ಸೋಮವಾರಪೇಟೆ, ಫೆ. ೩: ತಾಲೂಕಿನ ಕುಡಿಗಾಣ ಮತ್ತು ಕೊತ್ನಳ್ಳಿ ಗ್ರಾಮಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರಕ್ಕೆ ಶಾಸಕ ಡಾ. ಮಂಥರ್ ಗೌಡ ಚಾಲನೆ ನೀಡಿದರು.
ಗ್ರಾಮೀಣ ಭಾಗಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ಈಗ ಈಡೇರಿದ್ದು ಗ್ರಾಮಸ್ಥರು ಸಂಭ್ರಮಿಸಿದರು. ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಆಗಮಿಸಿದ ಗ್ರಾಮಸ್ಥರು ಬಸ್ಗೆ ಪೂಜೆ ಸಲ್ಲಿಸಿ, ಅದೇ ಬಸ್ನಲ್ಲಿ ಶಾಸಕರೊಂದಿಗೆ ತಮ್ಮ ಊರಿಗೆ ತೆರಳಿದರು.
ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಮತ್ತು ಪದಾಧಿಕಾರಿಗಳು, ಶಾಸಕರು ಹಾಗೂ ಸಾರಿಗೆ ಸಚಿವರಿಗೂ ಮನವಿ ಸಲ್ಲಿಸಿದ್ದರು.
ಪ್ರತಿದಿನ ಬೆಳಿಗ್ಗೆ ೬.೩೦ಕ್ಕೆ ಕುಶಾಲನರದಿಂದ ಹೊರಟು ಸೋಮ ವಾರಪೇಟೆ ಬಸ್ ನಿಲ್ದಾಣ ತಲುಪಿ ೭.೪೦ಕ್ಕೆ ಸೋಮವಾರಪೇಟೆಯಿಂದ ಕೂಡುರಸ್ತೆ, ಯಡೂರು, ಶಾಂತಳ್ಳಿ, ಕನ್ನಳ್ಳಿಕಟ್ಟೆ, ಜಕ್ಕನಳ್ಳಿ, ಕೊತ್ತನಳ್ಳಿ, ಕುಡಿಗಾಣ ಗ್ರಾಮಕ್ಕೆ ತೆರಳಿ, ಅದೇ ಮಾರ್ಗವಾಗಿ ವಾಪಾಸ್ಸು ಸೋಮ ವಾರಪೇಟೆ ತಲುಪಿ, ೧೦ ಗಂಟೆಗೆ ಸೋಮವಾರಪೇಟೆಯಿಂದ ಹೊರಟು ಕೋವರ್ಕೊಲ್ಲಿ, ಕೂಡಿಗೆ, ಕುಶಾಲನಗರ ಮಾರ್ಗವಾಗಿ ಮೈಸೂರು ತಲುಪಲಿದೆ. ಸಂಜೆ ೪ ಗಂಟೆಗೆ ಸೋಮವಾರಪೇಟೆಯಿಂದ ಕುಡಿಗಾಣ ತಲುಪಿ, ವಾಪಾಸ್ಸು ಸಂಜೆ ೬ ಗಂಟೆಗೆ ಸೋಮವಾರಪೇಟೆ ತಲುಪಲಿದೆ.
ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ಗ್ರಾಮೀಣ ಜನರ ಬೇಡಿಕೆಯನ್ನು ಈಡೇರಿಸಿರುವ ತೃಪ್ತಿ ಇದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು, ಕೂಲಿ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಮಾರ್ಗವನ್ನು ಜೋಡಿಸಿದ್ದೇವೆ ಎಂದು ಶಾಸಕ ಮಂಥರ್ ಗೌಡ ಹೇಳಿದರು. ಕುಶಾಲನಗರ ಡಿಪೋ ಪ್ರಾರಂಭವಾದ ಮೇಲೆ ಇನ್ನು ೮೦ ಬಸ್ಗಳು ಸಿಗುತ್ತವೆ. ನಂತರ ಪ್ರತಿ ಗ್ರಾಮಕ್ಕೂ ಬಸ್ ಸಂಚರಿಸುವ ಅವಕಾಶ ಸಿಗಲಿದೆ ಎಂದು ಹೇಳಿದರು.