೇಕಾದರೆ ನದಿಯ ಉದ್ದಕ್ಕೂ ತಡೆಗೋಡೆ ನಿರ್ಮಾಣವಾಗಲೇ ಬೇಕಿದೆ. ಕುವೆಂಪು ಬಡಾವಣೆಯ ನದಿ ದಂಡೆಯಲ್ಲಿನ ತಡೆಗೋಡೆ ಕಾಮಗಾರಿಗೆ ೪ ಕೋಟಿ ಹಾಗೂ ಸಾಯಿ ಬಡಾವಣೆಯ ನದಿ ದಂಡೆ ತಡೆಗೋಡೆಗೆ ೨ ಕೋಟಿ ರೂ ಬಿಡುಗಡೆಯಾಗಿದೆ. ಆದರೆ ಕೆಲವರು ಕಾಮಗಾರಿಯನ್ನು ತಪ್ಪಿಸಬೇಕೆಂದು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.್ಲ